ಉತ್ತಮ ಶಿಕ್ಷಕರಿಗೆ ಅನಿತಾ ಕೌಲ್ ಪ್ರಶಸ್ತಿ

ಕೋಲಾರ.ಸೆ೫:ಶಿಕ್ಷಕರಲ್ಲಿ ಬದ್ದತೆ ಮತ್ತು ಪ್ರಾಮಾಣಿಕತೆ ಹೆಚ್ಚಿಸುವ ದೃಷ್ಟಿಯಿಂದ ಅನಿತಾ ಕೌಲ್ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ನೀಡಲಾಗುವುದು ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಸಂಚಾಲಕರು ಆದ ಪ್ರಶಸ್ತಿ ಸಮಿತಿಯ ಡಿ.ಎನ್ ಮುಕುಂದ ತಿಳಿಸಿದರು.
ನಗರದ ಸಂಪೂರ್ಣ ಹೊಟೆಲ್‌ನಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯಿಂದ ಏರ್ಪಡಿಸಿದ್ದ ಅನಿತಾ ಕೌಲ್ ಪ್ರಶಸ್ತಿಗೆ ಆಹ್ವಾನ ಘೋಷ್ಟಿಯಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಹತ್ತು ಜನ ಶಿಕ್ಷಕರು ಹಾಗೂ ೫ ಜನ ಎಸ್.ಡಿ.ಎಮ್.ಸಿ ಅಧ್ಯಕ್ಷರಿಗೆ ಈ ಪ್ರಶಸ್ತಿಯನ್ನು ನೀಡುತ್ತಿದ್ದು, ಜಿಲ್ಲೆಯ ಆಸಕ್ತ ಮತ್ತು ಅರ್ಹ ಶಿಕ್ಷಕರು ಪ್ರಶಸ್ತಿಗೆ ಅರ್ಜಿ ಸಲ್ಲಿಸುವಂತಾಗಬೇಕು ಎಂದರು.
ಖಾಸಗಿ, ಅನುದಾನಿತ ಮತ್ತು ಸರ್ಕಾರಿ ಪ್ರಾಥಮಿಕ/ಪ್ರೌಢ ಶಿಕ್ಷಕ-ಶಿಕ್ಷಕಿಯರು ಅರ್ಜಿ ಸಲ್ಲಿಸಲು ಅವಕಾಶವಿದ್ದು, ತಮ್ಮ ಪರಿಚಯದಲ್ಲಿ ಮಕ್ಕಳ ಕಲಿಕೆ ವೈಜ್ಞಾನಿಕ ಚಿಂತನೆ, ಶಾಲೆಯ ಪ್ರಗತಿ ಮತ್ತಿತರ ವಿಚಾರಗಳ ಕುರಿತಾಗಿ ಪ್ರಸ್ತಾವನೆ ಸಲ್ಲಿಸಿ ಪ್ರಶಸ್ತಿ ಪಡೆಯಬಹುದಾಗಿದೆ. ರಾಜ್ಯ ಪ್ರಶಸ್ತಿಗೆ ಪ್ರಸ್ತಾವನೆಗಳನ್ನು ಪರಿಶೀಲಿಸಲು ಈಗಾಗಲೇ ಸಮಿತಿಯನ್ನು ರಚಿಸಲಾಗಿದೆ ಎಂದು ತಿಳಿಸಿದರು.
ಸಮಿತಿಯ ಜಿಲ್ಲಾಧ್ಯಕ್ಷ ಜಿ.ಶ್ರೀನಿವಾಸ್, ಕಾರ್ಯದರ್ಶಿ ಶರಣಪ್ಪ ಜಮಾದಾರ್,ಖಜಾಂಚಿ ಕೆ.ವಿ.ಜಗನ್ನಾಥ, ಮಹಿಳಾ ಸಂಘಟನಾ ಕಾರ್ಯದರ್ಶಿ ಕೆ.ಸಿ ಪದ್ಮಾವತಿ, ಸಹಕಾರ್ಯದರ್ಶಿ ಸುರೇಶ್ ಕುಮಾರ್ ಸಂಘಟನಾ ಕಾರ್ಯದರ್ಶಿ ನಾಗರಾಜ್ ಸಿ.ವಿ ಮತ್ತಿತರರು ಉಪಸ್ಥಿತರಿದ್ದರು.