ಉತ್ತರಾಖಂಡ್: ಯುಸಿಸಿ ಮಂಡನೆ

ಡೆಹರಾಡೂನ್,ಫೆ.೬- ಧರ್ಮವನ್ನು ಲೆಕ್ಕಿಸದೆ ಎಲ್ಲಾ ನಾಗರಿಕರಿಗೆ ಏಕರೂಪದ ಮದುವೆ, ವಿಚ್ಚೇದನ, ಭೂಮಿ, ಆಸ್ತಿ ಮತ್ತು ಆನುವಂಶಿಕ ಕಾನೂನು ಜಾರಿ ಮಾಡುವ ಬಹು ನಿರೀಕ್ಷಿತ ಏಕರೂಪ ನಾಗರಿಕ ಸಂಹಿತೆಯನ್ನು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ವಿಧಾನಸಭೆಯಲ್ಲಿಂದು ಮಂಡಿಸಿದ್ದಾರೆ. ಯುಸಿಸಿ ಅನ್ನು ಮಂಡಿಸಿದ ದೇಶದ ಮೊದಲ ರಾಜ್ಯ ಎನ್ನುವ ಹೆಗ್ಗಳಿಕೆಗೆ ಉತ್ತರಖಂಡ ಸರ್ಕಾರ ಪಾತ್ರವಾಗಿದೆ.ಪ್ರತಿಪಕ್ಷ ಕಾಂಗ್ರೆಸ್ , ಏಕರೂಪ ನಾಗರಿಕ ಸಂಹಿತೆ ಮಂಡನೆ ಮಾಡಿರುವುದನ್ನು ವಿರೋಧಿಸಿ ಸಭಾತ್ಯಾಗ ನಡೆಸಿತು. ಯುಸಿಸಿ ಮಂಡಿಸಿದ ಬಳಿಕ ಕಲಾಪವನ್ನು ಮಧ್ಯಾಹ್ನ ೨ ಗಂಟೆಯ ತನಕ ಮುಂದೂದಿಡ್ಡು ಆನಂತರ ಮಸೂದೆ ಮೇಲೆ ಚರ್ಚೆಗೆ ಅವಕಾಶ ಮಾಡಿಕೊಡುವ ಸಾಧ್ಯತೆ ಇದೆ.ಉತ್ತರಖಾಂಡ ಸರ್ಕಾರದ ನಾಲ್ಕು ದಿನಗಳ ವಿಶೇಷ ಅಧಿವೇಶನದಲ್ಲಿ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ನೇತೃತ್ವದ ಸರ್ಕಾರ ಮೊನ್ನೆಯಷ್ಟೇ ಏಕರೂಪ ನಾಗರಿಕ ಸಂಹಿತೆ ಕುರಿತಂತೆ ತಜ್ಞರ ವರದಿ ಸ್ವೀಕಾರ ಮಾಡಿತ್ತು. ನಿನ್ನೆ ಸಚಿವ ಸಂಪುಟದ ಮುಂದೆ ತಂದು ಚರ್ಚೆ ನಡೆಸಿದ ಬಳಿಕ ಇಂದು ವಿಧಾನಸಭೆಯಲ್ಲಿ ಮಂಡಿಸಿದ್ದಾರೆ.ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಏಕರೂಪ ನಾಗರಿಕ ಸಂಹಿತೆ ಎಲ್ಲಾ ಧರ್ಮದವರಿಗೂ ಒಂದೇ ರೀತಿಯ ಕಾನೂನು ಇದರಿಂದ ಜಾರಿಗೆ ಬರಲಿದೆ. ಅದರಲ್ಲಿಯೂ ಮದುವೆ, ವಿಚ್ಚೇದನ ಭೂಮಿ, ಆಸ್ತಿ ಮತ್ತು ಆನುವಂಶಿಕ ಕಾನೂನುಗಳಿಗೆ ಕಾನೂನು ರೂಪಿಸಲಾಗುವುದು ಎಂದಿದ್ಧಾರೆ.೨೦೨೨ ರ ವಿಧಾನಸಭೆ ಚುನಾವಣೆಯ ಅವಧಿಯಲ್ಲಿ ರಾಜ್ಯದ ಜನರಿಗೆ ಬಿಜೆಪಿ ನೀಡಿದ ಪ್ರಮುಖ ಭರವಸೆಯಂತೆ ವಿಧಾನಸಭೆಯಲ್ಲಿ ಯುಸಿಸಿಯನ್ನು ಮಂಡಿಸಲಾಗಿದೆ ಎಂದು ತಿಳಿಸಿದ್ದಾರೆ.ದೇವ್‌ಭೂಮಿ ಉತ್ತರಾಖಂಡದ ನಾಗರಿಕರಿಗೆ ಸಮಾನ ಹಕ್ಕುಗಳನ್ನು ನೀಡುವ ಉದ್ದೇಶದಿಂದ, ಏಕರೂಪದ ನಾಗರಿಕ ಸಂಹಿತೆ ಮಂಡಿಸಲಾಗಿದೆ. ಹೀಗಾಗಿ ಯಾರೂ ಆತಂಕ ಪಡುವ ಅಗತ್ಯವಿಲ್ಲ ರಾಜ್ಯದ ಎಲ್ಲ ಜನರಿಗೆ ಹೆಮ್ಮೆಯ ಕ್ಷಣವಾಗಿದೆ ಯುಸಿಸಿ ಅನುಷ್ಠಾನಗೊಳಿಸುವತ್ತ ಸಾಗಿದೆ. ದೇಶದ ಮೊದಲ ರಾಜ್ಯ ನಮ್ಮದು ಎಂದು ಅವರು ತಿಳಿಸಿದ್ದಾರೆ.
ಆದರೆ ಬಿಜೆಪಿ ಸರ್ಕಾರಕ್ಕೆ ಬಹುಮತವಿರುವ ಹಿನ್ನೆಲೆಯಲ್ಲಿ ಏಕರೂಪ ನಾಗರಿಕ ಸಂಹಿತೆ ಅಂಗೀಕಾರವಾಗಲಿದೆ.