ಉತ್ತಮ ಸಮಾಜಕ್ಕೆ ಇತಿಹಾಸದ ಪಾತ್ರ ಮುಖ್ಯ


ಕೋಲಾರ,ಅ.೩- ಸಮಾಜದ ಸ್ವಾಸ್ತ್ಯವನ್ನು ಕೆಡಿಸುವವರೇ ಹೆಚ್ಚಾಗಿರುವ ಇಂದಿನ ದಿನಗಳಲ್ಲಿ ಉತ್ತಮ ಸಮಾಜ ನಿರ್ಮಾಣಕ್ಕೆ ಇತಿಹಾಸದ ಪಾತ್ರ ಬಹಳ ಮುಖ್ಯ ಎಂದು ಪದವಿ ಪೂರ್ವ ಕಾಲೇಜುಗಳ ಉಪನಿರ್ದೇಶಕ ರಾಮಚಂದ್ರಪ್ಪ ಹೇಳೀದರು.
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕೋಲಾರ ಜಿಲ್ಲೆಯ ಪದವಿ ಪೂರ್ವ ಕಾಲೇಜುಗಳ ಇತಿಹಾಸ ಉಪನ್ಯಾಸಕರ ವೇದಿಕೆಯ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿ, ಮಕ್ಕಳಿಗೆ ಸತ್ಯವನ್ನು ತಿಳಿಸುವುದು ಇತಿಹಾಸ ಉಪನ್ಯಾಸಕರ ಕರ್ತವ್ಯ, ಶಂಕರ, ರಾಮಾನುಜ, ಮಧ್ವ, ಬಸವ, ಅಂಬೇಡ್ಕರ್, ಕುವೆಂಪು ವಿಚಾರಗಳನ್ನು ವಿದ್ಯಾರ್ಥಿಗಳಲ್ಲಿ ತುಂಬುವಂತಹ ಕೆಲಸ ಮಾಡಿದರೆ ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗುತ್ತದೆ. ಉಪನ್ಯಾಸಕರ ಮಾತು ಮತ್ತು ಕರ್ತವ್ಯ ತಾಳೆಯಾಗಬೇಕೆಂದು ಮಾರ್ಗದರ್ಶನ ನೀಡಿದರು.
ಕರ್ನಾಟಕದ ದ್ವಿತೀಯ ಪಿಯುಸಿ ಪರೀಕ್ಷೆಗಳು ದೇಶಕ್ಕೆ ಮಾದರಿಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ ಅವರು, ವಿದ್ಯಾರ್ಥಿಗಳಿಗೆ ಇಷ್ಟವಾಗುವ, ನಮ್ಮ ಬಗ್ಗೆ ಗೌರವ ಹೆಚ್ಚುವಂತಹ ಉಪನ್ಯಾಸಕರು ನಾವಾದಾಗ ಮಾತ್ರ ನಾವು ಬೋಧಿಸುವ ವಿಷಯ ಅವರ ಮನ ಮುಟ್ಟುತ್ತದೆ ಎಂದರು.
ಇತಿಹಾಸ ಉಪನ್ಯಾಸಕರ ವೇದಿಕೆಯ ಗೌರವಾಧ್ಯಕ್ಷ ನಾಗಾನಂದ ಕೆಂಪರಾಜ್ ಮಾತನಾಡಿ, ಇತಿಹಾಸ ನಮ್ಮ ಪೂರ್ವಜರ ತಪ್ಪು, ಸರಿಗಳ ನಡುವಿನ ಸಾಧನೆಗಳನ್ನು ತಿಳಿಸುತ್ತದೆ. ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎಂಬುದನ್ನು ತಿಳಿಸುವ ಇತಿಹಾಸ ಅಧ್ಯಯನ ಪ್ರತಿಯೊಬ್ಬರ ಕರ್ತವ್ಯವಾಗಲಿ. ಇತಿಹಾಸವಿಲ್ಲದೆ ಪ್ರಪಂಚದ ಪ್ರಗತಿಯೇ ಇಲ್ಲ. ನಮ್ಮ ಯುವ ಪೀಳಿಗೆಯು ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಲು ಇತಿಹಾಸದ ಪಾತ್ರ ಬಹಳ ಮುಖ್ಯ. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವು ಹಿತಾಸಕ್ತಿಗಳ ಸ್ವಾರ್ಥಕ್ಕಾಗಿ ಇತಿಹಾಸವನ್ನು ತಿರುಚುವ ಕೆಲಸವಾಗುತ್ತಿದ್ದು, ಇದನ್ನು ಇತಿಹಾಸ ಬೋಧಿಸುವವರು ಖಂಡಿಸಬೇಕಿದೆ.
