ಉತ್ತಮ ಸಂಸ್ಕಾರಗಳಿಗೆ ಮಠ ಮಾನ್ಯಗಳ ಕೊಡುಗೆ ಅಪಾರ : ಸೇಡಂ

ಭಾಲ್ಕಿ:ಜ.20: ಮನುಷ್ಯರು ಉತ್ತಮ ಸಂಸ್ಕಾರವಂತರಾಗಲು ಮಠ ಮಾನ್ಯಗಳ ಕೊಡುಗೆ ಅಪಾರವಾಗಿದೆ ಎಂದು ಕೊತ್ತಲ ಬಸವೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಸವರಾಜ ಪಾಟೀಲ ಸೇಡಂ ಅಭಿಪ್ರಾಯಪಟ್ಟರು.

ತಾಲೂಕಿನ ಖಟಕ ಚಿಂಚೋಳಿ ಗ್ರಾಮದ ಹುಗ್ಗೆಳ್ಳಿ ಹಿರೇಮಠ ಸಂಸ್ಥಾನದಲ್ಲಿ ನಡೆದ ಬಸವಲಿಂಗ ಶಿವಾಚಾರ್ಯರ 72ನೇ ಸಂಸ್ಮರಣೊತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು. ದಿನನಿತ್ಯ ಮನುಷ್ಯನ ಮೈಗೆ ಅಂಟಿಕೊಂಡಿರುವ ಕೊಳೆ ತೊಳೆಯ ಬೇಕಾದರೆ ಇಂತಹ ಮಠ ಮಾನ್ಯಗಳ ಕಾರ್ಯ ಬಹು ಮುಖ್ಯವಾಗಿದೆ. ಮಠಗಳಿಗೆ ತಮ್ಮದೇ ಆದ ಮಹತ್ವದ ಪಾತ್ರಗಳಿವೆ. ನಮ್ಮಲ್ಲಿಯ ಎಲ್ಲಾ ಮಠಗಳು ಚನ್ನಾಗಿದ್ದರೆ ನಮ್ಮ ಸಂಸಾರ ಚೆನ್ನಾಗಿ ನಡೆಯುತ್ತದೆ. ಮಠಗಳಲ್ಲಿಯ ಗುರುಗಳು ನಮ್ಮನ್ನು ತಿದ್ದೀ, ತೀಡಿ ನಡೆಸುತ್ತಾರೆ. ಹೀಗಾಗಿ ಮಠ ಮಾನ್ಯಗಳಿಗೆ ಎಲ್ಲರ ಸಹಕಾರ ಅತ್ಯಗತ್ಯವಾಗಿದೆ ಎಂದು ಹೇಳಿದರು.

ಸಾನಿಧ್ಯವಹಿಸಿ ಮಾತನಾಡಿದ ಹಿರೇನಾಗಾವದ ಶ್ರೀ ಜಯಶಾಂತಲಿಂಗ ಮಹಾಸ್ವಾಮಿಗಳು, ನಾವು ಧರ್ಮದಿಂದ ನಡೆಯುವ ಬದುಕಿಗೆ ಗೌರವಕೊಟ್ಟು ನಡೆದರೆ ನಮ್ಮ ಬಾಳು ಸುಂದರವಾಗುತ್ತದೆ. ಸಂತ ಮತ್ತು ಮಹಾಂತರ ಬಗ್ಗೆ ತುಲನೆ ಮಾಡಬೇಡಿ. ಸಂತರು ಆತ್ಮ ತೃಪ್ತಿಯಕಡೆ ಗಮನ ಕೊಟ್ಟರೆ, ಮಹಾಂತರು ಭಕ್ತರ ಬದುಕು ಹಸನಾಗಲು ಶ್ರಮಿಸುವರು. ಧರ್ಮ ಎನ್ನುವುದು ಸಮುದ್ರವಿದ್ದಂಗೆ. ಧರ್ಮದ ಕಾರ್ಯಮಾಡುವಲ್ಲಿ ಖಟಕ ಚಿಂಚೋಳಿಯ ಹುಗ್ಗೆಳ್ಳಿ ಹಿರೇಮಠ ಶ್ರಮಿಸುತ್ತಿದೆ. ಶ್ರೀ ಬಸವಲಿಂಗ ದೇವರು ಆದರ್ಶಕ್ಕಾಗಿ ಸ್ವಾಮಿಗಳಾಗಿದ್ದಾರೆ. ಇಂತಹ ಸ್ವಾಮಿಗಳ ಮಾರ್ಗದರ್ಶನದಲ್ಲಿ ನಡೆಯುವ ಭಕ್ತರೆಲ್ಲರೂ ಧನ್ಯರು ಎಂದು ಹೇಳಿದರು.

ಗಡಿಗೌಡಗಾಂವ ಸಂಸ್ಥಾನ ಹಿರೇಮಠದ ಡಾ| ಶಾಂತವೀರ ಶಿವಾಚಾರ್ಯರು ಮಾತನಾಡಿ, ಸ್ವಾಮಿಗಳಾದವರು ಭಕ್ತರ ದುಶ್ಚಟಗಳ ಬಿಕ್ಷೆ ಬೇಡಬೇಕು. ಭಕ್ತರಲ್ಲಿಯ ದುಶ್ಚಟಗಳು ದೂರವಾದರೆ ಮಾತ್ರ ಸ್ವಾಮಿಗಳ ಆದರ್ಶಗಳಿಗೆ ಬೆಲೆ ಬರುವುದು ಎಂದು ಹೇಳಿದರು.

ಜೈಭಾರತಮಾತಾ ಸೇವಾ ಸಮಿತಿಯ ಪಪ್ಪು ಪಾಟೀಲ ಖಾನಾಪುರ ಮಾತನಾಡಿ, ದೇಶಕ್ಕಾಗಿ ದುಡಿಯಬೇಕು. ದೇಶ ವಿದ್ದರೆ ಧರ್ಮ ರಕ್ಷಿಸಲು ಸಾಧ್ಯ. ಹೀಗಾಗಿ ನಮ್ಮೆಲ್ಲರಲ್ಲಿಯೂ ದೇಶಾಭಿಮಾನ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಜಿ ಶಾಸಕ ಪ್ರಕಾಶ ಖಂಡ್ರೆ, ಅಭಿಮಾನ ಇರುವ ಮನುಷ್ಯ ಎಲ್ಲಿಯೂ ಬದುಕ ಬಲ್ಲ. ಹೀಗಾಗಿ ನಾವೆಲ್ಲರೂ ಅಭಿಮಾನದಿಂದ ಜೀವನ ಸಾಗಿಸಬೇಕು ಎಂದು ಹೇಳಿದರು. ಸಂಸ್ಥಾನ ಹಿರೇಮಠ ಹುಡಗಿಯ ಶ್ರೀ ವೀರುಪಾಕ್ಷ ಶಿವಾಚಾರ್ಯರು, ಚಾಂಬೋಳ ಹಿರೇಮಠದ ಮುರಘೇಂದ್ರ ದೇವರು ಸಾನಿಧ್ಯ ವಹಿಸಿದ್ದರು. ಸಂಸ್ಥಾನ ಹಿರೇಮಠ (ಹುಗ್ಗೆಳ್ಳಿ)ಯ ಶ್ರೀ ಬಸವಲಿಂಗ ದೇವರು ನೇತೃತ್ವ ವಹಿಸಿದ್ದರು. ಶ್ರೀ ರುದ್ರಮುನಿ ದೇವರು ಮತ್ತು ಶ್ರೀ ನೀಲಕಂಠ ಸ್ವಾಮಿಗಳು ಸಮ್ಮುಖ ವಹಿಸಿದ್ದರು. ರಮೇಶ ಕಡಗಂಚಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕೆ.ಎಸ್.ಐ.ಐ.ಡಿ.ಸಿ ಅದ್ಯಕ್ಷ ಡಾ| ಶೈಲೇಂದ್ರ ಬೆಲ್ದಾಳೆ, ವಿ.ಕೆ.ಪಾಟೀಲ ಶಾಲೆಯ ಕಾರ್ಯದರ್ಶಿ ಮಲ್ಲಿಕಾರ್ಜುನ ಪಾಟೀಲ, ವೈದ್ಯ ಡಾ| ಶಿವರಾಜ ಅಲಶೆಟ್ಟೆ ಯವರು ಬಸವಲಿಂಗ ಶಿವಾಚಾರ್ಯರ ಬಗ್ಗೆ ಮಾತನಾಡಿದರು.

ಇದೇವೇಳೆ ವಿವಿಧ ಕ್ಷೆತ್ರಗಳಲ್ಲಿ ಸಾಧನೆ ಮಾಡಿದ ರೇವಣಸಿದ್ದಪ್ಪ ಜಲಾದೆ, ಬಸವರಾಜ ಚನಮಲ್, ಅಭಿಶೇಖ ಪೋಲಾ, ಡಾ| ಸಿದ್ದೇಶ್ವರ ಪಾಟೀಲ, ಶೇಖ ಶಾ ಪಟೇಲ, ನಿತೀನ ಪಾಟೀಲ, ಸಿದ್ದರಾಜ ಮೆಂಗಾ, ಸುಬ್ರಮಣ್ಯ ರವರಿಗೆ ವಿಶೇಷ ಗೌರವ ಸನ್ಮಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ರಾಗಿಣಿ ವಿವೇಕಾನಂದ ಮಠಪತಿ, ರಮೇಶ ಅಲಶೆಟ್ಟೆ, ಅನೀಲಕುಮಾರ ಪಟ್ನೆ, ಲಕ್ಷ್ಮೀ ನಾಗಯ್ಯಾ ಸ್ವಾಮಿ, ಭೀಮಣ್ಣಾ ಐನಾಪೂರೆ ಕಾಡವಾದ, ವೆಂಕಟ ಬಿರಾದಾರ ಬಾಜೋಳಗಾ ಉಪಸ್ಥಿತರಿದ್ದರು.

ರಮೇಶ ಅಲಶೆಟ್ಟೆ ಸ್ವಾಗತಿಸಿದರು. ರೇವಣಸಿದ್ದ ಜಾಡರ ನಿರೂಪಿಸಿದರು. ರಮೇಶ ಕಡಗಂಚಿ ವಂದಿಸಿದರು.