ಉತ್ತರಿಸಲು ತಡವರಿಸಿದ ಎಂಟಿಬಿ

ಬೆಂಗಳೂರು, ಮಾ. ೨೩- ಪ್ರಶ್ನೆ ಓದಬೇಡಿ, ಉತ್ತರ ಕೊಡಿ ಸಭಾನಾಯಕರೇ ಸಚಿವರಿಗೆ ಸರಿಯಾದ ಉತ್ತರ ಕೊಡಲು ಹೇಳಿ ಎಂದು ಸಭಾಪತಿ ಬಸವರಾಜಹೊರಟ್ಟಿ ಅವರು ಪೌರಾಡಳಿತ ಸಚಿವ ಎಂ.ಟಿ.ಬಿ. ನಾಗರಾಜ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಘಟನೆ ವಿಧಾನಪರಿಷತ್‌ನಲ್ಲಿಂದು ನಡೆಯಿತು.
ಜೆಡಿಎಸ್‌ನ ಹೆಚ್.ಎಂ. ರಮೇಶ್‌ಗೌಡ ಅವರು ಕೇಳಿದ ಪ್ರಶ್ನೆಗೆ ಸಚಿವ ಎಂ.ಟಿ.ಬಿ. ನಾಗರಾಜ್ ಅವರು, ಮತ್ತೆ ಪ್ರಶ್ನೆ ಓದಲು ಮುಂದಾಗುತ್ತಿದ್ದಂತೆ, ಮಧ್ಯ ಪ್ರವೇಶಿಸಿದ ಸಭಾಪತಿ ಬಸವರಾಜಹೊರಟ್ಟಿ ಅವರು, ಸದಸ್ಯರು ಪ್ರಶ್ನೆ ಕೇಳಿದ್ದಾರೆ ನೀವು ಪ್ರಶ್ನೆ ಓದುವುದನ್ನು ಬಿಟ್ಟು ಉತ್ತರ ಕೊಡಿ ಎಂದು ಸಚಿವರಿಗೆ ಸೂಚಿಸಿದರು.
ಆಗ ಸಚಿವ ಎಂ.ಟಿ.ಬಿ. ನಾಗರಾಜು, ಈಗಾಗಲೇ ಉತ್ತರ ನೀಡಿದ್ದೇನೆ ಎಂದು ಹೇಳಿದರು.
ಈ ಹಂತದಲ್ಲಿ ಎದ್ದು ನಿಂತ ಹೆಚ್.ಎಂ. ರಮೇಶ್‌ಗೌಡ, ನಗರ ಸ್ಥಳೀಯ ಸಂಸ್ಥೆಗಳಲ್ಲಿ ತ್ಯಾಜ್ಯ ಸಂಗ್ರಹಣೆಯಲ್ಲಿ ಕೇಳಲಾದ ಪ್ರಶ್ನೆಗೆ ನೀವು ಉತ್ತರವನ್ನೇ ನೀಡಿಲ್ಲ. ಬೇರೆ ಇನ್ನೆನೋ ಹೇಳುತ್ತಿದ್ದೀರಿ ಎಂದರು.
ಮಧ್ಯ ಪ್ರವೇಶಿಸಿದ ಬೋಜೇಗೌಡ ಅವರು, ಸಭಾಪತಿಗಳು ಸರ್ಕಾರದ ವಿರುದ್ಧ ಚಾಟಿ ಬೀಸಿ ಸಚಿವರು ಸರಿಯಾಗಿ ಉತ್ತರ ನೀಡುವಂತೆ ಸೂಚಿಸಬೇಕು ಎಂದು ಸಲಹೆ ನೀಡಿದರು.
ಆಗ ಸಭಾಪತಿ ಬಸವರಾಜಹೊರಟ್ಟಿ ಅವರು ಸಭಾನಾಯಕ ಕೋಟಾಶ್ರೀನಿವಾಸಪೂಜಾರಿ ಅವರಿಗೆ, ಸಚಿವರಿಗೆ ಸರಿಯಾದ ಉತ್ತರ ನೀಡಲು ಹೇಳಿ ಎಂದು ಸೂಚನೆ ನೀಡಿದರು.
ಬಳಿಕ ಉತ್ತರ ನೀಡಿದ ಎಂ.ಟಿ.ಬಿ. ನಾಗರಾಜು, ರಾಜ್ಯದ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಲ್ಲಿ ತ್ಯಾಜ್ಯ ಸಂಸ್ಕರಣೆ ನಿಯಮ ಪಾಲನೆಯಾಗುವುದನ್ನು ಖಾತರಿಪಡಿಸಿಕೊಳ್ಳುವ ನಿಟ್ಟಿನಲ್ಲಿ ರಾಜ್ಯದ ೨೧೯ ನಗರ ಪಟ್ಟಣಗಳಲ್ಲಿ ೯೧೫೯ ತ್ಯಾಜ್ಯ ಸಂಸ್ಕರಣಾ ಸಾಮರ್ಥ್ಯ ಒಳಗೊಂಡಡಿಪಿಆರ್‌ಗೆ ಅನುಮೋದನೆ ನೀಡಲಾಗಿದೆ. ಉಳಿದ ಪಟ್ಟಣಗಳ ಡಿಪಿಆರ್ ತಯಾರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಘನತ್ಯಾಜ್ಯ ವಸ್ತುಗಳ ನಿರ್ವಹಣೆಗೆ ಅಗತ್ಯವಿರುವ ವಾಹನಗಳು, ಯಂತ್ರೋಪಕರಣಗಳನ್ನು ನೇರವಾಗಿ ಜಮ್‌ಪೋರ್ಟಲ್ ಮೂಲಕ ಖರೀದಿಗೆ ಅವಕಾಶ ಮಾಡಿಕೊಡಲಾಗಿದೆ ಎಂದು ಅವರು ಹೇಳಿದರು.
ರಾಜ್ಯದ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಲ್ಲಿ ತ್ಯಾಜ್ಯ ಸಂಗ್ರಹಣೆಗಾಗಿ ೩೪೨೧ ವಾಹನಗಳನ್ನು ಖರೀದಿಸಿ, ಬಳಕೆ ಮಾಡಲಾಗುತ್ತಿದೆ ಎಂದರು.
ಬಿಬಿಎಂಪಿ ಸೇರಿದಂತೆ ರಾಜ್ಯದ ೨೯೮ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪ್ರತಿದಿನ ೧೧೦೮೫ ಟನ್ ತ್ಯಾಜ್ಯ ಉತ್ಪಾದನೆಯಾಗುತ್ತಿದೆ. ೧೦,೧೯೮ ಟನ್ ತ್ಯಾಜ್ಯ ಸಂಗ್ರಹಣೆ ಮಾಡಿ ಅದನ್ನು ಗೊಬ್ಬರವನ್ನಾಗಿ ಪರಿವರ್ತಿಸುವ ಕೆಲಸವೂ ನಡೆಯುತ್ತಿದೆ ಎಂದು ಅವರು ಹೇಳಿದರು.