ಉತ್ತರಾದಿಮಠದ ನವೀಕರಣ ಕಟ್ಟಡ ವಿಕ್ಷೀಸಿದ ಸತ್ಯಾತ್ಮತೀರ್ಥರು

ಕೆಂಭಾವಿ :ಜು.3: ಉತ್ತರಾದಿ ಮಠದ ಪೀಠಾಧಿಪತಿ ಶ್ರೀ ಸತ್ಯಾತ್ಮತೀರ್ಥ ಶ್ರೀಗಳು ಶನಿವಾರ ರಾತ್ರಿ ಪಟ್ಟಣದ ಉತ್ತರಾದಿ ಮಠಕ್ಕೆ ಭೇಟಿ ನೀಡಿ ನವೀಕರಣಗೊಳ್ಳುತ್ತಿರುವ ಮಠದ ಕಟ್ಟಡವನ್ನು ವೀಕ್ಷಣೆ ಮಾಡಿದರು. ಇಲಕಲ್ ದಿಂದ ಸಿಂದಗಿ ಪಟ್ಟಣಕ್ಕೆ ಹೋಗುವ ಮಾರ್ಗಮಧ್ಯೆ ಪಟ್ಟಣಕ್ಕೆ ಆಗಮಿಸಿದ ಶ್ರೀಗಳನ್ನು ಮಂತ್ರಘೋಷ ಜೈಕಾರದೊಂದಿಗೆ ಬರಮಾಡಿಕೊಳ್ಳಲಾಯಿತು. ನಂತರ ಯತಿ ಚತುಷ್ಠಯರ ವೃಂದಾವನಕ್ಕೆ ಶ್ರೀಗಳು ಮಹಾಮಂಗಳಾರತಿ ಮಾಡಿದರು.
ಶಿಥಿಲಾವಸ್ಥೆಗೆ ತಲುಪಿದ್ದ ಯತಿ ಚತುಷ್ಠಯರ ವೃಂದಾವನ ಸನ್ನಿಧಾನವಿರುವ ಕಟ್ಟಡವನ್ನು ನವೀಕರಣ ಕಾರ್ಯ ಕೈಗೆತ್ತಿಕೊಳ್ಳಲಾಗಿದ್ದು ನೆಲಸಮಗೊಳಿಸಿದ ಮಠದ ಸುತ್ತಲಿನ ಕಟ್ಟಡವನ್ನು ವೀಕ್ಷಿಸಿಸಿದ ಶ್ರೀಗಳು ಕಟ್ಟಡ ಇಂಜೀನೀಯರ್ ರಾಘವೇಂದ್ರ ಕುಲಕರ್ಣಿ ಅವರಿಂದ ಸಂಪೂರ್ಣ ಮಾಹಿತಿ ಪಡೆದರು. ನಂತರ ನೆರೆದಿದ್ದ ನೂರಾರು ಭಕ್ತರಿಗೆ ಮುದ್ರಾಧಾರಣೆ ಫಲಮಂತ್ರಾಕ್ಷತೆ ನೀಡಿ ಆಶಿರ್ವದಿಸಿದರು. ಇದೇ ಸಂದರ್ಭದಲ್ಲಿ ಭಕ್ತ ಸಮೂಹ ಶ್ರೀಗಳವರಲ್ಲಿ ಮಳೆಗಾಗಿ ಪ್ರಾರ್ಥಿಸಿದರು.
ಜಯಸತ್ಯಪ್ರಮೋದ ಸೇವಾ ಸಂಘದ ಅಧ್ಯಕ್ಷ ವಾನರಾವ ದೇಶಪಾಂಡೆ, ಉಪಾಧ್ಯಕ್ಷ ಬಾಳಕೃಷ್ಣರಾವ ಕುಲಕರ್ಣಿ, ಕಾರ್ಯದರ್ಶಿ ತಿರುಮಲಾಚಾರ್ಯ ಜೋಷಿ, ಪ್ರಹ್ಲಾದಾಚಾರ್ಯ ಜೋಷಿ, ಜಯಾಚಾರ್ಯ ಪುರೋಹಿತ, ಮೋಹನರಾವ ಕುಲಕರ್ಣಿ, ಹಣಮಂತರಾವ ಕುಲಕರ್ಣಿ, ನರಸಿಂಹರಾವ ಕುಲಕರ್ಣಿ, ಶೇಷಗಿರಿರಾವ ಕುಲಕರ್ಣಿ, ಕೃಷ್ಣಾಜಿ ಕುಲಕರ್ಣಿ, ವೆಂಕಟೇಶ ನಾಡಿಗೇರ, ಗುರುರಾಜ ಕುಲಕರ್ಣಿ, ಮಲ್ಲಾರಾವ ಕುಲಕರ್ಣಿ ಸೇರಿದಂತೆ ಹಲವರಿದ್ದರು.