ಉತ್ತಮ ವರ್ತನೆ, ಸಂವಹನ,ನಡವಳಿಕೆಯಿಂದ ಸಾಧಕರಾಗಿ

ಕೋಲಾರ,ಡಿ.೪: ಉತ್ತಮ ವರ್ತನೆ, ಸಂವಹನ, ನಡವಳಿಕೆಯಿಂದ ಸಾಧಕರಾಗಿ, ಬೆಂಗಳೂರು ಉತ್ತರ ವಿವಿಯ ಘನತೆಯನ್ನು ವಿಶ್ವದೆಲ್ಲೆಡೆ ಪಸರಿಸುವ ವಿವಿಯ ರಾಯಭಾರಿಗಳಾಗಿ ಎಂದು ಗಣಿತಶಾಸ್ತ್ರ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ವಿವಿಯ ನೂತನ ಕುಲಪತಿ ಪ್ರೊ.ನಿರಂಜನ ವಾನಳ್ಳಿ ಕರೆ ನೀಡಿದರು.
ನಗರ ಹೊರವಲಯದ ಟಮಕದಲ್ಲಿನ ವಿವಿಯ ಆಡಳಿತ ಭವನದಲ್ಲಿ ಗಣಿತಶಾಸ್ತ್ರ ವಿಭಾಗದ ಅಂತಿಮ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ವಿವಿಯ ಗಣಿತಶಾಸ್ತ್ರ,ಭೌತಶಾಸ್ತ್ರ,ಗಣಕಶಾಸ್ತ್ರ ವಿಭಾಗಗಳು ನೀಡಿದ ಸನ್ಮಾನ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.
,ವಿದ್ಯಾರ್ಥಿಗಳು, ಅಧ್ಯಾಪಕರಿಗೆ ನ್ಯಾಯ ಒದಗಿಸಬೇಕಾಗಿದೆ, ನೂತನ ಕಟ್ಟಡ,ಮೂಲಸೌಲಭ್ಯಗಳು, ಹಾಸ್ಟೆಲ್,ಸುಸಜ್ಜಿತ ಪ್ರಯೋಗಾಲಯಗಳು, ಗ್ರಂಥಾಲಯಗಳು ಎಲ್ಲವೂ ಅಗತ್ಯವಿದ್ದು, ಎಲ್ಲರ ಸಹಕಾರದಿಂದ ಇವೆಲ್ಲವನ್ನು ಮಾಡಿಸುವ ಆಸೆ ಮತ್ತು ವಿಶ್ವಾಸ ನನ್ನಲ್ಲಿದೆ ಎಂದು ತಿಳಿಸಿದರು.
ನನ್ನ ಸೇವೆ ನನ್ನನ್ನು ಗುರುತಿಸಿದೆ, ಗೌರವಿಸುವಂತೆ ಮಾಡಿದೆ, ನನ್ನಲ್ಲಿ ಆದ್ಯತೆಗಳಿವೆ, ಹಣ ಮಾಡುವ ಉದ್ದೇಶವಂತೂ ಇಲ್ಲವೇ ಇಲ್ಲ ಆದ್ದರಿಂದಲೇ ವಿದೇಶದಲ್ಲಿ ಸಿಕ್ಕ ಉನ್ನತ ಅವಕಾಶವನ್ನು ಬಿಟ್ಟು ಬಂದೆ ಎಂದು ತಿಳಿಸಿದರು.
ಗಣಿತ ಸಂಸ್ಕೃತಿಯನ್ನು ಸ್ವೀಕರಿಸಿದವರು ಮಾತ್ರವೇ ಇಲ್ಲಿ ಗೆಲ್ಲಲು ಸಾಧ್ಯ, ಗಣಿತ ಸ್ನಾತಕೋತ್ತರ ಪದವಿ ಮಾಡಿ, ಕೆ-ಸೆಟ್ ಮುಗಿಸಿದರೆ ಉದ್ಯೋಗ ಖಚಿತ, ಗಣಿತ ಎಲ್ಲಾ ನಿಕಾಯಗಳ ಮಾತೃವಿದ್ದಂತೆ, ಗಣಿತಕ್ಷೇತ್ರಕ್ಕೆ ಭಾರತ ಅಪಾರ ಕೊಡುಗೆ ನೀಡಿದೆ, ಸಾಧಕರನ್ನು ನೀಡಿದೆ, ಸೊನ್ನೆ ನೀಡಿದ್ದು ನಾವೇ, ಸರ್ಕಾರಿ ಶಾಲೆ ಶಿಕ್ಷಕರು ಗಣಿತ ಕಲಿಸೋದರಲ್ಲಿ ಪ್ರವೀಣರು ಎಂದು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸ್ಮರಿಸಿದರು.
