ಉತ್ತರ ಕನ್ನಡದಲ್ಲಿ ಪ್ರವಾಸೋದ್ಯಮ ಚಟುವಟಿಕೆ ಚುರುಕು

ಕಾರವಾರ, ನ. ೯- ರಾಜ್ಯದಲ್ಲಿ ಅದರಲ್ಲೂ ಉತ್ತರಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಇಳಿಮುಖವಾಗುತ್ತಿರುವುದು ಪ್ರವಾಸೋಧ್ಯಮ ಚಟುವಟಿಕೆಗಳ ಆರಂಭವಾಗುವಂತಾಗಿದೆ.
ಕೊರೊನಾ ಕಾರಣದಿಂದ ಸ್ಥಗಿತಗೊಂಡಿದ್ದ ಪ್ರವಾಸೋದ್ಯಮ ಚಟುವಟಿಕೆಗಳು ಉತ್ತರಕನ್ನಡ ಜಿಲ್ಲೆಯಲ್ಲಿ ಈಗ ಚೇತರಿಕೆ ಕಾಣುತ್ತಿವೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಎರಡು ವಾರದಿಂದ ಇಳಿಕೆಯಾಗುತ್ತಿದ್ದು, ಪ್ರತಿದಿನ ಸೋಂಕು ಪ್ರಕರಣಗಳು ದೃಢಪಡುವುದು ೧೦ ಮತ್ತು ೨೦ ರ ಆಸುಪಾಸಿನಲ್ಲಿವೆ. ಹಾಗಾಗಿ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳು ಚುರುಕುಗೊಂಡಿವೆ.
ಕೊರೊನಾ ಸೋಂಕು ಪ್ರಕರಣಗಳು ಇಳಿಮುಖವಾಗುತ್ತಿದ್ದಂತೆಯೇ ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳಾದ ದಾಂಡೇಲಿ, ಗೋಕರ್ಣ, ಮುರುಡೇಶ್ವರ ಸೇರಿದಂತೆ ವಿವಿಧೆಡೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಿದ್ದಾರೆ. ಅದರಲ್ಲೂ ವಾರಾಂತ್ಯದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದು, ಜಿಲ್ಲೆಯ ರೆಸಾರ್ಟ್‌ಗಳು, ಹೋಂ ಸ್ಟೇಗಳು ಪ್ರವಾಸಿಗರಿಂದ ತುಂಬಿ ತುಳುಕುತ್ತಿವೆ.
ಉತ್ತರಕನ್ನಡ ಜಿಲ್ಲೆಯ ಕಡಲ ತೀರದಲ್ಲಿ ಜಲಕ್ರೀಡೆಗಳು ಆರಂಭವಾಗಿದ್ದು, ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಜಲಕ್ರೀಡೆಗಳಲ್ಲೂ ಪಾಲ್ಗೊಳ್ಳುತ್ತಿದ್ದಾರೆ.
ಕೊರೊನಾ ಸೋಂಕು ಕಡಿಮೆಯಾಗಿ ಪ್ರವಾಸೋದ್ಯಮ ಚೇತರಿಸಿಕೊಂಡಿರುವುದು ಸ್ಥಳೀಯರಿಗೆ ಸ್ವಲ್ಪ ಮಟ್ಟಿನ ನಿರಾಳತೆ ತಂದಿದೆ.
ಪ್ರವಾಸೋಧ್ಯಮ ತಾಣಗಳ ಜತೆಗೆ ಜಿಲ್ಲೆಯ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುತ್ತಿರುವವರ ಸಂಖ್ಯೆಯೂ ಹೆಚ್ಚಿದೆ.
ವಾರಾಂತ್ಯಗಳಲ್ಲಿ ದೇವಾಲಯಗಳಲ್ಲಿ ಹೆಚ್ಚಿನ ಜನದಟ್ಟಣೆ ಕಾಣಬಹುದಾಗಿದೆ.