ಉತ್ತಮ ಸರ್ಕಾರ ರಚನೆಗೆ ಮತದಾನದ ಹೆಚ್ಚಳ ಅಗತ್ಯ- ಸದಾಶಿವ ಪ್ರಭು


ಸಂಜೆವಾಣಿ ವಾರ್ತೆ
ಹೊಸಪೇಟೆ, ಏ.30 : ನಗರ ಪ್ರದೇಶಗಳಲ್ಲಿಯೇ ಮತದಾನ ಕಡಿಮೆಯಾಗುತ್ತಿದ್ದು ಇದನ್ನು ತಡೆಯಲು “ನಮ್ಮ ನಡೆ ಮತಗಟ್ಟೆಯ ಕಡೆ” ಜನ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸದಾಶಿವ ಪ್ರಭು ಹೇಳಿದರು. 
ವಿಜಯನಗರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸ್ವೀಫ್ ಸಮಿತಿ, ಪತಂಜಲಿ ಯೋಗ ಸಮಿತಿ ಹಾಗೂ ಜನನಿ ವಿವಿದ್ದೋದೇಶ ಸಹಕಾರ ಸಂಘದ ಸಹಯೋಗದಲ್ಲಿ ಭಾನುವಾರ ಬೆಳಿಗ್ಗೆ ಹಮ್ಮಿಕೊಂಡ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಅತ್ಯಂತ ಮಹತ್ವದ ಪಾತ್ರವಹಿಸುತ್ತಿದ್ದು ಇದನ್ನು ಯಾರು ಕಳೆದುಕೊಳ್ಳಬಾರದು, ವಿಪರ್ಯಾಸ ಎಂದರೆ ನಗರ ಪ್ರದೇಶಗಳಲ್ಲಿಯೇ ಮತದಾನದ ಪ್ರಮಾಣ ಕಡಿಮೆಯಾಗುತ್ತಿರುವುದು ಅತ್ಯಂತ ಶೋಚನೀಯ, ಈ ಬಾರಿ ಮತಪ್ರಮಾಣ ವೃದ್ಧಿಸಲು ಸರ್ಕಾರ ವಿನೂತನ ಕಾರ್ಯಕ್ರಮಗಳ ಮೂಲಕ ಉತ್ತಮ ಸರ್ಕಾರ ಚುನಾಯಿಸಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಜಿಲ್ಲಾಡಳಿತ ಈ ಭಾರಿ ಮತಗಟ್ಟೆಯ ಹತ್ತಿರ ಕುಡಿಯುವ ನೀರು, ನೆರಳು, ಶೌಚಾಲಯ ಅಗತ್ಯ ಸಹಕಾರ ನೀಡಲು ಕ್ರಮಕೈಗೊಂಡಿದೆ. ಶತಾಯಗತಾಯ ಈ ಬಾರಿ ಪ್ರಮಾಣವೃದ್ಧಿಸಲು ಜಾಗೃತಿಯ ಮಾರ್ಗ ಹಿಡಿಯಲಾಗಿದೆ ಎಂದರು.
ಪತಂಜಲಿ ಯೋಗ ಸಮಿತಿಯ ಕರ್ನಾಟಕ ಉಸ್ತೂವಾರಿ ಭವರ್‍ಲಾಲ್ ಆರ್ಯಾ ಮಾತನಾಡಿ ಸರ್ಕಾರದ ಇಷ್ಟೊಂದು ಸೌಕರ್ಯಗಳ ನಡುವೆಯೂ ಮತದಾನದ ಪ್ರಮಾಣ ವೃದ್ಧಿಯಾಗದಿರುವುದು ವಿಷಾಧನೀಯ, ಈ ಭಾರಿ ಜನ ಜಾಗೃತಿ ಸೇರಿದಂತೆ ಮತಕೇಂದ್ರದ ಬಳಿ ಮಾಡಿರುವ ಸೌಕರ್ಯಗಳು ಪ್ರಮಾಣ ವೃದ್ಧಿಗೆ ಸಹಕಾರಿಯಾಗಲಿದೆ, ಆದಾಗ್ಯೂ ಪತಂಜಲಿ ಯೋಗಸಮಿತಿಯ ಪ್ರತಿಯೊಬ್ಬರು ಸಂಕಲ್ಪ ಮಾಡಿ ಮತದಾನ ಪ್ರಮಾಣ ವೃದ್ಧಿಗೆ ಸಂಕಲ್ಪಿಸಬೇಕು ಎಂದರು.
ನಗರಸಭೆಯ ಪೌರಾಯುಕ್ತ ಮನೋಹರ, ಪತಂಜಲಿ ಯೋಗಸಮಿತಿಯ ಯುವ ಪ್ರಭಾರಿ ಕಿರಣ್, ಡಾ.ಎಫ್.ಟಿ ಹಳ್ಳಿಕೇರಿ, ರಾಜೇಶ್ ಕರ್ವಾ, ಶ್ರೀರಾಮ,  ಜನನಿ ಸಹಕಾರಿ ಸಂಘದ ಬಿ.ಕೇಶವ್, ಅನಂತ ಜೋಶಿ, ಭೂಪಾಳ. ಪ್ರಹ್ಲಾದ್ ಅನೇಕ ಹಿರಿಯ ಯೋಗಸಾಧಕರು, ಶಿಕ್ಷಕರು ಹಾಗೂ ಯೋಗಾಸಕ್ತರು ಪಾಲ್ಗೊಂಡಿದ್ದರು.

One attachment • Scanned by Gmail