ಉತ್ತಮ ಪುಸ್ತಕಗಳು ಬದುಕಿಗೆ ದಾರಿದೀಪ

ಕಲಬುರಗಿ:ಎ.23: ಮೌಲ್ಯಗಳು, ಸಾಧನೆಗೆ ಪಥವನ್ನು ತೋರಿಸುವ ಉತ್ತಮ ಪುಸ್ತಕಗಳು ಬದುಕಿಗೆ ದಾರಿದೀಪವಾಗಿ ಕಾರ್ಯನಿರ್ವಹಿಸುತ್ತವೆ. ಒಬ್ಬ ವ್ಯಕ್ತಿಯ ಜೀವನದ ದಿಕ್ಕನ್ನೇ ಬದಲಿಸುವ ಶಕ್ತಿ ಪುಸ್ತಕಗಳಿಗಿವೆ. ಇವುಗಳು ಸಾಧನೆಯ ದಾರಿಯನ್ನು ತಿಳಿಸುವ ಮೂಲಕ ಶ್ರೇಷ್ಠ ವ್ಯಕ್ತಿತ್ವ ನಿರ್ಮಾಣ ಮಾಡುವ ಸಾಧನಗಳಾಗಿವೆಯೆಂದು ನಿವೃತ್ತ ಪ್ರಾಂಶುಪಾಲ, ಶಿಕ್ಷಣ ತಜ್ಞ ಡಾ.ವಿಶ್ವನಾಥ ಚಿಮಕೋಡ್ ಅಭಿಮತಪಟ್ಟರು.

     ನಗರದ ಅಗ್ನಿಶಾಮಕ ಠಾಣೆಯ ವಸತಿ ಗೃಹಗಳ ಆವರಣದಲ್ಲಿ 'ಬಸವೇಶ್ವರ ಸಮಾಜ ಸೇವಾ ಬಳಗ'ದ ವತಿಯಿಂದ 'ವಿಶ್ವ ಪುಸ್ತಕ ದಿನಾಚರಣೆ'ಯ ಪ್ರಯುಕ್ತ ಸ್ವಾತಂತ್ರ್ಯ ಹೋರಾಟಗಾರರು, ಶರಣರ, ಸಂತರ, ಮಹನೀಯರ, ಆರೋಗ್ಯ, ಮೌಲ್ಯಗಳು ಸೇರಿದಂತೆ ವಿವಿಧ ಪ್ರಕಾರದ ಪುಸ್ತಕಗಳನ್ನು ಉಚಿತವಾಗಿ ವಿತರಣೆಯ ಕಾರ್ಯಕ್ರಮದಲ್ಲಿ ಪುಸ್ತಕಗಳನ್ನು ವಿತರಿಸಿ ಅವರು ಮಾತನಾಡುತ್ತಿದ್ದರು.

ಉಪನ್ಯಾಸಕ ಎಚ್.ಬಿ.ಪಾಟೀಲ ಮಾತನಾಡಿ, ಜ್ಞಾನಕ್ಕಿಂತ ದೊಡ್ಡ ಸಂಪತ್ತು ಹಾಗೂ ಶಕ್ತಿ ಬೇರೊಂದಿಲ್ಲ. ಇದು ಯಾರಿಂದಲೂ ಕಳ್ಳತನ ಮಾಡಲಾಗದ ಸಂಪತ್ತಾಗಿದೆ. ಇಂತಹ ಅಮೂಲ್ಯವಾದ ಸಂಪತ್ತನ್ನು ಪ್ರತಿಯೊಬ್ಬರು ಪಡೆಯಬೇಕಾದರೆ ಸದಾ ಪುಸ್ತಕಗಳನ್ನು ಓದಬೇಕು. ವಿದ್ಯಾರ್ಥಿ ದೆಸೆಯಿಂದಲೇ ಶ್ರೇಷ್ಟ ಪುಸ್ತಕಗಳನ್ನು ಓದುವ ಹವ್ಯಾಸ ಮೈಗೂಡಿಸಿಕೊಳ್ಳಬೇಕು. ಇವುಗಳು ಬಾಳನ್ನು ಬೆಳಗಿಸುತ್ತದೆಯೆಂದರು.

ಚಿಂತಕ ನರಸಪ್ಪ ಬಿರಾದಾರ ದೇಗಾಂವಮಾತನಾಡಿ, ಪುಸ್ತಕಗಳು ಜ್ಞಾನದ ದೀವಿಗೆ ಇದ್ದಂತೆ. ಇವುಗಳನ್ನು ನಾವು ಹೆಚ್ಚು ಓದಿದಷ್ಟು ನಮ್ಮ ಅರಿವು ಮತ್ತು ಜ್ಞಾನದ ವ್ಯಾಪ್ತಿ ಹೆಚ್ಚಾಗುತ್ತದೆ. ಹೆಚ್ಚಿನ ಅಧ್ಯಯನದಿಂದ ವ್ಯಕ್ತಿಯು, ಶಕ್ತಿಯಾಗುತ್ತಾನೆ. ಆದರೆ ಇತ್ತೀಚಿನ ದಿನಗಳಲ್ಲಿ ಪುಸ್ತಕ ಓದುವ ಹವ್ಯಾಸ ಕಡಿಮೆಯಾಗುತ್ತಿರುವುದು ವಿಷಾದನೀಯ ಸಂಗತಿಯಾಗಿದೆ. ವಿಶೇಷವಾಗಿ ಯುವಕರು ಇದರತ್ತ ಲಕ್ಷವಹಿಸಬೇಕಾದದ್ದು ತುಂಬಾ ಅಗತ್ಯವಾಗಿದಯೆಂದು ಒತ್ತಿ ಹೇಳಿದರು.

ಕಾರ್ಯಕ್ರಮದಲ್ಲಿ ಪ್ರಮುಖರಾದ ಸುನೀಲಕುಮಾರ ವಂಟಿ, ಬಸಯ್ಯಸ್ವಾಮಿ ಹೊದಲುರ, ದೇವೇಂದ್ರಪ್ಪ ಗಣಮುಖಿ, ಶಿವಕುಮಾರ ತಿಮಾಜಿ, ಅಂಕುಶ ಅಳಂದೆ, ಪ್ರಮೋದ ಬಳುಂಡುಗಿ, ಸಂತೋಷ ದನಸೋಡೆ, ರವಿ ರತ್ನಾಕರ, ಜ್ಞಾನೋಬಾ ಮೇತ್ರೆ, ನವೀನಕುಮಾರ ಹಣಮಂತಗೋಳ್, ಯುವರಾಜ ಹಣಮಂತಗೋಳ್ ಸೇರಿದಂತೆ ಮತ್ತಿತರರಿದ್ದರು.