ಉತ್ತಮ ಸಮಾಜ, ಸದೃಶ ದೇಶ ನಿರ್ಮಾಣಕ್ಕೆ ಹಣಕ್ಕಿಂತ ಶಿಕ್ಷಣ ಮುಖ್ಯ

ಕೋಲಾರ, ನ.೧೯- ಉತ್ತಮ ಸಮಾಜ,ಸದೃಢ ದೇಶ ನಿರ್ಮಾಣಕ್ಕೆ ಹಣಕ್ಕಿಂತ ಗುಣಮಟ್ಟದ ಶಿಕ್ಷಣವೇ ಅತಿ ಮುಖ್ಯವಾಗಿದೆ ಎಂದು ಕೋಲಾರ ಹಾಲು ಒಕ್ಕೂಟದ ನಿರ್ದೇಶಕ ಡಿ.ವಿ.ಹರೀಶ್ ಅಭಿಪ್ರಾಯಪಟ್ಟರು.
ನಗರ ಹೊರವಲಯದ ಕೋಚಿಮುಲ್ ತಾಲೂಕು ಶಿಬಿರ ಕಚೇರಿಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ತಾಲೂಕಿನ ವಿವಿಧ ಪ್ರೌಢಶಾಲೆಗಳಿಗೆ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಆಶ್ರಯದಲ್ಲಿ ಕೋಚಿಮುಲ್‌ನಿಂದ ಮುದ್ರಿಸಿ ಕೊಡುಗೆ ನೀಡಿರುವ ‘ನನ್ನನ್ನೊಮ್ಮೆ ಗಮನಿಸು’ ಚಿತ್ರ ಬಿಡಿಸು-ಅಂಕ ಗಳಿಸು, ಅಭ್ಯಾಸ ಹಾಳೆ ಸೇರಿದಂತೆ ೧೭ ಶೀರ್ಷಿಕೆಗಳ ಕಲಿಕಾ ಸಂಪನ್ಮೂಲ ಪುಸ್ತಕಗಳನ್ನು ಪ್ರೌಢಶಾಲೆಗಳಿಗೆ ವಿತರಿಸಿ ಅವರು iತನಾಡಿ ಹಣ ಇರುವವರು ಆಡಳಿತ ನಡೆಸಲು ಸಾಧ್ಯವಾಗುವುದಿಲ್ಲ ಆದರೆ ವಿದ್ಯೆ ಇರುವವರು ಮಾತ್ರ ಆಡಳಿತ ನಡೆಸಲು ಸಾಧ್ಯವಾಗುತ್ತದೆ ಹೀಗಾಗಿ ಶಿಕ್ಷಣ ಕ್ರಾಂತಿಯಿಂದಲೇ ಉತ್ತಮ ಸಮಾಜದ ಅಭಿವೃದ್ಧಿ ಸಾಧ್ಯವೆಂದು ತಿಳಿಸಿದರು.
ಕೋಚಿಮುಲ್ ವತಿಯಿಂದ ಶಿಕ್ಷಣ ಸೌಲಭ್ಯ, ದೇವಾಲಯಗಳ ಜೀರ್ಣೋದ್ಧಾರ ಕಾರ್ಯಕ್ರಮ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಮುಂದುವರೆಸಿಕೊಂಡು ಬರಲಾಗುತ್ತಿದ್ದು, ಅದಕ್ಕಾಗಿಯೇ ಪ್ರತಿವರ್ಷವೂ ೬ ರಿಂದ ೭ ಕೋಟಿ ರೂಗಳನ್ನು ಮೀಸಲಿರಿಸಲಾಗಿದೆ. ಕೋಚಿಮುಲ್ ವತಿಯಿಂದ ಅವಿಭಜಿತ ಜಿಲ್ಲೆಯ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕಾಗಿ ಉಚಿತ ಹಾಸ್ಟೆಲ್ ನಿರ್ಮಿಸುವುದಕೆ ಈಗಾಗಲೇ ಸರ್ಕಾರ ನಿವೇಶನ ನೀಡಿದ್ದು, ಕಟ್ಟಡ ನಿರ್ಮಾಣಕ್ಕೆ ಪ್ರಯತ್ನ ಮುಂದುವರೆದಿದೆ.ಈಗಾಗಲೇ ಉನ್ನತ ವಿದ್ಯಾಭ್ಯಾಸಕ್ಕಾಗಿ ಹೊರದೇಶಕ್ಕೆ ತೆರಳುವ ವಿದ್ಯಾರ್ಥಿಗಳಿಗೂ ೫೦ ಸಾವಿರರೂ ಪ್ರೋತ್ಸಾಹಧ ನೀಡಲಾಗುತ್ತಿದೆ ಎಂದು ತಿಳಿಸಿದರು.
