ಉತ್ತಮ ಸಾಧನೆಗೆ ಪರಿಶ್ರಮ ಅತಿಮುಖ್ಯ:ಜಿ.ಎಂ.ಗುರುಪ್ರಸಾದ

ಸೈದಾಪುರ:ಜು.31:ಉತ್ತಮ ಸಾಧನೆಗೆ ಪರಿಶ್ರಮ ಅತಿ ಮುಖ್ಯವಾಗಿದೆ. ಈ ದಿಸೆಯಲ್ಲಿ ನಾವು ನಮ್ಮದೆಯಾದ ವೇಳಾಪಟ್ಟಿಯೊಂದಿಗೆ ಸತತ ಅಭ್ಯಾಸ ಮಾಡಬೇಕು ಎಂದು ಮಲ್ಹಾರ ಕಾರಡ್ಡಿ ಮತ್ತು ಬಸವಂತ್ರಾಯ ಸಿದ್ದಪ್ಪ ಸ್ಮಾರಕ ವಿದ್ಯಾ ವರ್ಧಕ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಜಿ.ಎಂ.ಗುರುಪ್ರಸಾದ ಅಭಿಪ್ರಾಯಪಟ್ಟರು.

ಇಲ್ಲಿಗೆ ಸಮೀಪದ ಬಳಿಚಕ್ರ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಸ್ವಾಗತ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಗುರು ಹಿರಿಯರನ್ನು ಗೌರವದಿಂದ ಕಾಣುವ ಮೂಲಕ ಉತ್ತಮ ವ್ಯಕ್ತಿಗಳು ನಾವಾಗಬೇಕು ಎಂದು ಕಿವಿ ಮಾತುಗಳನ್ನು ಹೇಳಿದರು.
ಸಂಚಾರಿ ಸಬ್ ಇನ್ಸ್‍ಪೆಕ್ಟರ ಮೈಹಿಬೂಬ ಅಲಿ ತಳಬಿಡಿ ಮಾತನಾಡಿ, ವಿದ್ಯಾರ್ಥಿಗಳು ಶ್ರಮ ಪಟ್ಟರೆ ಜೀವನದಲ್ಲಿ ಉನ್ನತ ಮಟ್ಟಕ್ಕೆ ಹೋಗಬಹುದು. ಹೆಚ್ಚಿನ ಜ್ಞಾನ ಪಡೆದುಕೊಳ್ಳಲು ಪತ್ರಿಕೆಗಳನ್ನು ಓದಬೇಕು. ಗುಂಪು ಚರ್ಚೆಗಳನ್ನು ಮಾಡಬೇಕು. ತಂದೆ ತಾಯಿಗಳ ಕನಸನ್ನು ನನಸು ಮಾಡಬೇಕು ಎಂದು ಸಲಹೆಗಳನ್ನು ನೀಡಿದರು.

ಪ್ರಾಂಶುಪಾಲ ಮಹಾಂತೇಶ ಕಲಾಲ ಅಧ್ಯಕ್ಷತೆ ವಹಿಸಿದ್ದರು. ದೇವರಾಜು ಸ್ವಾಗತಿಸಿದರು. ರಮೇಶ ವಂದಿಸಿದರು. ಮಹೇಶ ನಿರೂಪಿಸಿದರು.