ಹಾಸಿಗೆ ಇದ್ದಷ್ಟು ಕಾಲು ಚಾಚು ಅಲ್ಲ ಇಂದು ಕಾಲು ಇದ್ದಷ್ಟು ಹಾಸಿಗೆ ವೃದ್ದಿಸುವ ಶಕ್ತಿ ಪಡೆದುಕೊಳ್ಳಿ, ವಿವಿಯ ಗೌರವವನ್ನು ಜಗತ್ತಿನಾದ್ಯಂತ ಪಸರಿಸುವ ರಾಯಭಾರಿಗಳಾಗಿ ಎಂದರು.ವಿವಿಯ ಕುಲಸಚಿವ ಕೆ.ಜನಾರ್ಧನಂ ಮಾತನಾಡಿ, ಫ್ರೀಲಾನ್ಸ್ ಪತ್ರಕರ್ತರಾಗಿ ವೈವಿಧ್ಯಮಯ ಬರಹಗಳ ಮೂಲಕ ವಿವಿಧ ಕ್ಷೇತ್ರಗಳಲ್ಲಿ ಹೆಸರು ಗಳಿಸಿದ್ದು, ಇಂತಹವರು ಕುಲಪತಿಗಳಾಗಿ ಬಂದಿರುವುದು ಅದೃಷ್ಟ ಎಂದರು.
ವಿವಿಯ ಪಥಮ ಘಟಿಕೋತ್ಸವದಲ್ಲಿ ಸಿಕ್ಕ ಮೊದಲ ೫ ರ್ಯಾಂಕ್‌ಗಳಲ್ಲಿ ನಮ್ಮ ವಿದ್ಯಾರ್ಥಿಗಳೇ ೪ ರ್ಯಾಂಕ್ ಗಳಿಸಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿ, ಗಣಿತ ವಿಭಾಗದಿಂದ ಆರಂಭಿಸಿರುವ ಇನ್ಫಿನಿಟಿ ಗಣಿತ ಕ್ಲಬ್ ಮೂಲಕ ಕಳೆದ ಮೂರು ವರ್ಷಗಳಿಂದ ಕೈಗೊಂಡಿರುವ ವಿವಿಧ ಕಾರ್ಯಗಳನ್ನು ತಿಳಿಸಿದರು.
ಶಿಸ್ತು,ಸಂಸ್ಕಾರ,ಸಾಮಾಜಿಕ ಕಳಕಳಿ ಸದಾ ನಿಮ್ಮಲ್ಲಿರಲಿ, ವಿವಿಯ ಗೌರವವನ್ನು ಎತ್ತರಕ್ಕೇರಿಸಿ ಎಂದರು.
ಭೌತಶಾಸ್ತ್ರ ವಿಭಾಗದ ಮುಖ್ಯಸ್ಥೆ ಸುಷ್ಮಾ, ಗಣಕ ಶಾಸ್ತ್ರ ವಿಭಾಗದ ಮುಖ್ಯಸ್ಥೆ ರೇಖಾ, ಅಧ್ಯಾಪಕರಾದ ಶಿವರಾಜ್,ಮಾಧವಿ,ಲೋಕೇಶ್ ಕಾರ್ಯಕ್ರಮ ನಡೆಸಿಕೊಟ್ಟರು.
ಕಾಯಕ್ರಮದಲ್ಲಿ ವಿದ್ಯಾರ್ಥಿಗಳಾದ ಲೇಖನಾ,ನಿತ್ಯ, ಸತೀಶ್ವರಿ, ಫಾತಿಮಾ,ಸುಮಶ್ರೀ,ಚಂದ್ರಕುಮಾರಿ, ಅಮೃತ್, ವಿನಯ್,ನವೀನ್,ಚಂದ್ರಶೇಖರ್, ಶ್ವೇತಾ ಸಮೀನಾ ಮತ್ತಿತರರಿದ್ದರು.