ಉತ್ತಮ ಸಮಾಜಕ್ಕೆ ಕಾನೂನು ಅತ್ಯಗತ್ಯ

ಹುಬ್ಬಳ್ಳಿ, ನ.11: ಮಾತು ಬಲ್ಲವನಿಗೆ ಜಗಳವಿಲ್ಲ. ಕಾನೂನು ಬಲ್ಲವನಿಗೆ ವ್ಯಾಜ್ಯವಿಲ್ಲ. ಉತ್ತಮ ಸಮಾಜಕ್ಕೆ ಕಾನೂನು ಅತ್ಯಗತ್ಯವಾಗಿದೆ ಎಂದು 1 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಪರಮೇಶ್ವರ ಪ್ರಸನ್ನ ಬಿ. ಹೇಳಿದರು.
ವಕೀಲರ ಸಂಘದ ಸಭಾ ಭವನದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ವಾರ್ತಾ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜದ ಕಟ್ಟ ಕಡೆಯ ದುರ್ಬಲ ವ್ಯಕ್ತಿಗಳಿಗೂ ಸಹ ಕಾನೂನು ಅರಿವು ಮೂಡಬೇಕು. ಕಡು ಬಡತನದಿಂದ ಯಾರೂ ಕೂಡ ಕಾನೂನು ನೆರವಿನಿಂದ ವಂಚಿತರಾಗಬಾರದು. ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ದೊರೆಯಬೇಕಾಗಿದೆ. ಎಲ್ಲರಿಗೂ ಉಚಿತವಾಗಿ ಕಾನೂನು ನೆರವು ದೊರೆಯುವ ನಿಟ್ಟಿನಲ್ಲಿ ಕಾನೂನು ನೆರವು ಕೇಂದ್ರವನ್ನು ತೆರೆಯಲಾಗಿದೆ. ಅದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ಅವರು ಪ್ರತಿಪಾದಿಸಿದರು.

ವಕೀಲರ ಸಂಘದ ಅಧ್ಯಕ್ಷ ಸಿ.ಆರ್. ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂವಿಧಾನದಲ್ಲಿ ಉಲ್ಲೇಖವಿರುವಂತೆ ಕಾನೂನಡಿಯಲ್ಲಿ ಆರ್ಥಿಕವಾಗಿ ದುರ್ಬಲವಾಗಿರುವವರಿಗೂ ನ್ಯಾಯ ಸಿಗಬೇಕು. ಜನರಿಗೆ ತ್ವರಿತವಾಗಿ ನ್ಯಾಯ ಒದಗಿಸಲು ವಕೀಲರು ಮುಂದಾಗಬೇಕು. ಹುಬ್ಬಳ್ಳಿ ನ್ಯಾಯಾಲಯವು ರಾಷ್ಟ್ರ ಮಟ್ಟದಲ್ಲಿ ಉತ್ತಮ ಹೆಸರು ಗಳಿಸಲಿ ಎಂದು ಆಶಿಸಿದರು.

ಪ್ರಧಾನ ಕೌಟುಂಬಿಕ ನ್ಯಾಯಾಲಯದ ಜಿಲ್ಲಾ ನ್ಯಾಯಾಧೀಶರಾದ ಸುವರ್ಣ.ಕೆ. ಮಿರ್ಜಿ, 1 ನೇ ಹೆಚ್ಚುವರಿ ಕೌಟುಂಬಿಕ ನ್ಯಾಯಾಲಯದ ಜಿಲ್ಲಾ ನ್ಯಾಯಾಧೀಶರಾದ ಇಂದಿರಾ ಚೆಟ್ಟಿಯಾರ್, 5 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸಿದ್ದಣ್ಣ ಹಂದ್ರಾಳ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಅಶೋಕ ಅಣ್ವೇಕರ ಸೇರಿದಂತೆ ನ್ಯಾಯಾಧೀಶರು, ಸರ್ಕಾರಿ ಹಾಗೂ ಸಹಾಯಕ ಸರ್ಕಾರಿ ಅಭಿಯೋಜಕರು, ವಕೀಲರ ಸಂಘದ ಪದಾಧಿಕಾರಿಗಳು, ಪೆನೆಲ್ ವಕೀಲರು, ವಕೀಲರ ಸಂಘದ ಸದಸ್ಯರು, ವಕೀಲರು, ಇತರರು ಹಾಜರಿದ್ದರು.

ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ ಹಾಗೂ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಚಿನ್ನಣ್ಣವರ್ ಆರ್.ಎಸ್. ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ವೈ. ದುಂಡರೆಡ್ಡಿ ನಿರೂಪಿಸಿದರು. ತಾಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ರಾಜಶೇಖರ ತಿಳಗಂಜಿ ವಂದಿಸಿದರು.