ಉತ್ತಮ ಶಿಕ್ಷಕರಿಂದ ಸದೃಢ ಸಮಾಜ ನಿರ್ಮಾಣ

ಹುಬ್ಬಳ್ಳಿ. ಜ.೧೪: ಉತ್ತಮ ಶಿಕ್ಷಕರಿಂದ ಸದೃಢ ಸಮಾಜ ನಿರ್ಮಾಣ ಸಾಧ್ಯ ಎಂದು ಹುಬ್ಬಳ್ಳಿ ಕಾರಟಗಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯ ಡಾ.ರಾಮಚಂದ್ರ ಕಾರಟಗಿ ಹೇಳಿದರು.ಹಳೇ ಹುಬ್ಬಳ್ಳಿ ಹೆಗ್ಗೇರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾ ಘಟಕದಿಂದ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು ವಿವೇಕಾನಂದರ ಆದರ್ಶದ ನುಡಿಗಳು ಪ್ರತಿಯೊಬ್ಬರಿಗೂ ಪ್ರೇರಕವಾಗಿದ್ದವು.ವಿವೇಕಾನಂದರು ಹೇಳಿದಂತೆ ದೇಹಬಲ,ಆತ್ಮಬಲ ಹಾಗೂ ಬುದ್ದಿಬಲ ಬೆಳೆಸಿಕೊಂಡಾಗ ಸಾಧನೆಯ ಮೈಲಿಗಲ್ಲು ಹತ್ತಲು ಸಾಧ್ಯ. ಉನ್ನತ ಸ್ಥಾನ ಗಳಿಸುವುದಕ್ಕಿಂತ ಜೀವನದಲ್ಲಿ ಸಾಧನೆ ಮಾಡುವುದು ಮುಖ್ಯ. ವಿದ್ಯಾರ್ಥಿಗಳು ದೇಹಬಲ ಸದೃಢಗೊಳಿಸಬೇಕು.ಪೌಷ್ಟಿಕಾಂಶವುಳ್ಳ ಆಹಾರ ಸೇವನೆ ಮಾಡಬೇಕು.ಉತ್ತಮ ವಿಚಾರಗಳನ್ನು ಶಿಕ್ಷಕರಿಂದ ಪಡೆಯಬೇಕು. ನೀವು ಬೆಳೆದು ಮತ್ತೊಬ್ಬರನ್ನೂ ಬೆಳೆಸಬೇಕು ಎಂದು ಸಲಹೆ ನೀಡಿದರು.ಎಲ್ಲಾ ದೌರ್ಬಲ್ಯಗಳನ್ನು ಮೀರಿ ಸದೃಢ ಸಮಾಜ ನಿರ್ಮಾಣ ಮಾಡಬಹುದು ಎಂದು ತೋರಿಸಿಕೊಟ್ಟ ಮೊದಲ ಸಂತ ವಿವೇಕಾನಂದರು. ಬಡವರ ಸೇವೆಯೇ ನಿಜವಾದ ದೇವರ ಸೇವೆ ಎಂದು ಪ್ರತಿಪಾದಿಸಿ ಸಮಾಜ ಸೇವೆಯೇ ಮಾನವನ ನಿಜವಾದ ಜೀವಂತಿಕೆ ಎಂದರು.ಉತ್ತಮ ಶಿಕ್ಷಕ ವೃಂದ ಸಿಗುವುದು ಅಪರೂಪ ಅಂತಹ ಶಿಕ್ಷಕರ ತಂಡ ನಿಮಗೆಲ್ಲರಿಗೂ ದೊರೆತಿದೆ ಅವರ ಮಾರ್ಗದರ್ಶನದಲ್ಲಿ ಮುಂದೆ ಸಾಗಬೇಕು.ಸಾಜಿಕ ಜಾಲತಾಣದ ದಾಸರಾಗದೆ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು.ಒತ್ತಡದ ವಾತಾವರಣದಿಂದಾಗಿ ಮನಸ್ಸು ವಿಚಲಿತವಾಗುತ್ತದೆ ಅದಕ್ಕೆ ಆಸ್ಪದ ನೀಡಬಾರದು ಎಂದರು.ಈ ವೇಳೆ ಮೋತಿ ಲಾಲ್ ರಾಥೋಡ್,ಯಲ್ಲಪ್ಪ ಬಾಗಲಕೋಟೆ, ಡಾ.ಬಸವರಾಜ್ ತಲವಾಯಿ ಮತ್ತಿತರರು ಇದ್ದರು.