ಉತ್ತರಾಖಂಡ್‌ನಲ್ಲಿ ಕೊಹ್ಲಿ ಕುಟುಂಬ


ನೈನಿತಾಲ್, ನ. ೧೯-ಭಾರತೀಯ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮಾ, ದಂಪತಿ ತಮ್ಮ ಮಗಳು ವಾಮಿಕಾ ಜತೆಗೆ ಉತ್ತರಾಖಂಡ್ ಪ್ರವಾಸ ಕೈಗೊಂಡು ವಿಶ್ರಾಂತಿಗೆ ಮೊರೆ ಹೋಗಿದ್ದಾರೆ.
ಇಲ್ಲಿನ ಜಗದ್ವಿಖ್ಯಾತ ಆಶ್ರಮ ನೈನಿತಾಲ್ ಜಿಲ್ಲೆಯ ಕೈಂಚಿ ಬಾಬಾ ನೀಮ್ ಕರೌಲಿ ಆಶ್ರಮಕ್ಕೆ ಕೊಹ್ಲಿ ಕುಟುಂಬ ಸಮೇತ ಭೇಟಿ ನೀಡಿ ಭಗವಾನ್ ಹನುಮಾನ್ ಆಶೀರ್ವಾದ ಪಡೆದರು.
ಹೆಲಿಕಾಪ್ಟರ್ ಮೂಲಕ ಭವಾಲಿಯ ಸೈನಿಕ ಶಾಲೆ ಹೆಲಿಪ್ಯಾಡ್‌ಗೆ ಬಂದಿಳಿದ ಕೊಹ್ಲಿ, ಪತ್ನಿ ಜತೆಗೆ ಬಾಬಾ ನೀಮ್ ಕರೌಲಿ ಮಹಾರಾಜರ ಆಶ್ರಮಕ್ಕೆ ತಲುಪಿದರು. ಬಾಬಾ ನೀಮ್ ಕರೌಲಿ ಧಾಮ್‌ನಲ್ಲಿ ಕೊಹ್ಲಿ, ಅನುಷ್ಕಾ ಶರ್ಮಾ ಪ್ರಾರ್ಥನೆ ಸಲ್ಲಿಸುವುದರೊಂದಿಗೆ ಹನುಮಾನ್ ಚಾಲೀಸ್ ಪಠಿಸಿದರು. ಈ ವೇಳೆ, ಬಾಬಾ ನೀಮ್ ಕರೌಲಿ ಆರತಿಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.
ವಿರಾಟ್ ಮತ್ತು ಅನುಷ್ಕಾ ದೇವಸ್ಥಾನಕ್ಕೆ ಆಗಮಿಸಿದ ಮಾಹಿತಿ ಅರಿತ ನೂರಾರು ಅಭಿಮಾನಿಗಳು ದೇವಸ್ಥಾನದ ದ್ವಾರದ ಎದುರು ಜಮಾಯಿಸಿದ್ದರು. ಆದರೆ, ಅಭಿಮಾನಿಗಳನ್ನು ಭೇಟಿ ಮಾಡಲು ಒಪ್ಪದ ಸೆಲಿಬ್ರಿಟಿ ಅನುಷ್ಕಾ ,ವಿರಾಟ್ ಮುಕ್ತೇಶ್ವರಕ್ಕೆ ತೆರಳಿದರು. ಆದರೆ, ದೇವಸ್ಥಾನ ಸಮಿತಿ ಪದಾಧಿಕಾರಿಗಳು ವಿರಾಟ್ ಮತ್ತು ಅನುಷ್ಕಾ ಜತೆಗೆ ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ.
ನೀಮ್ ಕರೌಲಿ ಬಾಬಾರ ಭಕ್ತರಲ್ಲಿ ದೇಶವಾಸಿಗಳು ಮಾತ್ರವಲ್ಲ ವಿದೇಶಿಯರೂ ಇದ್ದಾರೆ. ಹಿಂದೆ ಪಿಎಂ ಮೋದಿ, ಹಾಲಿವುಡ್ ನಟಿ ಜೂಲಿಯಾ ರಾಬರ್ಟ್ಸ್, ಆಪಲ್ ಸಂಸ್ಥಾಪಕ ಸ್ಟೀವ್ ಜಾಬ್ಸ್ ಮತ್ತು ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಅವರಂಥ ಸೆಲೆಬ್ರಿಟಿಗಳು ಸಹ ಬಂದಿದ್ದರು. ಅದರಲ್ಲಿ ಈಗ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಹೆಸರು ಕೂಡ ಸೇರ್ಪಡೆಯಾಗಿದೆ.
ಗಿರಿಧಾಮದಿಂದ ಜೋಡಿಯ ಹಲವಾರು ಚಿತ್ರಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿವೆ. ಒಂದು ಫೋಟೋದಲ್ಲಿ, ಅನುಷ್ಕಾ ತನ್ನ ತೋಳುಗಳಲ್ಲಿ ವಾಮಿಕಾವನ್ನು ಹಿಡಿದಿರುವುದನ್ನು ನೋಡಬಹುದು.
ಇತ್ತೀಚೆಗಷ್ಟೇ ಮುಂಬೈ ವಿಮಾನ ನಿಲ್ದಾಣದಲ್ಲಿ ವಿರುಷ್ಕಾ ಜೋಡಿ ತಮ್ಮ ಚಳಿಗಾಲದ ಉಡುಗೆಯಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದರು.