ಉತ್ತಮ ಮಳೆಗೆ ತುಂಬಿ ಹರಿದ ಪಿನಾಕಿನಿ

ಗೌರಿಬಿದನೂರು.ನ೧೭: ನಗರ ಸೇರಿದಂತೆ ತಾಲ್ಲೂಕಿನ ಬಹುತೇಕ ಕಡೆಗಳಲ್ಲಿ ಸೋಮವಾರ ರಾತ್ರಿ ಹಾಗೂ ಮಂಗಳವಾರ ಉತ್ತಮ ಮಳೆಯಾಗಿದ್ದು, ಇದರಿಂದ ಪಿನಾಕಿನಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ.
ಕಳೆದ ಒಂದು ವಾರದಿಂದ ಸುರಿದ ಜಿಟಿಜಿಟಿ ಮಳೆಯಿಂದ ಸಾಕಾಗಿದ್ದ ಜನತೆಗೆ ಸೋಮವಾರ ರಾತ್ರಿ ಮತ್ತು ಮಂಗಳವಾರ ಸುರಿದ ಮಳೆಯಿಂದಾಗಿ ಮತ್ತೆ ಸಂಕಷ್ಟ ಎದುರಾಗಿದೆ. ಈಗಾಗಲೇ ಗ್ರಾಮೀಣ ಭಾಗದ ಜನರು ಮಳೆಯಿಂದಾಗಿ ತತ್ತರಿಸಿದ್ದು ಜಾನುವಾರುಗಳಿಗೆ ಮೇವಿಲ್ಲದೆ ಪರಿತಪಿಸುವಂತಾಗಿದೆ. ಮತ್ತೊಂದೆಡೆ ಫಸಲಿಗೆ ಬಂದಿರುವ ರಾಗಿ, ಜೋಳ, ನೆಲಗಡಲೆ ಸೇರಿದಂತೆ ಇನ್ನಿತರ ಬೆಳೆಗಳು ಮಳೆಯ ತೀವ್ರತೆಗೆ ಭೂಮಿಯಲ್ಲೆ ಮೊಳಕೆಯೊಡೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ರೈತಾಪಿ ವರ್ಗದ ಜನತೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಎಂದು ಪರಿತಪಿಸುವಂತಾಗಿದೆ.
ಮಂಗಳವಾರ ಸಂಜೆ ನಗರದ ಸುತ್ತಲೂ ಸುರಿದ ಉತ್ತಮ ಮಳೆಯಿಂದಾಗಿ ಶಾಲಾ ಕಾಲೇಜಿಗಳಿಂದ ಗ್ರಾಮೀಣ ಪ್ರದೇಶಕ್ಕೆ ತೆರಳುವ ವಿದ್ಯಾರ್ಥಿಗಳು ತಮ್ಮ ಮಾರ್ಗದ ಬಸ್ ನ್ನು ಸಂಪರ್ಕಿಸಲು ಮಳೆಯಲ್ಲೆ ಹೆಜ್ಜೆ ಹಾಕಿದರು. ಇನ್ನು ದ್ವಿಚಕ್ರ ವಾಹನಗಳಲ್ಲಿ ತೆರಳುವವರು ಮಳೆಯಲ್ಲೆ ನೆನೆದು ಮನೆ ಸೇರುವಂತಿದ್ದರು.
ಕಳೆದ ಎರಡು ದಿನಗಳಿಂದ ತಾಲ್ಲೂಕಿನ ವಿವಿದೆಡೆಗಳಲ್ಲಿ ಸುರಿಯುತ್ತಿರುವ ಉತ್ತಮ ಮಳೆಯಿಂದಾಗಿ ಮಳೆ ನೀರಿನಿಂದ ತುಂಬಿರುವ ಜಲಮೂಲಗಳಿಂದ ಹೆಚ್ಚಿನ ನೀರು ಹೊರಬರುತ್ತಿದ್ದು ಇದರಿಂದಾಗಿ ಪಿನಾಕಿನಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದು ನದಿ ಪಾತ್ರದಲ್ಲಿನ ಜನತೆ ಎಚ್ಚರಿಕೆಯಿಂದ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಬೇಕಾಗಿದೆ ಎಂದು ಪ್ರಜ್ಞಾವಂತ ನಾಗರೀಕರು ತಿಳಿಸಿದ್ದಾರೆ. .