ಉತ್ತಮ ಸಮಾಜಕ್ಕೆ ಪತ್ರಕರ್ತರ ಮಾರ್ಗದರ್ಶನ ಅಗತ್ಯ – ಎನ್‌ಎಸ್‌ಬಿ

ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಪ್ರಯುಕ್ತ ಕ್ರಿಕೆಟ್ ಪಂದ್ಯಾವಳಿ
ರಾಯಚೂರು.ನ.೨೦- ಉತ್ತಮ ಸಮಾಜ ನಿರ್ಮಾಣಕ್ಕೆ ಪತ್ರಕರ್ತರ ಮಾರ್ಗದರ್ಶನ ಬಹಳ ಮುಖ್ಯ ಎಂದು ಎಐಸಿಸಿ ಕಾರ್ಯದರ್ಶಿ ಎನ್.ಎಸ್.ಬೋಸರಾಜು ಅವರು ಹೇಳಿದರು.
ಅವರಿಂದು ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಪ್ರಯುಕ್ತ ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ರಿಪೋರ್ಟರ್ ಗೀಲ್ಡ್ ಸಹಯೋಗದಲ್ಲಿ ರವಿವಾರ ಹಮ್ಮಿಕೊಂಡಿದ್ದ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ನನ್ನ ೪೦ ವರ್ಷಗಳ ರಾಜಕೀಯ ಅನುಭವದಲ್ಲಿ ಅನೇಕ ಪತ್ರಕರ್ತರನ್ನು ಕಂಡಿದ್ದೇನೆ. ಉತ್ತಮ ಸಮಾಜಕ್ಕಾಗಿ ಪತ್ರಕರ್ತರು ಹಗಲಿರಳು ಶ್ರಮಿಸುತ್ತಿದ್ದಾರೆ. ಜನಪ್ರತಿನಿಧಿಗಳನ್ನು ತಮ್ಮ ವರದಿಗಳ ಮೂಲಕ ಸದಾ ಎಚ್ಚರಿಸುವ ಕೆಲಸ ಮಾಡುತ್ತಿದ್ದಾರೆ. ವೈಯಕ್ತಿಕ ಬದುಕನ್ನು ಲೆಕ್ಕಿಸದೆ ಸಮಾಜಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ಸದಾ ಒತ್ತಡದ ಮಧ್ಯ ಕೆಲಸ ಮಾಡುವ ಪತ್ರಕರ್ತರಿಗೆ ಇಂತಹ ಕ್ರೀಡೆಗಳು ಮತ್ತಷ್ಟು ಉತ್ಸಾಹ ನೀಡಲಿವೆಂದರು.
ನಗರಸಭೆ ಹಿರಿಯ ಸದಸ್ಯರಾದ ಜಯಣ್ಣ ಅವರು ಮಾತನಾಡುತ್ತಾ, ಪತ್ರಕರ್ತರು ೨೪/೭ ರೀತಿ ಬಿಡುವಿಲ್ಲದೇ ಕೆಲಸ ಮಾಡುತ್ತಾರೆ. ಅವರಿಗೆ ವೈಯಕ್ತಿಕ ಜೀವನಕ್ಕೆ ಸಮಯ ಕೊಡಲು ಆಗುವುದಿಲ್ಲ. ಇಂತಹ ಕ್ರೀಡೆಗಳಿಂದ ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ. ಪತ್ರಕರ್ತರು ಕೆಲಸದ ಒತ್ತಡದ ನಡುವೆಯೂ ಕ್ರೀಡೆಗಳಿಗಾಗಿ ಸಮಯ ಮೀಸಲಿಡುವುದು ಒಳ್ಳೆಯ ಬೆಳವಣಿಗೆ. ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಈರೇಶ ನಾಯಕರವರ ಉತ್ಸಾಹ ಹೆಚ್ಚಿಸಲು ಕ್ರೀಡಾಪಟುಗಳಿಗೆ ಸಹಕಾರಿಯಾಗಲಿದೆ. ಇಂತಹ ಚಟುವಟಿಕೆಗಳು ನಿರಂತರವಾಗಿ ನಡೆಯಬೇಕೆಂದರು.
ಪತ್ರಕರ್ತ ಸತ್ಯನಾರಾಯಣ ಅವರು ಮಾತನಾಡುತ್ತಾ, ಸುದ್ದಿಗಾಗಿ ಸದಾ ಮಿಡಿಯುವ ಪತ್ರಕರ್ತರು ತಮ್ಮ ಆರೋಗ್ಯದ ಬಗ್ಗೆ ನಿಷ್ಕಾಳಜಿ ವಹಿಸುತ್ತಾರೆ. ಪತ್ರಕರ್ತರು ಆರೋಗ್ಯ ರಕ್ಷಣೆಗೆ ಒತ್ತು ನೀಡಬೇಕೆಂದರು. ಹಿರಿಯ ಪತ್ರಕರ್ತ ವೀರಾರೆಡ್ಡಿ, ಕಾಂಗ್ರೆಸ್ ಮುಖಂಡ ರುದ್ರಪ್ಪ ಅಂಗಡಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಆರ್.ಗುರುನಾಥ್, ರಾಯಚೂರು ರಿಪೋರ್ಟ್‌ರ್ಸ್ ಗಿಲ್ಡ್ ಅಧ್ಯಕ್ಷ ಚೆನ್ನಬಸವಣ್ಣ, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಶಿವಮೂರ್ತಿ ಹಿರೇಮಠ್, ಹಿರಿಯ ಪತ್ರಕರ್ತರಾದ ವೆಂಕಟಸಿಂಗ್, ಜಗನ್ನಾಥ ದೇಸಾಯಿ, ನಾಗರಾಜ್ ಚಿನಗುಂಡಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.ಈ ಪಂದ್ಯಾವಳಿಯಲ್ಲಿ ಪತ್ರಕರ್ತರ ಮೂರು ತಂಡಗಳು ಭಾಗಿಯಾಗಿದ್ದವು. ಪತ್ರಕರ್ತ ವಿಜಯ್ ಜಾಗಟಗಲ್ ಅವರು ನಿರೂಪಿಸಿದರು.