ಸಂಜೆವಾಣಿ ವಾರ್ತೆ
ಸಂಪಾದಕರಿಗೆ, ಜು.31: ಮಕ್ಕಳಲ್ಲಿ ಅಡಗಿರುವ ಸುಪ್ತಪ್ರತಿಭೆಯನ್ನು ಹೊರ ತರುವ ಗುರುತರ ಜವಾಬ್ದಾರಿ ಶಿಕ್ಷಕರ ಮೇಲಿದೆ.ಇದನ್ನು ಅರಿತ ಡಾ.ಸರ್ವೇಪಲ್ಲಿ ರಾಧಾಕೃಷ್ಣನ್ ಅವರು ದೇಶದ ಭವಿಷ್ಯ ತರಗತಿ ಕೋಣೆಯಲ್ಲಿ ನಿರ್ಮಾಣವಾಗುತ್ತದೆ ಎಂದು ಹೇಳಿದ್ದಾರೆ ಎಂದು ಕರ್ನಾಟಕ ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ರವಿಚೇಳ್ಳಗುರ್ಕಿ ಹೇಳಿದರು.
ತಾಲ್ಲೂಕಿನ ಶ್ರೀ ಕ್ಷೇತ್ರ ಚೇಳ್ಳಗುರ್ಕಿಯ ಶ್ರೀ ಎರ್ರಿಸ್ವಾಮಿ ಸರ್ಕಾರಿ ಪ್ರೌಢಶಾಲೆ ಮೈದಾನದಲ್ಲಿ ಕರ್ನಾಟಕ ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆ ಬಳ್ಳಾರಿ ಜಿಲ್ಲಾ ಘಟಕದಿಂದ ಹಮ್ಮಿಕೊಂಡಿದ್ದ ಉತ್ತಮ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿ ಶ್ರದ್ಧೆಯಿಂದ ವಿದ್ಯೆ,ಶ್ರಮದಿಂದ ಫಲ ಸಿಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಮನೆಯ ಹಿನ್ನೆಲೆ, ತಂದೆ ತಾಯಿಯರ ಕಷ್ಟ ಅರಿತು, ಶ್ರದ್ಧೆಯಿಂದ ಓದಬೇಕು.ಹೆಚ್ಚು ಅಂಕ ಪಡೆಯಬೇಕು.ನಿಮ್ಮ ಕಾಲ ಮೇಲೆ ನೀವು ನಿಲ್ಲುವಂತೆ ಆಗಬೇಕು ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಲೋಕೇಶ್ವರಿಯವರು ಎರ್ರಿತಾತನವರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿದರು.
ಕರ್ನಾಟಕ ಏಕೀಕರಣ ಹೋರಾಟಗಾರರಾದ ಕರಿಬಸವನ ಗೌಡ ಅವರು ಗಿಡಕ್ಕೆ ನೀರೆರೆದು ಉದ್ಘಾಟಿಸಿ ಮಾತನಾಡಿ ಅರವತ್ತು ಎಪ್ಪತ್ತು ವರ್ಷಗಳ ಹಿಂದೆ ನಾವು ಮರಳಿನಲ್ಲಿ ಅಕ್ಷರ ಅಭ್ಯಾಸ ಮಾಡಿದ್ದೇವೆ. ಆಗ ಮರಳಯ್ಯ ಎನ್ನುವ ಶಿಕ್ಷಕರು ಒಬ್ಬರೇ ಎರಡು ನೂರು ಮಕ್ಕಳಿಗೆ ವಿದ್ಯೆ ಕಲಿಸಿದರು. ಈಗ ಮೂವತ್ತು ಮಕ್ಕಳಿಗೆ ಒಬ್ಬ ಶಿಕ್ಷಕರನ್ನು ಸರ್ಕಾರ ನೇಮಕ ಮಾಡುತ್ತಿದೆ.ಆದ್ದರಿಂದ ಶಿಕ್ಷಕರು ಶ್ರಮವಹಿಸಿ ಕಲಿಸಿದಾಗ ಮಕ್ಕಳು, ಊರು ತನ್ನಷ್ಟಕ್ಕೆ ತಾನೇ ತಾನಾಗಿ ಉದ್ಧಾರವಾಗುತ್ತದೆ.ಜೊತೆಗೆ ಸನ್ಮಾನ ಗೌರವಗಳು ಲಭಿಸುತ್ತವೆ ಎಂದು ಶಿಕ್ಷಕರಿಗೆ ಕಿವಿಮಾತು ಹೇಳಿದರು.
ಶ್ರೀ ಎರ್ರಿಸ್ವಾಮಿ ಪ್ರೌಢಶಾಲೆ ಮುಖ್ಯ ಗುರುಗಳಾದ ಎಂ.ರೇಣುಕಾ, ಶಿಕ್ಷಕರಾದ ಟಿ.ಎಚ್. ಎಂ.ಶೋಭಾ, ಆನಂದ ಸುಮ,ಸುನೀತಾ ಯು.,ದಾಕ್ಷಾಯಿಣಿ ಮುಳಗುಂದ ಮಠ,ಉಮಾದೇವಿ ಹಾಗೂ ಸುಮಲತಾ ಅವರನ್ನು ಸನ್ಮಾನಿಸಿ,ಗೌರವಿಸಲಾಯಿತು.
ಗ್ರಾಮ ಪಂಚಾಯಿತಿ ಸದಸ್ಯರಾದ ಹುಬ್ಬಳ್ಳಿ ನಾಗರಾಜ್, ಊರಿನವರಾದ ತಿಪ್ಪೇರುದ್ರ,ಭೀಮಲಿಂಗ,ಪ್ರಾಥಮಿಕ ಶಾಲೆ ಬಡ್ತಿ ಮುಖ್ಯ ಗುರುಗಳಾದ ಶಶಿರೇಖಾ,ಶಿಕ್ಷಕರಾದ ಮಂಜುಳ,ಶಿವರಾಜ್, ಸುದರ್ಶನ್ ವಿದ್ಯಾರ್ಥಿಗಳು ಹಾಗೂ ಅಡುಗೆ ಸಿಬ್ಬಂದಿ ಉಪಸ್ಥಿತರಿದ್ದರು.