ಉತ್ತಮ ನಾಯಕರಿಗೆ ರಾಜಕೀಯದಲ್ಲಿ ಉಜ್ವಲ ಭವಿಷ್ಯ


ಸಂಜೆವಾಣಿ ವಾರ್ತೆ
ಹೊಸಪೇಟೆ ಜು28: ಸ್ಥಳೀಯ ಸಂಸ್ಥೆಗಳ ಮೂಲಕ ಜನಸೇವೆ ಗೈಯುವ ನಾಯಕರೇ ಮುಂದೊಂದು ದಿನ ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಉತ್ತಮ ನಾಯಕರಾಗಿ ಹೊರಹೊಮ್ಮಲಿದ್ದಾರೆ ಎಂದು ಬಳ್ಳಾರಿಯ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ರಾಜ್ಯಶಾಸ್ತ್ರ ಮುಖ್ಯಸ್ಥ ಡಾ. ಕೆ. ಮಲ್ಲಿಕಾರ್ಜುನ ಅಭಿಪ್ರಾಯ ಪಟ್ಟರು.
ನಗರದ ಥಿಯೋಸಾಫಿಕಲ್ ಮಹಿಳಾ ಕಾಲೇಜು, ಆಂತರಿಕ  ಗುಣಮಟ್ಟ ಭರವಸೆ ಕೋಶದಡಿಯಲ್ಲಿ ರಾಜ್ಯಶಾಸ್ತ್ರ ವಿಭಾಗದವತಿಯಿಂದ “ಸ್ಥಳೀಯ ಸರ್ಕಾರಗಳಲ್ಲಿ ಸಹಭಾಗಿತ್ವ” ಎಂಬ ವಿಷಯದ ಕುರಿತು ಆಯೋಜಿಸಿದ್ದ ವಿಶೇಷ ಉಪನ್ಯಾಸ ಮಾಲಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬಲವಂತರಾಯ್ ಮೆಹತಾ ಸಮಿತಿಯ ವರದಿಯ 73ನೇ ತಿದ್ದುಪಡಿ, ಗ್ರಾಮೀಣ ಸ್ಥಳೀಯ ಸರ್ಕಾರಗಳಿಗೆ ಸಾಂವಿಧಾನಾತ್ಮಕ ಮಾನ್ಯತೆ ತಂದುಕೊಟ್ಟಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳಿಗೆ ಮತ್ತು ಮಹಿಳೆಯರಿಗೆ ಸೂಕ್ತ ಮೀಸಲಾತಿ ನೀಡಿದೆ. ಆದರೆ ಇಂದು ಅಭ್ಯರ್ಥಿಯ ಸ್ಪರ್ಧೆ ಮತ್ತು ಆಯ್ಕೆಯ ಪ್ರಕ್ರಿಯೆಯು ಉನ್ನತ ವರ್ಗದವರ ಕೈಯಲ್ಲಿದೆ. ಈ ಕಪಿಮುಷ್ಠಿಯಿಂದ ತಪ್ಪಿಸಿಕೊಳ್ಳಲು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸಬಲೀಕರಣದ ಜೊತೆಗೆ ರಾಜಕೀಯ ಶಿಕ್ಷಣ ಮತ್ತು ಪ್ರಜ್ಞೆ ಅಗತ್ಯವಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಕಿಚಿಡಿ ಚನ್ನಪ್ಪ ಮಾತನಾಡಿ, ಭಾರತದ ಪ್ರಜಾಪ್ರಭುತ್ವ ಬೇರುಗಳಾದ ತಳಮಟ್ಟದ ಸರ್ಕಾರಗಳು ಅಧಿಕಾರ ವಿಕೇಂದ್ರೀಕರಣದ ತತ್ವಕ್ಕೆ ಅನುಗುಣವಾಗಿ ರಚನೆಗೊಂಡಿವೆ. ಅಧಿಕಾರವು ಒಬ್ಬ ವ್ಯಕ್ತಿ ಅಥವಾ ಒಂದು ವರ್ಗಕ್ಕೆ ಕೇಂದೀಕೃತವಾಗದಂತೆ ಪ. ಜಾತಿಗೆ ಶೇ. 15ರಷ್ಟು, ಪ. ಪಂಗಡಕ್ಕೆ ಶೇ. 3ರಷ್ಟು, ಹಿಂದುಳಿದ ವರ್ಗಕ್ಕೆ ಶೇ. 33ರಷ್ಟು ಮತ್ತು ಮಹಿಳೆಯರಿಗೆ ಶೇ. 50ರಷ್ಟು ಹಾಗೂ ಈ ವರ್ಗಗಳ ಜನಸಂಖ್ಯೆಗೆ ಅನುಗುಣವಾಗಿ ಸದಸ್ಯತ್ವ ಮತ್ತು ಪದಾಧಿಕಾರತ್ವದಲ್ಲಿ ಮೀಸಲಾತಿ ನೀಡಿ, ಜನಸಹಭಾಗಿತ್ವಕ್ಕೆ ಭದ್ರ ಬುನಾದಿ ಹಾಕಿದೆ ಎಂದರು.
ಸ್ಥಳೀಯ ಸರ್ಕಾರಗಳಲ್ಲಿ ಜನಪ್ರತಿನಿಧಿಗಳ ಮತ್ತು ಜನರ ಸಹಭಾಗಿತ್ವದಲ್ಲಿ ವಾರ್ಡ್‍ಸಭೆ ಮತ್ತು ಗ್ರಾಮಸಭೆಗಳ ನಡೆಸಿ ಸ್ಥಳೀಯ ಸಮಸ್ಯೆಗಳಿಗೆ, ಬೇಡಿಕೆಗಳಿಗೆ ಮತ್ತು ಅಭಿವೃದ್ಧಿ ಕಾಮಗಾರಿಕೆಗಳಿಗೆ ಕ್ರಿಯಾ-ಯೋಜನೆ ರೂಪಿಸುವುದಕ್ಕೆ ಮತ್ತು ಅರ್ಹ ಫಲಾನುಭಿಗಳ ಆಯ್ಕೆಗೆ ಅವಕಾಶ ನೀಡಿದೆ ಎಂದರು. ವಿದ್ಯಾರ್ಥಿನಿಯರಾದ ಪೈರಾಜ್‍ಬಿ, ಕು. ಪೂಜಾ, ಕು. ದೀಪಾ, ಕು. ಅಂಜುಮ್, ಕು. ತ್ರೀವೇಣಿ, ಕು. ನಾಗಮ್ಮ, ಕು. ನಿಂಗಮ್ಮ, ಕು. ಶಿಲ್ಪ ಇತರರು ಸಂವಾದದಲ್ಲಿ ಭಾಗವಹಿಸಿದ್ದರು.
ಉಪನ್ಯಾಸಕ ಬಿ. ಈ ಓಂಕಾರ ಪ್ರಸ್ತಾವಿಕವಾಗಿ ಮಾತನಾಡಿದರು, ಶ್ರೀ ಶಂಕರ ಆನಂದಸಿಂಗ್ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಟಿ. ವೀರಭದ್ರಪ್ಪ ಉಪಸ್ಥಿತಿರಿದ್ದರು, ಕು. ಅನಿತಾ ಎ. ಹೆಚ್ ಪ್ರಾರ್ಥಿಸಿದರು, ಕು. ಪೂಜಾ ಸ್ವಾಗತಿಸಿದರು, ಕು. ಶಿಲ್ಪ ವಂದಿದರು. ಕು. ಫೈರಾಜ್ ಬಿ ನಿರೂಪಿಸಿದರು.

Attachments area