ಉತ್ತರದಲ್ಲಿ ನಿಲ್ಲದ ವರುಣನ ಅಬ್ಬರ: ೪೧ ಮಂದಿ ಸಾವು

ನವದೆಹಲಿ,ಜು.೧೧- ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಬಿಟ್ಟೂ ಬಿಡದೆ ಸುರಿಯುತ್ತಿರುವ ಮಳೆಯಿಂದ ಭೂಕುಸಿತ, ಪ್ರವಾಹ, ಮನೆ ಛಾವಣಿ ಕುಸಿತ ಸೇರಿದಂತೆ ಮಳೆ ಸಂಬಂಧಿಸಿದ ಅನಾಹುತದಿಂದ ಒಟ್ಟಾರೆ ೪೧ ಮಂದಿ ಸಾವನ್ನಪ್ಪಿದ್ದು ಅಪಾರ ಪ್ರಮಾಣದ ಆಸ್ತಿ ಪಾಸ್ತಿಗೆ ಹಾನಿಯಾಗಿದ್ದು ಉತ್ತರ ಭಾರತ ತತ್ತರಿಸುವಂತೆ ಮಾಡಿದೆ.
ಹಿಮಾಚಲ ಪ್ರದೇಶದಲ್ಲಿ ೧೭ ಮಂದಿ ಸಾವನ್ನಪ್ಪಿದ್ದು ೪ ಸಾವಿರ ಕೋಟಿಗೂ ಅಧಿಕ ನಷ್ಟವಾಗಿದೆ ಎಂದು ಅಂದಾಜು ಮಾಡಲಾಗಿದೆ. ಜಮ್ಮು ಕಾಶ್ಮೀರದಲ್ಲಿ ೬ ಮಂದಿ, ಪಂಜಾಬ್ ನಲ್ಲಿ ಮೂರು ಮಂದಿ, ಹರಿಯಾಣದಲ್ಲಿ ೫ ಮಂದಿ ಸಾವನ್ನಪ್ಪಿರುವುದೂ ಸೇರಿದಂತೆ ರಾಜಸ್ತಾನ,ಉತ್ತರಖಾಂಡ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಮಳೆಯಿಂದ ಮೃತಪಟ್ಟವರ ಸಂಖ್ಯೆ ೪೧ಕ್ಕೆ ಏರಿಕೆಯಾಗಿದ್ದು ಸಾವಿರರಾರು ಮಂದಿಯ ಪಾಡು ಹೇಳತೀರದಾಗಿದೆ.
ಭಾರೀ ಮಳೆಯಿಂದ ಭೂಕುಸಿತ ಮತ್ತು ಪರ್ವತಗಳು ಮತ್ತು ಬಯಲು ಪ್ರದೇಶಗಳಲ್ಲಿ ಪ್ರವಾಹಕ್ಕೆ ಬಂದಿದ್ದ ಜನ ನಲುಗಿ ಹೋಗುವಂತಾಗಿದೆ. ಯಮುನಾ ಬಿಯಾಸ್, ಸೆಟ್ಲೆಜ್ ಸೇರಿದಂತೆ ಇತರೆ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ನದಿ ಪಾತ್ರದ ಜನರು ಹಿಡಿ ಜೀವ ಕೈಯಲ್ಲಿಡಿದು ಬದುಕುವಂತಾಗಿದೆ. ತಗ್ಗು ಪ್ರದೇಶದ ಜನರ ಬಗ್ಗೆ ಕಾಳಜಿ ವಹಿಸಲಾಗಿದೆ.
ತಗ್ಗು ಪ್ರದೇಶದಲ್ಲಿ ಜಲಾವೃತವಾಗಿವೆ. ನದಿ ತುಂದ ಹಿನ್ನೆಲೆಯಲ್ಲಿ ತೊರೆಗಳು ಉಕ್ಕಿ ಹರಿಯುತ್ತಿವೆ. ಮನೆಗಳು ನೀರಿನಲ್ಲಿ ಮುಳುಗಡೆಯಾಗಿವೆ. ಪ್ರವಾಹದಲ್ಲಿ ಕಾರುಗಳು ತೇಲಿಕೊಂಡು ಹೋಗುವ ದೃಶ್ಯ ಸಾಮಾನ್ಯವಾಗಿದೆ. ಬಹುತೇಕ ಕಡೆ ರೈತರು ಬೆಳೆದ ಬೆಳೆ ನೀರಿನಲ್ಲಿ ಕೊಚ್ಚಿ ಹೋಗಿದೆ.
