ಉತ್ತರಾ ಖಂಡದಲ್ಲಿ ಭಾರಿ ಮಳೆ

ಡೆಹ್ರಾಡೂನ್, ಅ.೧೦- ಉತ್ತರಾಖಂಡದಲ್ಲಿ ಭಾರೀ ಮಳೆಯಾಗುತ್ತಿದ್ದು, ರಿಷಿಕೇಶದ ಧಲ್ವಾಲಾ ಮತ್ತು ಖಾರಾ ಪ್ರದೇಶಗಳಲ್ಲಿ ಮಳೆಯಿಂದಾಗಿ ಜಲಾವೃತವಾಗಿದೆ.
ಬುಧವಾರ ರಾತ್ರಿ ಸುರಿದ ಭಾರೀ ಮಳೆಗೆ ಹಲವು ಮನೆಗಳು ಜಲಾವೃತಗೊಂಡಿದ್ದು, ಢಲ್ವಾಲಾ ಮತ್ತು ಖಾರಾದಲ್ಲಿ ಜಲಾವೃತಗೊಂಡ ಮನೆಗಳಲ್ಲಿ ಸಿಲುಕಿರುವ ಜನರನ್ನು ರಕ್ಷಿಸಲು ರಾಜ್ಯ ವಿಪತ್ತು ನಿರ್ವಹಣಾ ಪಡೆಗೆ ಕರೆ ನೀಡಲಾಯಿತು.
ಎಸ್‌ಡಿಆರ್‌ಎಫ್ ತಂಡ ರಾತ್ರಿಯೇ ಸ್ಥಳಕ್ಕೆ ಆಗಮಿಸಿ ಮುಳುಗಿದ ಮನೆಗಳಿಂದ ಸುಮಾರು ೫೦ ಜನರನ್ನು ರಕ್ಷಿಸಿ ತೆಪ್ಪದ ಮೂಲಕ ಸುರಕ್ಷಿತ ಸ್ಥಳಕ್ಕೆ ಕರೆದೊಯ್ದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಋಷಿಕೇಶದಲ್ಲಿ ನೀರಿನ ಮಟ್ಟ ಏರಿಕೆಯಿಂದಾಗಿ ಜನರ ಮನೆಗಳಿಗೆ ನೀರು ನುಗ್ಗಿದ್ದು, ಮನೆಯೊಳಗೆ ಸಿಲುಕಿರುವವರನ್ನು ರಕ್ಷಿಸಲು ಎಸ್‌ಡಿಆರ್‌ಎಫ್ ತಂಡಕ್ಕೆ ಮನವಿ ಮಾಡಲಾಗಿದೆ.
ವಿಪತ್ತು ನಿರ್ವಹಣಾ ಕೇಂದ್ರವು ರಾಜ್ಯದ ಮಳೆ ಪರಿಸ್ಥಿತಿಯನ್ನು ಪರಿಶೀಲಿಸಿದೆ ಎಂದು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಬುಧವಾರ ಹೇಳಿದ್ದಾರೆ. ಹವಾಮಾನದ ಬಗ್ಗೆ ಮಾಹಿತಿ ಪಡೆದ ನಂತರ ತಮ್ಮ ಪ್ರಯಾಣವನ್ನು ಮುಂದುವರಿಸಲು ಅವರು ಚಾರ್ಧಾಮ್ ಯಾತ್ರಿಕರಿಗೆ ಸಲಹೆ ನೀಡಿದ್ದಾರೆ.
ಭಾರೀ ಮಳೆಯಿಂದಾಗಿ ಕಳೆದ ೨೪ ಗಂಟೆಗಳಲ್ಲಿ ಪ್ರತ್ಯೇಕ ಘಟನೆಗಳಲ್ಲಿ ೯ ಜನರು ಸಾವನ್ನಪ್ಪಿದ್ದಾರೆ, ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಘಟನಾ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಪರಿಶೀಲನೆ ನಡೆಸಿದ್ದಾರೆ.