ಕಳೆದ ವಾರ ಹಾಲಿನ ದರ ೨ರೂ ಏರಿಕೆ ಮಾಡಿದ್ದ ಬೆನ್ನಲ್ಲಿಯೇ ಕೆಎಂಎಫ್ ಇದೀಗ ೩ರೂ ಏರಿಕೆ ಮಾಡಿದ್ದು, ರೈತರಿಗೆ ಅದರಿಂದಾಗಿ ಪ್ರತಿ ಲೀಟರ್‌ಗೆ ೩೨ರೂ ಸಿಗಲಿದೆ ಎಂದು ತಿಳಿಸಿದ ಅವರು, ದತ್ತಿ ನಿಧಿಯಿಂದ ಅನೇಕ ಕಾರ್ಯಕ್ರಮಗಳಿಗೆ ಅನುದಾನ ನೀಡುತ್ತಿರುವುದಾಗಿ ಹೇಳಿದರು.
ಡಿಡಿಪಿಐ ಕೃಷ್ಣಮೂರ್ತಿ ಮಾತನಾಡಿ, ಪ್ರತಿವರ್ಷಕ್ಕಿಂತಲೂ ಈ ಬಾರಿ ಮುಂಚಿತವಾಗಿಯೇ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ಬೆಲೆ ಕಟ್ಟಲಾಗದ ಅತ್ಯಮೂಲ್ಯ ಪುಸ್ತಕಗಳನ್ನು ೧೧೧ ಶಿಕ್ಷಕರ ಪರಿಶ್ರಮ, ಕೋಚಿಮುಲ್ ಸಹಕಾರದಿಂದ ಹೊರತಲಾಗಿದೆ.ಕಳೆದ ಬಾರಿ ೨೦ ಸಾವಿರ ವಿದ್ಯಾರ್ಥಿಗಳ ಪೈಕಿ ೧೦೦೦ ವಿದ್ಯಾರ್ಥಿಗಳನ್ನು ಹೊರತುಪಡಿಸಿ ೧೯,೦೦೦ ವಿದ್ಯಾರ್ಥಿಗಳು ಶೇ.೬೦ಕ್ಕಿಂತಲೂ ಹೆಚ್ಚಿನ ಫಲಿತಾಂಶ ಪಡೆದುಕೊಂಡಿದ್ದಾರೆ. ಈ ಬಾರಿ ಡಿಸೆಂಬರ್‌ಗೆ ಪಾಠಗಳು ಮುಕ್ತಾಯಗೊಳ್ಳಲಿದ್ದು, ಮಕ್ಕಳಿಗೆ ಈ ಪುಸ್ತಕಗಳನ್ನು ಅಭ್ಯಾಸ ಮಾಡಿಸುವುದರಿಂದ ಫಲಿತಾಂಶದಲ್ಲಿ ಕೋಲಾರ ಜಿಲ್ಲೆಯು ರಾಜ್ಯದಲ್ಲೇ ಟಾಪ್ ೧೦ ರಲ್ಲಿ ಅಲ್ಲ ೫ರ ಒಳಗೆ ಬರುವುದಕ್ಕೂ ಸಹಕಾರಿಯಾಗಲಿದೆ ಎಂದು ಹೇಳಿದರು.
