ಉತ್ತಮ ಮಳೆ: ಬಿತ್ತನೆ ಕಾರ್ಯ ಚುರುಕು

ಲಕ್ಷ್ಮೇಶ್ವರ, ಮೇ28: ತಾಲೂಕಿನಾದ್ಯಂತ ಮುಂಗಾರು ಮಳೆಗಳು ಉತ್ತಮವಾಗಿ ಸುರಿದ ಪರಿಣಾಮ ಹೆಸರು, ಗೆಜ್ಜೆ ಶೇಂಗಾ, ಬೊಳ್ಳಳ್ಳಿ ಮತ್ತು ಯಳ್ಳು ಬಿತ್ತನೆ ಮಾಡುವಲ್ಲಿ ರೈತರು ಮುಂದಾಗಿರುವುದು ಕಂಡು ಬಂದಿತು.
ಸಮೀಪದ ಪು.ಬಡ್ನಿ ಗ್ರಾಮದಲ್ಲಿ ರೈತ ಮುತ್ತಣ್ಣ ಚೋಟಗಲ್ಲ ಅವರು ತಮ್ಮ ಹೊಲದಲ್ಲಿ ಮುಂಗಾರು ಹಂಗಾಮಿನಲ್ಲಿ ಹೆಸರು ಬಿತ್ತನೆಗೆ ಮುಂದಾಗಿರುವುದು ಕಂಡು ಬಂದಿತು. ಈ ಕುರಿತು ಮುತ್ತಣ್ಣ ಅವರು ಮಾತನಾಡಿ ರೋಹಿಣಿ ಮಳೆಗೆ ಹೆಸರು ಬಿತ್ತನೆ ಮಾಡುವುದರಿಂದ ಇಳುವರಿ ಹೆಚ್ಚಾಗುತ್ತವೆ ಎನ್ನುವ ನಂಬಿಕೆ ಇದೆ, ಅಲ್ಲದೆ ಈಗ ತಾಲೂಕಿನಾದ್ಯಂತ ಮುಂಗಾರು ಪೂರ್ವ ಮಳೆಗಳು ಸಾಕಷ್ಟು ಆಗಿರುವುದರಿಂದ ಭೂಮಿಯು ಹಸಿಯಾಗಿದ್ದು ಹೆಸರು ಬಿತ್ತನೆಗೆ ಸೂಕ್ತವಾಗಿದೆ, ಅದ್ದರಿಂದ ಈಗ ಹೆಸರು ಬಿತ್ತನೆ ಮಾಡುತ್ತಿರುವುದಾಗಿ ಎಂದು ಅವರು ಹೇಳಿದರು.
ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಬೀಜ ಲಭ್ಯ-ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಮುಂಗಾರು ಹಂಗಾಮಿನ ಬಿತ್ತನೆ ಬೀಜಗಳು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದ್ದು. ರೈತರು ತಮಗೆ ಬೇಕಾದ ಬಿತ್ತನೆ ಬೀಜ ತೆಗೆದುಕೊಂಡು ಹೋಗಲು ವಿನಂತಿಸಿದ್ದಾರೆ. ಹೆಸರು-60 ಕ್ವಿಂಟಾಲ್, ತೊಗರಿ-21.60 ಕ್ವಿಂಟಾಲ್, ಹೈಬ್ರೀಡ್ ಜೋಳ-10 ಕ್ವಿಂಟಾಲ್‍ನಷ್ಟು ಬಿತ್ತನೆ ಬೀಜಗಳ ದಾಸ್ತಾನು ಇದೆ ಹಾಗೂ 2021-22ನೇ ಸಾಲಿನಲ್ಲಿ ಸುಮಾರು 2 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹೆಸರನ್ನು ಬಿತ್ತನೆ ಮಾಡುವ ಗುರಿ ಹಾಕಿಕೊಂಡಿದ್ದಾಗಿ ಲಕ್ಷ್ಮೇಶ್ವರ ತಾಲೂಕಾ ಕೃಷಿ ಸಹಾಯಕ ಅಧಿಕಾರಿ ಚಂದ್ರಶೇಖರ ನರಸಮ್ಮನವರ ತಿಳಿಸಿದ್ದಾರೆ.