ಹೆಚ್ಚು ಹಾನಿಗೊಳಗಾದ ಹಿಮಾಚಲ ಪ್ರದೇಶದಲ್ಲಿ ಮಳೆಯಿಂದ ೧೭ ಮಂದಿ ಸಾವನ್ನಪ್ಪಿದ್ದಾರೆ. ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗೆ ಸುಮಾರು ೪,೦೦೦ ಕೋಟಿ ರೂಪಾಯಿಗೂ ಅಧಿಕ ನಷ್ಟವಾಗಿದೆ ಎಂದು ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಹೇಳಿದ್ದಾರೆ.
ನಿರಂತರ ಧಾರಾಕಾರ ಮಳೆಯು ರಸ್ತೆಗಳು, ವಿದ್ಯುತ್ ಪರಿವರ್ತಕಗಳು, ವಿದ್ಯುತ್ ಉಪ-ಕೇಂದ್ರಗಳು ಮತ್ತು ಹಲವಾರು ನೀರು ಸರಬರಾಜು ಯೋಜನೆಗಳು ಸೇರಿದಂತೆ ಮೂಲಸೌಕರ್ಯಗಳಿಗೆ ವ್ಯಾಪಕ ಹಾನಿಯನ್ನುಂಟುಮಾಡಿದೆ. ೪,೬೮೬ ಟ್ರಾನ್ಸ್ ಫಾರ್ಮರ್ ಗಳು ಹಾಳಾಗಿದ್ದು, ನೂರಾರು ಗ್ರಾಮಗಳು ಕತ್ತಲಲ್ಲಿ ಮುಳುಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೆದ್ದಾರಿ ಕುಸಿತ: ೬ ಸಾವು
ಜಮ್ಮು ಕಾಶ್ಮೀರದ ಲಾಹೌಲ್-ಸ್ಪಿತಿ ಜಿಲ್ಲೆ ಮತ್ತು ಲಡಾಖ್‌ಗೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಲಹೌಲ್-ಸ್ಪಿತಿ ಮತ್ತು ಕುಲು ಜಿಲ್ಲೆಗಳಲ್ಲಿ ಸಿಲುಕಿರುವ ಸುಮಾರು ೩೦೦ ಪ್ರವಾಸಿಗರು ಮತ್ತು ನಿವಾಸಿಗಳನ್ನು ಹೆಲಿಕಾಪ್ಟರ್ ಮೂಲಕ ಸ್ಥಳಾಂತರಿಸಲಾಗಿದೆ.
ಚಂಬಾ ಜಿಲ್ಲೆಯ ಭರ್ಮೂರ್ ಪ್ರದೇಶದ ಮಣಿಮಹೇಶ್ ಸರೋವರಕ್ಕೆ ತೆರಳುತ್ತಿದ್ದ ಸುಮಾರು ೭೦ ಪ್ರವಾಸಿಗರು ಸಿಕ್ಕಿಹಾಕಿಕೊಂಡಿದ್ದಾರೆ. ತೀರ್ಥಯಾತ್ರೆಗೆ ತೆರಳಿದ್ದ ಆರು ಮಂದಿ ಸಾವನ್ನಪ್ಪಿದ ಕಾರಣ ಶ್ರೀಖಂಡ್ ಮಹಾದೇವ ಯಾತ್ರೆ ಹಠಾತ್ತನೆ ಸ್ಥಗಿತಗೊಳಿಸಲಾಗಿದೆ.

