ಉತ್ತರದಲ್ಲಿಯೂ ಮೈತ್ರಿ ಪಕ್ಷ ಸೋಲಿಸಿ ಅಭಿಯಾನ: ಬಡಗಲಪುರ ನಾಗೇಂದ್ರ

ಸಂಜೆವಾಣಿ ನ್ಯೂಸ್
ಮೈಸೂರು.ಏ.28:- ಕೇಂದ್ರ ಬಿಜೆಪಿಯ ರೈತ ವಿರೋಧೀ ಧೋರಣೆ ಖಂಡಿಸಿ ರಾಜ್ಯ ರೈತ ಸಂಘ ಚುನಾವಣೆ ವೇಳೆ ಬಿಜೆಪಿ ಮೈತ್ರಿ ಪಕ್ಷ ಸೋಲಿಸಿ, ರೈತರನ್ನು ಉಳಿಸಿ ಎಂಬ ಅಭಿಯಾನವನ್ನು ಉತ್ತರದಲ್ಲಿಯೂ ಮುಂದುವರೆಸುವುದಾಗಿ ರಾಜ್ಯ ರೈತಸಂಘದ ಅಧ್ಯಕ್ಷ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದರು.
ನಮ್ಮ ಅಭಿಯಾನದ ಅಂಗವಾಗಿ ಮೊದಲನೇ ಹಂತದ ಚುನಾವಣೆ ವೇಳೆ ಸುಮಾರು ಶೇ.4 ರಷ್ಟು ರೈತರ ಮತಗಳು ಮೈತ್ರಿ ಪಕ್ಷ ವಿರುದ್ಧವಾಗಿ ಚಲಾವಣೆ ಆಗಿರುವ ಸಾಧ್ಯತೆ ಇದೆ. ಇದೇ ರೀತಿ ಎರಡನೇ ಹಂತದಲ್ಲಿಯೂ ಉತ್ತರ ಕರ್ನಾಟಕದಲ್ಲಿಯೂ ರೈತ ಸಂಘ ಅಭಿಯಾನ ಮುಂದುವರಿಸಲಿದೆ ಎಂದು ತಿಳಿಸಿದರು.
ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ಮೊರೆ ಹೋದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ 3454 ಕೋಟಿ ಬರ ಪರಿಹಾರ ಬಿಡುಗಡೆಗೊಳಿಸಿದೆ. ಆದರೆ ನಾವು ಕೇಳಿದ್ದುದು ಸುಮಾರು 18 ಸಾವಿರ ಕೋಟಿ. ಹೀಗಾಗಿ ಈಗ ಭಿಕ್ಷೆ ರೂಪದಲ್ಲಿ ಪರಿಹಾರ ನೀಡಲಾಗಿದೆ. ಆದ್ದರಿಂದ ರಾಜ್ಯ ಸರ್ಕಾರ ಕೇಂದ್ರದ ವಿರುದ್ಧ ನ್ಯಾಯಾಲಯದಲ್ಲಿನ ಹೋರಾಟ ಮುಂದುವರಿಸಬೇಕೆಂದು ರಾಜ್ಯ ರೈತ ಸಂಘ ಆಗ್ರಹಿಸುತ್ತಿರುವುದಾಗಿ ಹೇಳಿದರು.
ಬರಗಾಲದ ಕಾರಣ ಪಂಪ್‍ಸೆಟ್ ಆಧರಿಸಿ ಕೃಷಿ ಮಾಡುವವರಿಗೆ ಸಮರ್ಪಕ ವಿದ್ಯುತ್ ಸರಬರಾಜು ಮಾಡುತ್ತಿಲ್ಲ. ಇದರೊಡನೆ ವಿದ್ಯುತ್ ಸಂಪರ್ಕದ ಶುಲ್ಕ ಸುಮಾರು 28 ಸಾವಿರ ಇದ್ದುದನ್ನು ಎರಡೂವರೆ ಲಕ್ಷಕ್ಕೆ ಏರಿಸಲಾಗಿದೆ. ಈ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಹೋರಾಟ ನಡೆಸಲಾಗುವುದು ಎಂದರು.
ಇದೇ ವೇಳೆ ಸಂಸದ ಪ್ರಜ್ವಲ್ ರೇವಣ್ಣ ಸೇರಿ ಹಲವರು ತಮ್ಮ ಸ್ಥಾನ ಕಳೆದುಕೊಳ್ಳಲಿದ್ದಾರೆಂದು ಭವಿಷ್ಯ ನುಡಿದರು. ಪದಾಧಿಕಾರಿಗಳಾದ ನೇತ್ರಾವತಿ, ಹೊಸೂರು ಕುಮಾರ್, ಪಿ. ಮರಂಕಯ್ಯ, ಕಲ್ಲಹಳ್ಳಿ ಜಯಣ್ಣ, ಹೊಸಕೋಟೆ ಬಸವರಾಜ ಇದ್ದರು.