ಉತ್ತಮ ನಿರ್ವಹಣೆಯಿಂದ ಹೈನುಗಾರಿಕೆಯಲ್ಲಿ ಲಾಭ

ಕನಕಪುರ,ಜು.೨೧:ಹೈನುಗಾರಿಕೆ ಈ ಭಾಗದ ರೈತರ ಆರ್ಥಿಕ ಮೂಲವಾಗಿದೆ. ಉದ್ಯಮವು ಲಾಭದಾಯವಾಗಿದ್ದರು ಕೆಲವು ರೈತರು ಸರಿಯಾದ ನಿರ್ವಹಣೆ ಮತ್ತು ತಿಳುವಳಿಕೆ ಇಲ್ಲದೆ ನಷ್ಟವನ್ನು ಅನುಭವಿಸುತ್ತಿದ್ದಾರೆ ಎಂದು ಕೆ.ಎಂ.ಎಫ್ ನಿವೃತ್ತ ಉಪ ನಿರ್ದೇಶಕ ರಾಜಣ್ಣ ತಿಳಿಸಿದರು.
ತಾಲ್ಲೂಕಿನ ರಾಮನಗರ ರಸ್ತೆಯ ಹೊಸಕೋಟೆ ಗ್ರಾಮದಲ್ಲಿರುವ ಹಾಲಿನ ಡೇರಿ ಆವರಣದಲ್ಲಿ ಹೈನುಗಾರಿಕೆ ರೈತರಿಗಾಗಿ ಬೆಂಗಳೂರು ಒಕ್ಕೂಟವು ಆಯೋಜನೆ ಮಾಡಿದ್ದ ಶುದ್ಧಹಾಲು ಉತ್ಪಾದನೆ ಮತ್ತು ರಾಸುಗಳ ನಿರ್ವಹಣೆ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದರು.
ಯಾವುದೆ ಕೃಷಿಯನ್ನಾಗಲಿ, ಉದ್ಯಮವನ್ನಾಗಲಿ ನಾವು ಸರಿಯಾಗಿ ತಿಳಿದುಕೊಳ್ಳಬೇಕು, ಇಲ್ಲವಾದಲ್ಲಿ ಲಾಭಕ್ಕಿಂತ ನಷ್ಟವನ್ನೇ ಅನುಭವಿಸುತ್ತೇವೆ. ಹಸುಗಳನ್ನು ಸಾಕುವ ಹಾಗೂ ಅವುಗಳ ನಿರ್ವಹಣೆಯೆ ಹೈನುಗಾರಿಕೆಯಲ್ಲಿ ಪ್ರಮುಖವಾಗಿದೆ, ಹಾಲು ಕರೆಯುವುದು ಮತ್ತು ಡೇರಿಗೆ ಹಾಕುವುದು ಅಷ್ಟೇ ಪ್ರಮುಖವಾಗಿದೆ ಎಂದು ಹೇಳಿದರು.
ಬಹುತೇಕ ರೈತರು ತಮ್ಮ ಕುಟುಂಬದಲ್ಲಿ ಹಿರಿಯರು ಹಸು ಸಾಗಿದ್ದರು, ಅದನ್ನು ತಾವು ಮುಂದುವರಿಸುತ್ತಾರೆ, ಇನ್ನು ಕೆಲವರು ಹೈನುಗಾರಿಕೆ ಬಗ್ಗೆ ತಿಳಿದುಕೊಂಡಿರುವುದಿಲ್ಲ, ಸಾಲ ಮಾಡಿಯಾದರೂ ಹೈನುಗಾರಿಕೆ ಮಾಡಬೇಕೆಂದು ಹಸುಗಳನ್ನು ತಂದು ಕೈ ಸುಟ್ಟುಕೊಳ್ಳುತ್ತಾರೆ, ಈಗೆ ಹಲವು ರೀತಿಯಲ್ಲಿ ಹೈನುಗಾರಿಕೆ ಮಾಡಿ ತೊಂದರೆಗೆ ಒಳಗಾಗುತ್ತಾರೆ ಎಂದರು.
ಒಂದು ಹಸುವು ವರ್ಷಕ್ಕೆ ಒಂದರಂತೆ ೨೦ ಕರುಗಳನ್ನು ಹಾಕುತ್ತದೆ, ಹಸು ಗರ್ಭಿಣಿಯಾದರೆ ಹಾಲು ಕಡಿಮೆ ಆಗುತ್ತದೆ ಎಂದು ತಪ್ಪು ತಿಳುವಳಿಕೆಯಿಂದ ಸಮಯಕ್ಕೆ ಸರಿಯಾಗಿ ಈಟ್ ಕೊಡಿಸುವುದಿಲ್ಲ. ಹೈನುಗಾರಿಕೆಯಲ್ಲಿ ಸರಿಯಾದ ನಿಯಮಗಳನ್ನು ಪಾಲಿಸಿದರೆ ನಿರ್ವಹಣೆಯಲ್ಲೇ ಸಾಕಷ್ಟು ಹಣ ಉಳಿಸಿ ಲಾಭಗಳಿಸಬಹುದಾಗಿದೆ ಎಂದು ಮಾಹಿತಿ ನೀಡಿದರು.
ಕನಕಪುರ ಶಿಬಿರ ಕಚೇರಿಯ ವ್ಯವಸ್ಥಾಪಕ ನಿರ್ದೇಶಕ ಡಾ.ಪ್ರಕಾಶ್ ಮಾತನಾಡಿ ೧೯೯೦ ಕ್ಕಿಂತ ಮುಂಚೆ ಡೇರಿಗಳಿಗೆ ಹಾಲು ಹಾಕಿದರೆ ಸಾಕಾಗಿತ್ತು, ಆದರೆ ಇಂದು ಆಗಿಲ್ಲ, ಹಾಲಿನ ಜತೆಗೆ ಗುಣಮಟ್ಟ ಮತ್ತು ಗೊಬ್ಬಿನಂಶ ಇರಬೇಕು, ರೈತರು ಎಷ್ಟು ಹಾಲು ಹಾಕುತ್ತೇವೆ ಎಂಬುದಕ್ಕಿಂತ ಎಷ್ಟು ಗುಣಮಟ್ಟದಲ್ಲಿ ಹಾಕುತ್ತೇವೆ ಎಂಬುದು ಮುಖ್ಯವಾಗಿದೆ, ರೈತರು ಹೈನುಗಾರಿಕೆ ಬಗ್ಗೆ ಚೆನ್ನಾಗಿ ತಿಳಿದುಕೊಂಡು ಹೈನುಗಾರಿಕೆ ಮಾಡಬೇಕೆಂದು ಸಲಹೆ ನೀಡಿದರು.
ರಾಮನಗರ ಬಮೂಲ್ ಒಕ್ಕೂಟ ಸಿಇಒ ಶಿವಕುಮಾರ್, ವಿಸ್ತರಣಾಧಿಕಾರಿ ಹಂಸವೇಣಿ, ಹೊಸಕೋಟೆ ಡೇರಿ ಉಪಾಧ್ಯಕ್ಷ ಉಮೇಶ್, ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಟಿ.ಎಸ್.ಸ್ವಾಮಿ, ಡೇರಿ ನಿರ್ದೇಶಕರು ಉಪಸ್ಥಿತರಿದ್ದರು.