ಇತಿಹಾಸಕಾರರಲ್ಲದವರ ಅಡಕತ್ತರಿಯಲ್ಲಿ ಇತಿಹಾಸಕಾರರು, ಇತಿಹಾಸ ರಚನೆಕಾರರು, ಸಂಶೋಧ ಕರು, ಬೋಧಿಸುವವರು ಸಿಕ್ಕಿ ಹಾಕಿಕೊಂಡಿದ್ದೇವೆ. ನಾವು ಯಾವ ಪಂಥೀಯರು ಎಂಬ ಪ್ರಶ್ನೆ, ಗೊಂದಲ ನಮ್ಮಲ್ಲಿ ಮೂಡಿದೆ. ರಾಜಕೀಯ ತೆವಲಿಗೆ ಸತ್ಯದ ಇತಿಹಾಸ ಮರೆ ಮಾಚುವ ಕೆಲಸ ಬೇಡ ಎಂದರು.
ನಮ್ಮ ಜಿಲ್ಲೆಯಲ್ಲಿ ಸದಾ ಇತಿಹಾಸ ಚಟುವಟಿಕೆಗಳು ಮುಂದುವರೆದಿದ್ದು, ವಿ.ಎಸ್.ಎಸ್.ಶಾಸ್ತ್ರಿ, ಪ್ರೊ.ನರಸಿಂಹನ್, ಡಾ.ಶಿವಪ್ಪ ಅರಿವು, ಗೋಪಿ, ಧನಪಾಲ್, ಮುಂತಾದವರ ಕೊಡುಗೆಯನ್ನು ನೆನಪಿಸಿದರು.
ವೇದಿಕೆ ಅಧ್ಯಕ್ಷ ರತ್ನಪ್ಪ ಮೇಲಾಗಾಣಿ ಮಾತನಾಡಿ, ಇತಿಹಾಸ ಬೋಧನೆ, ನೀಲಿನಕ್ಷೆ ಪ್ರಶ್ನೆ ಪತ್ರಿಕೆಗಳ ತಯಾರಿ ವಿಷಯಗಳನ್ನು ಅರಿತು ಉತ್ತಮ ಬೋಧನೆ ಮಾಡಲು ಇತಿಹಾಸ ಉಪನ್ಯಾಸಕರಿಗೆ ಈ ಕಾರ್ಯಾಗಾರ ಏರ್ಪಡಿಸಲಾಗಿದೆ ಎಂದರು.
ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಡಾ.ಸುರೇಶ್, ನಾರಾಯಣಮ್ಮ, ಭಾಗವಹಿಸಿ ಉಪಯುಕ್ತ ಮಾಹಿತಿಗಳನ್ನು ತಿಳಿಸಿಕೊಟ್ಟರು. ರತ್ನಪ್ಪ ಸ್ವಾಗತಿಸಿ, ಶ್ರೀನಿವಾಸ್, ಗಂಗೋಚಿರಾವ್ ನಿರೂಪಿಸಿ, ಗೋಪಿ ವಂದಿಸಿದರು.
ಕಾರ್ಯಕ್ರಮದಲ್ಲಿ ಪದಾಧಿಕಾರಿ ಗಳಾದ ನಾರಾಯಣಪ್ಪ, ಎಂ.ಪಿ. ನಾರಾಯಣ ಸ್ವಾಮಿ, ಮಾಲಿನಿ, ನಾರಾಯಣ ಸ್ವಾಮಿ, ಮಂಜುನಾಥ್, ಶಂಕರ್, ಉಪಸ್ಥಿತರಿದ್ದರು.