
ಹುಳಿಯಾರು, ನ. ೪- ಗ್ರಾಮೀಣ ಭಾಗದ ವಿದ್ಯಾರ್ಥಿಗಳು ತಂದೆ-ತಾಯಿಗಳ ಕಷ್ಟ ಅರಿತು ವಿದ್ಯಾವಂತರಾಗಿ, ಸುಸಂಸ್ಕೃತರಾಗಿ ಉನ್ನತ ಮಟ್ಟದಲ್ಲಿ ಭವಿಷ್ಯ ರೂಪಿಸಿಕೊಂಡು ಹುಟ್ಟೂರಿಗೆ ತನ್ನದೆ ಆದ ಕೊಡುಗೆ ನೀಡಬೇಕು ಎಂದು ಪಶು ವೈದ್ಯಾಧಿಕಾರಿ ಹೊಯ್ಸಳಕಟ್ಟೆ ಗಂಗಾಧರ್ ತಿಳಿಸಿದರು.
ಹೋಬಳಿಯ ದಬ್ಬಗುಂಟೆ ಮತ್ತು ಮರೆನಡು ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ತಮ್ಮ ತಂದೆ ಕಾಮಣ್ಣ ನವರ ೨ ನೇ ವರ್ಷದ ಪುಣ್ಯ ಸ್ಮರಣೆ ಅಂಗವಾಗಿ ಉಚಿತವಾಗಿ ೨೦೦ ಶಾಲಾ ಬ್ಯಾಗ್‌ಗಳನ್ನು ವಿತರಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳನ್ನು ದೇಶಕ್ಕೆ ಉತ್ತಮ ಪ್ರಜೆಯನ್ನಾಗಿ ರೂಪಿಸುವ ಶಕ್ತಿ ಶಿಕ್ಷಕರ ಮೇಲಿದೆ. ಶಿಕ್ಷಕರ ಶ್ರಮದ ಮೇಲೆ ವಿದ್ಯಾರ್ಥಿಗಳ ಭವಿಷ್ಯ ಅಡಗಿದೆ ಎಂದರು.
ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೆಶಕ ಕಲ್ಲೇನಹಳ್ಳಿ ಈರಸಿದ್ದಯ್ಯ ಮಾತನಾಡಿ, ಸರ್ಕಾರದ ನೆರವಿನ ಜತೆಗೆ ಉಳ್ಳವರು ಸರ್ಕಾರಿ ಶಾಲೆಗೆ ನೆರವು ನೀಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಡಿ.ಬಿ.ರವಿಕುಮಾರ್, ಎಸ್‌ಡಿಎಂಸಿ ಅಧ್ಯಕ್ಷ ರಾಘವೇಂದ್ರ, ಮುಖ್ಯ ಶಿಕ್ಷಕರಾದ ಸಿ.ಲೋಕೇಶ್, ರವೀಂದ್ರಚಾರ್, ಶಿಕ್ಷಕರಾದ ಪ್ರದೀಪ್‌ಕುಮಾರ್, ಈರಸಿದ್ದಯ್ಯ, ಲೀಲಾವತಿ, ಸೌಮ್ಯ, ಸುಮಾ, ಸವಿತಾ ಬಾಬು ಉಪಸ್ಥಿತರಿದ್ದರು.