ಎಸ್ಸೆಸ್ಸೆಲ್ಸಿ ಪರೀಕ್ಷಾ ನೋಡಲ್ ಅಧಿಕಾರಿ ನಾಗೇಂದ್ರಪ್ರಸಾದ್ ಮಾತನಾಡಿ, ಕಳೆದ ಬಾರಿ ಕೋಲಾರ ತಾಲೂಕಿಗೆ ಶೇ.೯೫.೮೩ರಷ್ಟು ಫಲಿತಾಂಶ ಬರುವ ಮೂಲಕ ಜಿಲ್ಲೆಯಲ್ಲಿ ೨ನೇ ಸ್ಥಾನ ಪಡೆದಿದ್ದರೂ, ಪ್ರತಿವರ್ಷ ಪರೀಕ್ಷೆ ಒಂದೇ ರೀತಿ ಇರುವುದಿಲ್ಲ. ವಿಭಿನ್ನವಾಗಿರುತ್ತದೆ ಹೀಗಾಗಿ, ನಮ್ಮ ಮೇಲೆ ಈ ಬಾರಿಯೂ ಇನ್ನಷ್ಟು ಜವಾಬ್ದಾರಿಯಿದೆ ಎಂದರು.
ನಮ್ಮಲ್ಲಿ ಸಿದ್ಧಪಡಿಸಿರುವ ಪುಸ್ತಕಗಳು ರಾಜ್ಯದ ಯಾವ ಜಿಲ್ಲೆಯಲ್ಲೂ ಸಿದ್ಧಪಡಿಸಿಲ್ಲ, ಬೇರೆ ಜಿಲ್ಲೆಯ ಡಿಡಿಪಿಐಗಳು ಕರೆ ಮಾಡಿ ಪ್ರತಿಗಳನ್ನು ಕೇಳುತ್ತಿದ್ದಾರೆ. ಪಿಯುಸಿಯಂತೆಯೇ ಇನ್ನುಮುಂದೆ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲಾಗುತ್ತದೆ. ಪರೀಕ್ಷೆ ೧೩೫ ದಿನಗಳು ಇದ್ದು, ಪುಸ್ತಕಗಳನ್ನು ಮಕ್ಕಳು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕನ್ನಯ್ಯ ಮಾತನಾಡಿ, ಇಲಾಖೆ ಮತ್ತು ಕೋಚಿಮುಲ್ ನೀಡಿರುವ ಈ ಪುಸ್ತಕಗಳನ್ನು ಅಲಂಕಾರಕ್ಕಿಡಬೇಡಿ, ಶಾಲೆಗಳಲ್ಲಿ ಪರಿಣಾಮಕಾರಿಯಾಗಿ ಬಳಸಿ, ಈ ಬಾರಿ ಎಸ್ಸೆಸ್ಸೆಲ್ಸಿ ಫಲಿತಾಂಶ ಮತ್ತಷ್ಟು ಉತ್ತಮವಾಗಲು ಸಹಕರಿಸಿ ಎಂದರು.
ಕಾರ್ಯಕ್ರಮದಲ್ಲಿ ಕೋಚಿಮುಲ್ ತಾಲೂಕು ವ್ಯವಸ್ಥಾಪಕ ಮಹೇಶ್, ವಿಸ್ತರಣಾಧಿಕಾರಿಗಳಾದ ರಾಮಾಂಜಿನಪ್ಪ, ರಾಜಾಬಾಬು, ನಾಗಪ್ಪ, ಶ್ರೀನಿವಾಸ್, ಸಮೀರ್,ಸಕಾರಿ, ಅನುದಾನ, ಅನುದಾನ ರಹಿತ ಪ್ರೌಢಶಾಲೆಗಳ ಮುಖ್ಯಶಿಕ್ಷಕರು, ಶಿಕ್ಷಕರು ಹಾಜರಿದ್ದರು.