ಉತ್ತಮ ಪರಿಸರವು ಅಭಿವೃದ್ಧಿಯ ಸಂಕೇತ – ಡಾ.ಮಧುಸೂದನ ಕಾರಿಗನೂರು


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಜು.24: ತಂತ್ರಜ್ಞಾನದ ಭರದಲ್ಲಿ ಕಳೆದುಹೋಗುತ್ತಿರುವ ಪರಿಸರದ ಕೌಶಲ್ಯವನ್ನು ಮಕ್ಕಳಲ್ಲಿ ಉತ್ತೇಜಿಸುವುದು ಸಾವಲಿನ ಸಂಗಾತಿಯಾಗಿದೆ, ಉತ್ತಮ ಪರಿಸರವು ಅಭಿವೃದ್ದಿಯ ಸಂಕೇತವಾಗಿದೆ ಎಂದು ಕ.ಸಾ.ಪ ತಾಲೂಕು ಅಧ್ಯಕ್ಷ ಡಾ.ಮಧುಸೂದನ ಕಾರಿಗನೂರು ತಿಳಿಸಿದುರು.
 ತಾಲೂಕಿನ ಹಚ್ಚೊಳ್ಳಿ ಗ್ರಾಮದಲ್ಲಿ ಕನ್ನಡ ಸಾಹಿತ್ಯ ಪರಿಷತ್‍ನ ವತಿಯಿಂದ ಕರ್ನಾಟಕ ಪಬ್ಲಿಕ್ ಶಾಲೆಯ ಪದವಿಪೂರ್ವ ಹಾಗೂ ಪ್ರೌಢಶಾಲಾ ಮಕ್ಕಳಿಗೆ ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ ವಿಷಯದ ಪ್ರಬಂಧ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ತಮ್ಮ ಬಾಲ್ಯದಿಂದಲೇ ತಮ್ಮ ಸುತ್ತಮುತ್ತಲಿನ ಪರಿಸರದ ಬಗ್ಗೆ ಕಾಳಜಿವಹಿಸುವುದರ ಜೊತೆಗೆ ಮರಗಿಡಗಳನ್ನು ಬೆಳೆಸುವ ಹವ್ಯಾಸ ಬೆಳೆಸಿಕೊಳ್ಳಬೇಕು. ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳು ಪರಿಸರ ಮಾಲಿನ್ಯ ತಡೆಗಟ್ಟುವ ಮಾಹಿತಿ ನೀಡಬೇಕು.
ನಾವು ಪರಿಸರ ರಕ್ಷಿಸುವ ನಿಟ್ಟಿನಲ್ಲಿ ಪ್ಲಾಸ್ಟಿಕ್ ಬದಲಿಗೆ ಜೈವಿಕ ವಿಘಟನೀಯ ಕ್ಯಾರಿ ಬ್ಯಾಗ್ಗಳನ್ನು ಪೇಪರ್ ಬ್ಯಾಗ್ಗಳನ್ನು ಬಳಸುವುದು, ಮರಗಳನ್ನು ನೆಡುವುದು, ಸ್ವಚ್ಛತಾ ಅಭಿಯಾನಗಳಲ್ಲಿ ಭಾಗವಹಿಸುವಂತೆ ಕರೆ ನೀಡಿದರು.
ಕಸಾಪ ಕಾರ್ಯದರ್ಶಿ ಗಜೇಂದ್ರ ಮಾತನಾಡಿ ನೀರು, ಗಾಳಿ ಮತ್ತು ಬೆಳಕನ್ನು ಸ್ವಚ್ಛವಾಗಿಟ್ಟುಕೊಂಡು ಮುಂದಿನ ಪೀಳಿಗೆ ನಮ್ಮನ್ನು ನೆನಪಿನಲ್ಲಿಟ್ಟುಕೊಳ್ಳುವಂತ ಕೆಲಸ ಮಾಡಬೇಕು ಹಾಗೂ ತ್ಯಾಜ್ಯ ವಿಲೇವಾರಿಯ ಬಗ್ಗೆ ಈಗಿನಿಂದಲೇ ಅರಿವು ಮೂಡಿಸಿಕೊಳ್ಳಬೇಕು, ತ್ಯಾಜ್ಯವನ್ನು ಪರಿಸರಕ್ಕೆ ಎಸೆಯುವ ಬದಲು ಮರುಬಳಕೆ ಮಾಡುವ ಸರಳ ಹೆಜ್ಜೆಯನ್ನು ನಾವು ತೆಗೆದುಕೊಂಡರೆ ಪರಿಸರವನ್ನು ಉಳಿಸುವ ಕೆಲಸ ಮಾಡಿದಂತಾಗುತ್ತದೆ ಎಂದು ತಿಳಿಸಿದರು.
ಹಚ್ಚೊಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಯೂನೂಸ್, ಪ್ರಾಂಶುಪಾಲ ಮಹೇಶ್‍ಕುಮಾರ್ ಮಾತನಾಡಿದರು.
ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಕಾಲೇಜಿನ ಮೂರು ಹಾಗೂ ಪ್ರೌಢಶಾಲೆಯ ಮೂರು ವಿದ್ಯಾರ್ಥಿಗಳಿಗೆ ಪ್ರಶಸ್ತಿಪತ್ರಗಳನ್ನು ನೀಡಲಾಯಿತು.
ಗಾಯಕ ಬಿ.ವೈ.ವೆಂಕಟೇಶ್ ಅವರು ಪರಿಸರ ಜಾಗೃತಿ ಗೀತೆ ಹಾಡಿದರು. ಉಪನ್ಯಾಸಕ ಬಸವರಾಜ್, ಶಿಕ್ಷಕರಾದ ಎರ್ರಿಸ್ವಾಮಿ ಇದರು.