ಉತ್ತಮ ಸಮಾಜ ನಿರ್ಮಿಸಲು ನಿವೃತ್ತ ಪೊಲೀಸರ ಸಹಕಾರ ಅಗತ್ಯ : ಹನುಮಂತಪ್ಪ

ಕೆಜಿಎಫ್.ಏ.೩-ಅಪರಾಧ ರಹಿತ ಉತ್ತಮ ಸಮಾಜ ನಿರ್ಮಿಸಲು ನಿವೃತ್ತ ಪೊಲೀಸರ ಸಹಕಾರ ಅಗತ್ಯವೆಂದು ನಿವೃತ್ತ ಪೊಲೀಸ್ ಇನ್ಸ್‌ಪೆಕ್ಟರ್ ಪಿ.ಬಿ.ಹನುಮಂತಪ್ಪ ಅವರು ಅಭಿಪ್ರಾಯಪಟ್ಟರು.
ನಗರದ ಡಿ.ಎ.ಆರ್. ಪೊಲೀಸ್ ಕವಾಯಿತು ಮೈದಾನದಲ್ಲಿ ನಡೆದ ಪೊಲೀಸ್ ಧ್ವಜ ದಿನಾಚರಣೆಯ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಧ್ವಜ ವಂದನೆ ಸ್ವೀಕರಿಸಿದ ಬಳಿಕ ಅವರು ಮಾತನಾಡುತ್ತಾ, ಅನುಭವಿ ಹಾಗೂ ಉತ್ತಮ ಸೇವೆಗೈದ ನಿವೃತ್ತ ಪೊಲೀಸ್ ಅಧಿಕಾರಿಗಳ, ಸಿಬ್ಬಂದಿಗಳ ಸಲಹೆ, ಸೂಚನೆಗಳಿಂದ ಅಪರಾಧಗಳನ್ನು ತಡೆಗಟ್ಟಲು ಸಾಧ್ಯವೆಂದು ತಿಳಿಸಿದರು.
ಯಾವುದೇ ನಿವೃತ್ತ ಪೊಲೀಸರನ್ನು ಇಲಾಖೆಯು ಗೌರವಿಸಿ, ಸೂಕ್ತ ಸ್ಥಾನಮಾನ ದೊರಕಿಸಲು ಚಿಂತಿಸಬೇಕೆಂದು ಹಾಗೂ ನಿವೃತ್ತ ಪೊಲೀಸರಿಗೆ ಪೊಲೀಸ್ ಕಲ್ಯಾಣ ನಿಧಿಯಿಂದ ನೀಡುವ ಸೌಕರ್ಯದೊಂದಿಗೆ, ಇತರೆ ಸೌಲಭ್ಯಗಳನ್ನು ಸಹ ಕಲ್ಪಿಸಲು ಕೆಜಿಎಫ್‌ನ ಪೊಲೀಸ್ ಅಧೀಕ್ಷಕರು ಇಲಾಖಾ ಮುಖ್ಯಸ್ಥರು, ಸರ್ಕಾರದೊಂದಿಗೆ ವ್ಯವಹರಿಸಿ ನಿವೃತ್ತರಿಗೆ ಮತ್ತಷ್ಟು ಸವಲತ್ತು ಕಲ್ಪಿಸಿಕೊಡಬೇಕೆಂದು ಕೋರಿದರು.
ಜಿಲ್ಲಾ ರಕ್ಷಣಾಧಿಕಾರಿ ಡಾ|| ಕೆ.ಧರಣೀದೇವಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ೧೯೬೫ರ ಇಸವಿ ಏಪ್ರಿಲ್ ೨ ರಂದು ಕರ್ನಾಟಕ ಪೊಲೀಸ್ ಕಾಯ್ದೆಯು ಜಾರಿಗೆ ಬಂದಿದ್ದು, ಅಂದಿನಿಂದಲೇ ಪೊಲೀಸ್ ಧ್ವಜ ದಿನಾಚರಣೆಯನ್ನು ಪೊಲೀಸ್ ಕಲ್ಯಾಣ ದಿನವನ್ನಾಗಿ ಆಚರಿಸುತ್ತಿದ್ದು, ಸರ್ಕಾರವು ಈಗಾಗಲೇ ನಿವೃತ್ತರಿಗೆ ಹಲವು ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಇಲ್ಲಿನ ನಿವೃತ್ತ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ತಂತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಯಾವುದೇ ಸಂದರ್ಭದಲ್ಲಿಯೂ ಸಹ ತಮ್ಮನ್ನು ಭೇಟಿಯಾಗಿ ಸಮಸ್ಯೆ ಬಗೆಹರಿಸಿಕೊಳ್ಳಬಹುದೆಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ೨೦೨೨-೨೩ನೇ ಸಾಲಿನಲ್ಲಿ ನಿವೃತ್ತರಾದ ೧೭ ಮಂದಿ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸಹಾಯಕ ಆಡಳಿತಾಧಿಕಾರಿ ಜಿ. ವಿಶ್ವನಾಥ, ನಿವೃತ್ತ ಪೊಲೀಸ್ ಅಧಿಕಾರಿಗಳ ಸಂಘದ ಪದಾಧಿಕಾರಿಗಳು, ಹಲವು ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಜಿಲ್ಲೆಯ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು ಉಪಸ್ಥಿತರಿದ್ದರು.
ಪೊಲೀಸ್ ಧ್ವಜ ದಿನಾಚರಣೆಯಲ್ಲಿ ಆರ್.ಪಿ.ಐ. ಪ್ರದೀಫ್‌ಕುಮಾರ್ ಅವರ ನೇತೃತ್ವದಲ್ಲಿ ಡಿ.ಎ.ಆರ್, ನಾಗರೀಕ ಮತ್ತು ಮಹಿಳಾ ಪೊಲೀಸ್ ತಂಡಗಳಿಂದ ಆಕರ್ಷಕ ರೀತಿಯಲ್ಲಿ ಪಥಸಂಚಲನ ನಡೆಯಿತು. ಅತಿಥಿಗಳು ಪೊಲೀಸ್ ಧ್ವಜಗಳನ್ನು ಬಿಡುಗಡೆಗೊಳಿಸಿದ ನಂತರ ತಂತಮ್ಮ ದೇಣಿಗೆಯನ್ನು ನೀಡಿದರು.
ಪೊಲೀಸ್ ಪೇದೆ ಶರಣಪ್ಪ ಕವಟಗಿ ಅವರಿಂದ ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರೂಪಣೆ ಹಾಗೂ ಡಿವೈಎಸ್ಪಿ ವಿ.ಎಲ್. ರಮೇಶ್ ಅವರಿಂದ ವಂದನೆಗಳಾದವು.