ಪಂಜಾಬ್‌ನಲ್ಲಿ ೩ ಸಾವು: ಸಿಎಂ ಭರವಸೆ
ಪಂಜಾಬ್ ಕನಿಷ್ಠ ಮೂರು ಸಾವನ್ನಪ್ಪಿದ್ದಾರೆ. ಮೊಹಾಲಿ, ರೋಪರ್, ಫತೇಘರ್ ಸಾಹಿಬ್, ಜಲಂಧರ್ , ಮತ್ತು ಪಟಿಯಾಲ ಸೇರಿದಂತೆ ಹಲವಾರು ಪ್ರದೇಶಗಳಲ್ಲಿ ರಕ್ಷಣಾ, ಪರಿಹಾರ ಮತ್ತು ಸ್ಥಳಾಂತರಿಸುವಿಕೆ ಕಾರ್ಯ ನಡೆದಿದೆ.
ಎನ್‌ಡಿಆರ್‌ಎಫ್‌ನ ೧೪ ತಂಡಗಳು, ಎಸ್‌ಡಿಆರ್‌ಎಫ್‌ನ ಎರಡು ಘಟಕಗಳು ಮತ್ತು ಸೇನೆಯ ೧೨ ಕಾಲಂಗಳು ಮತ್ತು ಪಂಜಾಬ್ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಡಿಜಿಪಿ ಗೌರವ್ ಯಾದವ್ ಹೇಳಿದ್ದಾರೆ.
ಪರಿಹಾರ ನೀಡಲು ಅವರ ಸರ್ಕಾರ ಸಕ್ರಿಯವಾಗಿ ಕೆಲಸ ಮಾಡುತ್ತಿದೆ. ಬೆಳೆ ನಷ್ಟ, ಹಾಗೆಯೇ ಮನೆಗಳು ಮತ್ತು ಜಾನುವಾರುಗಳ ಹಾನಿಯನ್ನು ಮೌಲ್ಯಮಾಪನ ಮಾಡಲು ಗಿರ್ದಾವರಿ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಭಗವಂತ್ ಮಾನ್ ಸಾರ್ವಜನಿಕರಿಗೆ ಭರವಸೆ ನೀಡಿದ್ದಾರೆ.

ಹರಿಯಾಣದಲ್ಲಿ ಐದು ಸಾವು:
ಹರಿಯಾಣದಲ್ಲಿ ಮಳೆಯಿಂದಾಗಿ ರಾಜ್ಯದಾದ್ಯಂತ ರೈಲು ಮಾರ್ಗಗಳು, ರಾಷ್ಟ್ರೀಯ ಹೆದ್ದಾರಿಗಳು, ಸೇತುವೆಗಳು ಮತ್ತು ವಿದ್ಯುತ್ ಕೇಂದ್ರಗಳಿಗೆ ಹಾನಿಯಾಗಿದೆ. ಕರ್ನಾಲ್‌ನಲ್ಲಿ ಮನೆ ಕುಸಿತದಿಂದ ದಂಪತಿಗಳು ಪ್ರಾಣ ಕಳೆದುಕೊಂಡಿದ್ದು, ಪಿಂಜೋರ್‌ನಲ್ಲಿ ಭೂಕುಸಿತದಲ್ಲಿ ಮೂವರು ಮಕ್ಕಳು ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಐದಕ್ಕೆ ಏರಿದೆ.
ಕಲ್ಕಾ-ಶಿಮ್ಲಾ, ಚಂಡೀಗಢ-ಚಂಡೀಗಢ-ಮೊರಿಂಡಾ, ಮತ್ತು ನಂಗಲ್-ಉನಾ ಸೇರಿದಂತೆ ವಿವಿಧ ಮಾರ್ಗಗಳಲ್ಲಿ ಸುಮಾರು ೫೦ ರೈಲುಗಳನ್ನು ರದ್ದುಗೊಳಿಸಲಾಗಿದೆ ಅಥವಾ ಬದಲಿಸಲಾಗಿದೆ ಮತ್ತು ಶತಾಬ್ದಿ ಸೇರಿದಂತೆ ನವದೆಹಲಿ- ಅಂಬಾಲಾ, ಅಂಬಾಲಾ-ಸಹಾರನ್‌ಪುರ ಸೇರುದಂತೆ ವಿವಿಧ ರೈಲು ಸೇವೆ ರದ್ದು ಮಾಡಲಾಗಿದೆ.