ಉತ್ತಮ ಫಲಿತಾಂಶ ಪಡೆಯಲು ವಿದ್ಯಾರ್ಥಿಗಳಿಗೆ ಪುನರ್ ಮನನ ಅಗತ್ಯ

ಸಂಜೆವಾಣಿ ವಾರ್ತೆ

ಹೊಳಲ್ಕೆರೆ.ಫೆ.೧೭: ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆಯಲು ಕಲಿತ ವಿಷಯವನ್ನು ಪುನರ್ ಮನನ ಮಾಡಿಕೊಳ್ಳುವಂತೆ ಶಿಕ್ಷಕರು ಮಾರ್ಗದರ್ಶನ ಮಾಡಬೇಕು ಎಂದು ಡಯಟ್ ಉಪನ್ಯಾಸಕ ಎಸ್.ಬಸವರಾಜು ಸಲಹೆ ನೀಡಿದರು. ಎಸ್.ಎಸ್.ಎಲ್.ಸಿ ಫಲಿತಾಂಶ ಉತ್ತಮಪಡಿಸುವ ಸಂಬAಧ ಪಟ್ಟಣದ ಎಂ.ಎA. ಸರ್ಕಾರಿ ಪ್ರೌಢಶಾಲೆಗೆ  ಭೇಟಿ ನೀಡಿ 2023 ರ ಫಲಿತಾಂಶ ವಿಶ್ಲೇಷಣೆ ಮತ್ತು ಶಿಕ್ಷಕರ ಕ್ರಿಯಾ ಯೋಜನೆ ಪರಿಶೀಲಿಸಿ ಮಾತನಾಡಿದ ಅವರು ಚಿತ್ರದುರ್ಗ ಜಿಲ್ಲೆ 2023 ರಲ್ಲಿ ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ಪ್ರಥಮ ಸ್ಥಾನ ಪಡೆದಿದ್ದು ಪ್ರಸಕ್ತ ವರ್ಷವೂ ಪ್ರಥಮ ಸ್ಥಾನ ಪಡೆಯಲು ಶಿಕ್ಷಕರು ಪೂರ್ವ ಸಿದ್ಧತೆ ಮಾಡಿಕೊಂಡು ಕಾರ್ಯೋನ್ಮುಖರಾಗಬೇಕು. ಮುಖ್ಯ ಶಿಕ್ಷಕರು ಮತ್ತು ಶಿಕ್ಷಕರು ಸಮನ್ವಯತೆಯಿಂದ ಎಲ್ಲಾ ವಿಷಯಗಳಲ್ಲಿ ಮಕ್ಕಳ ಕಲಿಕಾ ಸಾಮರ್ಥ್ಯ ಗುರುತಿಸಿ ಕ್ಲಿಷ್ಟ ಪರಿಕಲ್ಪನೆಗಳಿಗೆ ಮಾರ್ಗದರ್ಶನ ಮಾಡಬೇಕು ಎಂದರು. ವಿದ್ಯಾರ್ಥಿಗಳಿಗೆ ಪ್ರಶ್ನೆಪತ್ರಿಕೆಯ ಮಾದರಿಗಳನ್ನು ಪರಿಚಯಿಸಿ ಪ್ರಶ್ನೆಗಳ ವಿಧ, ನಿಗದಿಪಡಿಸಿರುವ ಸಮಯ, ಅಂಕಗಳ ಹಂಚಿಕೆ ಕುರಿತು ಮಾಹಿತಿ ನೀಡಬೇಕು. ಪ್ರತಿ ವಿಷಯದಲ್ಲಿ ಘಟಕವಾರು ಮುಖ್ಯಾಂಶಗಳನ್ನು ಟಿಪ್ಪಣಿ ಮಾಡಿಕೊಂಡು ಪನರ್ ಮನನ ಮಾಡಿಕೊಂಡು ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಬೇಕು ಎಂದರು. ಉಪ ಪ್ರಾಂಶುಪಾಲ ಗೋವಿಂದ ನಾಯ್ಕ್ ಮಾತನಾಡಿ, ಉತ್ತಮ ಫಲಿತಾಂಶ ಪಡೆಯಲು ಕ್ರಿಯಾ ಯೋಜನೆ ಸಿದ್ದಪಡಿಸಿಕೊಳ್ಳಲಾಗಿದೆ. ಶಿಕ್ಷಕರ ಸಭೆ, ಮನೆ ಭೇಟಿ, ವಿಶೇಷ ತರಗತಿ, ಗುಂಪು ಅಧ್ಯಯನ, ರಸಪ್ರಶ್ನೆ, ವಿಷಯಾವಾರು ಪರೀಕ್ಷೆ ನಡೆಸಿ ಮಾದರಿ ಪ್ರಶ್ನೆ ಪತ್ರಿಕೆ ಪರಿಚಯಿಸುವುದರ ಮೂಲಕ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಸಿದ್ದತೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಶಿಕ್ಷಕರಾದ ಸೈಯದ್ ಇನಾಯತ್, ಕುಮಾರಸ್ವಾಮಿ, ಮೈತ್ರೇಯಿ, ಭವ್ಯಾ, ಶೋಭಾ, ಮಾರುತಿ ಮತ್ತಿತರರಿದ್ದರು.