ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಎನ್‍ಎಸ್‍ಎಸ್ ಸಹಕಾರಿ

(ಸಂಜೆವಾಣಿ ವಾರ್ತೆ)
ನವಲಗುಂದ,ಜ12 : ವಿದ್ಯಾರ್ಥಿಗಳು ಈಗಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸ್ಪರ್ಧಾ ಮನೋಭಾವ ಹೊಂದಿರಬೇಕು ನೀವು ಏನಾಗಬೇಕೆಂದು ಬಯಸಿದ್ದೀರೋ ಆ ಗುರಿಯತ್ತ ನಿರಂತರ ಪ್ರಯತ್ನ ಮಾಡಿದರೆ, ನಿಮ್ಮ ಕನಸು ಸುಲಭವಾಗಿ ಈಡೇರುತ್ತದೆ ಎಂದು ತಾ ಪಂ ಇ ಓ ಭಾಗ್ಯಶ್ರೀ ಜಹಾಗೀರದಾರ ಹೇಳಿದರು.

ಅವರು ತಾಲ್ಲೂಕಿನ ಗುಡಿಸಗಾರ ಗ್ರಾಮದಲ್ಲಿ ನವಲಗುಂದ ಶಂಕರ ಮಹಾವಿದ್ಯಾಲಯದ ಎನ್ ಎಸ್ ಎಸ್ ಘಟಕದ ಏಳನೇ ದಿನದ ವಿಶೇಷ ಶಿಬಿರದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು ನಿಮ್ಮ ಜ್ಞಾನವನ್ನು ವೃದ್ಧಿಸಲು ನಿರಂತರ ದಿನಪತ್ರಿಕೆ, ಮ್ಯಾಗಜಿನ್, ಪುಸ್ತಕಗಳನ್ನು ಓದುತ್ತೀರಬೇಕು. ಓದು ಜತೆ ಜತೆಗೆ ಸಾಮಾಜದ ಜತೆ ಬಾಂದವ್ಯ ಹೊಂದಲು ಇಂತಹ ಎನ್ ಎಸ್ ಎಸ್ ಶಿಬಿರಗಳು ನಿಮಗೆ ಆರೋಗ್ಯಕರವಾದ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಹಾಯಕವಾಗಿವೆ. ವಿದ್ಯಾರ್ಥಿ ಜೀವನ ಎಂದರೆ ಅದೊಂದು ಗೋಲ್ಡನ್ ಪಿರಿಯಡ್, ಅದನ್ನು ವ್ಯರ್ಥ ಮಾಡಿಕೊಳ್ಳದೇ ಪ್ರಮಾಣಿಕ ಪ್ರಯತ್ನಗಳು ನಿಮ್ಮಲ್ಲಿ ಸದಾ ಇರಬೇಕು, ಯುಪಿಎಸ್ ಸಿ,ಕೆಎಎಸ್ ಪರೀಕ್ಷೆಗಳನ್ನು ಎದುರಿಸಿ ಅದರಲ್ಲಿ ಯಶಸ್ವಿಯಾಗಿ ಎಂದು ಸಲಹೆ ನೀಡಿದರು.

ಎನ್ ಎಸ್ ಎಸ್ ಕಾರ್ಯಕ್ರಮ ಅಧಿಕಾರಿಗಳಾದ ಡಾ.ಮಾರುತಿ ಹಾರೋಗೇರಿ ಮಾತನಾಡಿ ಪ್ರತಿವರ್ಷ ನಾವು ಯಾವುದೇ ಗ್ರಾಮದಲ್ಲಿ ಕ್ಯಾಂಪ್ ಮಾಡಿದರೂ ಭಾಗ್ಯಶ್ರೀ ಅವರು ತಮ್ಮ ಸಿಬ್ಬಂದಿಯೊಂದಿಗೆ ಬಂದು ಗ್ರಾಮದ ಕೆರೆ ಸ್ವಚ್ಚತೆ,ಗ್ರಾಮದ ನೈರ್ಮಲ್ಯ ಅರಿವು ಮೂಡಿಸುವುದರ ಜತೆಗೆ ಖುದ್ದಾಗಿ ತಾವೇ ಸ್ವಚ್ಚತಾ ಕಾರ್ಯದಲ್ಲಿ ಭಾಗಿಯಾಗುತ್ತಾರೆ. ಸ್ವಯಂ ಸೇವಕರಲ್ಲಿ ಆತ್ಮವಿಶ್ವಾಸ ಮೂಡಿಸಿ, ಸಮಾಜಕ್ಕಾಗಿ ನಾವಿದ್ದೇವೆ ಎಂಬ ಸಂದೇಶ ಮೂಡಿಸುತ್ತಾರೆ. ಶಿಬಿರಾರ್ಥಿಗಳಿಗೆ ಯೋಗ, ಪ್ರಾಣಯಾಮ, ಮಾಡಿಸಿ ಸ್ವಯಂ ಸೇವಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗುತ್ತಾರೆ.ಇಂತಹ ಅಧಿಕಾರಿಗಳು ಸಿಗುವುದು ಅಪರೂಪ ಎಂದರು.

ಕಾರ್ಯಕ್ರಮದಲ್ಲಿ ಗುಡಿಸಾಗರ ಗ್ರಾಮ ಪಂಚಾಯತಿ ಅಧ್ಯಕ್ಷ ರವಿ ಹಳ್ಳಾಳ, ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಎಸ್ ವಿ ಬಡಿಗೇರ, .ಪಿ ಜಿ ಕೊಪ್ಪದ, ಎ ಜಿ ಜಕ್ಕನಗೌಡ್ರ, ಹಾಗೂ ತಾ ಪಂ ಸಿಬ್ಬಂದಿಯವರು, ಸ್ವಯಂ ಸೇವಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.