ಉತ್ತಮ ಬೋಧನೆಗೆ ಶಿಕ್ಷಕರಿಗೆ ನಿರಂತರ ಅಧ್ಯಯನ ಅಗತ್ಯ

ಸಂಜೆವಾಣಿ ವಾರ್ತೆ

ಚಿತ್ರದುರ್ಗ.ಅ.೧೭: ಉತ್ತಮ ಬೋಧಕರಾಗಲು ಪ್ರಶಿಕ್ಷಣಾರ್ಥಿಗಳು ನಿರಂತರ ಅಧ್ಯಯನಶೀಲರಾಗಬೇಕು ಎಂದು ಡಯಟ್ ಉಪನ್ಯಾಸಕ ಯು.ಸಿದ್ದೇಶಿ ಹೇಳಿದರು. ನಗರದ ಡಯಟ್‌ಗೆ ಶೈಕ್ಷಣಿಕ ಕಾರ್ಯಚಟುವಟಿಕೆಗಳ ಮಾಹಿತಿ ಪಡೆಯಲು ಭೇಟಿ ನೀಡಿದ ಹಿರೆಕೆರೂರು ತಾಲೂಕಿನ ಶ್ರೀ ತರಳಬಾಳು ಬಿ.ಇಡಿ ಕಾಲೇಜಿನ ಪ್ರಶಿಕ್ಷಣಾರ್ಥಿಗಳನ್ನು ಕುರಿತು ಮಾತನಾಡಿದ ಅವರು ಗುಣಮಟ್ಟದ ಶಿಕ್ಷಣ ನೀಡಲು ತರಬೇತಿಗಳು ಪೂರಕವಾಗುತ್ತವೆ. ಶಿಕ್ಷಕರು ಬೋಧನಾ ಕೌಶಲಗಳನ್ನು ರೂಢಿಸಿ ಕೊಳ್ಳಬೇಕು. ಮಕ್ಕಳ ಕಲಿಕಾ ಸಮಸ್ಯೆಗಳನ್ನು ಗುರುತಿಸಿ ವಿವಿಧ ಚಟುವಟಿಕೆಗಳ ಮೂಲಕ ಮಾರ್ಗದರ್ಶನ ಮಾಡಬೇಕು ಎಂದು ತಿಳಿಸಿದರು. ಉಪನ್ಯಾಸಕ ಎಸ್.ಬಸವರಾಜು ಮಾತನಾಡಿ, ಉತ್ತಮ ಸಮಾಜ ನಿರ್ಮಾಣದಲ್ಲಿ, ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದಲ್ಲಿ ಶಿಕ್ಷಕರ ಪಾತ್ರ ಮುಖ್ಯ. ಶಿಕ್ಷಕರು ನಟನಾ ಕೌಶಲ ಬೆಳೆಸಿಕೊಳ್ಳಬೇಕು. ಭಾಷೆಯನ್ನು ಬೋಧಿಸುವಾಗ ಧ್ವನಿಯಲ್ಲಿ ಏರಿಳಿತ, ಹಾವಭಾವದೊಂದಿಗೆ ಬೋಧಿಸಬೇಕು. ವಿಜ್ಞಾನ ವಿಷಯವನ್ನು ಯಾಂತ್ರಿಕವಾಗಿ ಬೋಧಿಸದೆ ಪ್ರಾಯೋಗಿಕ ಚಟುವಟಿಕೆ ಮೂಲಕ ಬೋಧಿಸಿದಾಗ ಮಕ್ಕಳಲ್ಲಿ ಸ್ವ-ಅನುಭವ ದೊರೆತು ಕಲಿಕಾ ಸಾಮರ್ಥ್ಯ ವೃದ್ಧಿಯಾಗುತ್ತದೆ ಎಂದು ತಿಳಿಸಿದರು. ಶಿಕ್ಷಕರು ತರಗತಿ ನಿರ್ವಹಣೆ ಪ್ರಜ್ಞೆ ಬೆಳೆಸಿಕೊಳ್ಳಬೇಕು. ವಿವಿಧ ಬೋಧನಾ ಕೌಶಲಗಳಲ್ಲಿ ಸಾಮರ್ಥ್ಯ ಪಡೆಯುವುದರ ಜೊತೆಗೆ ತರಗತಿ ಪ್ರಕ್ರಿಯೆ ನಿರ್ವಹಣೆಯಲ್ಲಿ ಉದಾಹರಣೆ, ನಿದರ್ಶನಗಳು, ಚಟುವಟಿಕೆಗಳು, ಕಲಿಕಾ ಸಾಮಗ್ರಿಗಳ ಬಳಕೆ ಮಾಡಬೇಕು ಎಂದರು.ಉಪನ್ಯಾಸಕ ಕೆ.ಜಿ.ಪ್ರಶಾಂತ್ ಎನ್.ಎಂ.ಎA.ಎಸ್ ಪರೀಕ್ಷೆ ಕುರಿತು ಮಾಹಿತಿ ನೀಡಿ ಮಾತನಾಡಿ ವಿದ್ಯಾರ್ಥಿ ದೆಸೆಯಲ್ಲಿಯೇ ಮಕ್ಕಳಿಗೆ ಸ್ಪರ್ಧಾ ಮನೋಭಾವನೆ ಬೆಳೆಸಬೇಕು. ಇದರಿಂದ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸುಲಭವಾಗಿ ಎದುರಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಬಿ.ಇಡಿ ಕಾಲೇಜಿನ ಉಪನ್ಯಾಸಕರಾದ ಎಸ್.ಬಿ.ಪಾಟೀಲ್, ಸತೀಶ್ ಬಣಕಾರ, ಹನುಮಂತಪ್ಪ, ಪ್ರಕಾಶ್ ದೊಡ್ಡಮನಿ ಮತ್ತು ಪ್ರಶಿಕ್ಷಣಾರ್ಥಿಗಳು ಇದ್ದರು.