ಉತ್ತಮ ಕಾವ್ಯ ರಚನೆಗೆ ಪರಿಶ್ರಮ ಅವಶ್ಯಕ: ಡಾ.ವಿಕ್ರಮ್ ವೀಸಾಜಿ

ಬೀದರ:ಮಾ.16:ಅತ್ಯುತ್ತಮ ಕಾವ್ಯ ರಚನೆಯಾಗಲು ಕವಿಗಳು ಹೆಚ್ಚಿನ ಪರಿಶ್ರಮ ವಹಿಸಬೇಕು. ಒಂದು ಕವನ ರಚನೆಗೂ ಮುನ್ನ ಅತ್ಯುತ್ತಮವೆನಿಸುವ ಕನಿಷ್ಠ ನೂರು ಕವಿತೆಗಳನ್ನು ಪದೇ ಪದೇ ಓದಬೇಕು. ಹೀಗಾದಲ್ಲಿ ಮಾತ್ರ ಉತ್ತಮ ಕವಿತೆ ಹೊರಬರಲು ಸಾಧ್ಯ ಎಂದು ಕಲಬುರಗಿ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ವಿಕ್ರಮ್ ವೀಸಾಜಿ ಅವರು ತಿಳಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ನಿಮಿತ್ತ ನಗರದ ಪೂಜ್ಯ ಡಾ.ಚನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ ಮಾರ್ಚ್ 15ರಂದು ನಡೆದ ಕವಿಗೋಷ್ಠಿಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕವಿಗಳಿಗೆ ಮಗ್ನತೆ ಅತ್ಯವಶ್ಯಕವಾಗಿತ್ತದೆ. ಯಾವುದೇ ವಸ್ತು, ಘಟನೆ ಅಥವಾ ಸನ್ನಿವೇಶದಲ್ಲಿ ಆಳವಾಗಿ ತೊಡಗಿಸಿಕೊಳ್ಳಬೇಕು. ಶಿಲ್ಪಿ, ಕುಶಲಕರ್ಮಿ ತಮ್ಮ ಕೆಲಸದಲ್ಲಿ ತಲ್ಲೀನರಾಗುವ ರೀತಿಯಲ್ಲಿ ಕವಿಗಳು ವಿಷಯದಲ್ಲಿ ಮಗ್ನರಾಗದಲ್ಲಿ ಉತ್ತಮ ದೃಷ್ಟಿಕೋನ ದೊರೆತು ಗಟ್ಟಿ ಕವನ ಹೊರಬರಲು ಸಾಧ್ಯವಿದೆ ಎಂದರು.

ಕವಿಗಳು ಸದಾ ಹೊಸತನದ ಬಗ್ಗೆ ಹಂಬಲಿಸಬೇಕು. ಓದುಗರು ಈವರೆಗೆ ಊಹೆ, ಚಿಂತನೆ ಮಾಡದ ವಿಷಯಗಳನ್ನು ಓದುಗರಿಗೆ ತಲುಪಿಸುವ ಬಗ್ಗೆ ಆಲೋಚಿಸಬೇಕು. ಹೊಸತನದ ಮೂಲಕ ಹೊಸ ಭಾವವನ್ನು ಹುಟ್ಟುಹಾಕುವ ರೀತಿಯಲ್ಲಿ ವಿಷಯ ವಸ್ತುವಿದ್ದಲ್ಲಿ ಕವನ ಯಶಸ್ವಿಯಾಗುತ್ತದೆ ಎಂದು ಹೊಸ ಕವಿಗಳಿಗೆ ಸಲಹೆ ನೀಡಿದರು.

ಇದಕ್ಕೂ ಮುನ್ನ ಜಿಲ್ಲೆಯ ಕವಿಗಳು ಸಮಾಜಮುಖಿ ಕವನಗಳನ್ನು ವಾಚಿಸಿದರು. ವೀರಶೆಟ್ಟಿ ಬಾವಗೆ, ಮಚೇಂದ್ರ ಅಣಕಲ್, ಓಂಕಾರ ಪಾಟೀಲ, ವೀರಣ್ಣ ಮಂಠಾಳಕರ, ಬಸವರಾಜ ದಯಾಸಾಗರ, ಪ್ರಭು ಮಾಲೆ, ಚನ್ನಪ್ಪ ಸಂಗೊಳಗಿ, ಮಾಣಿಕ ನೇಳಗೆ, ಗಣಪತಿ ಭೂರೆ, ಡಾ.ರಾಮಚಂದ್ರ ಗಣಾಪೂರೆ, ಡಾ.ಮಲ್ಲಿಕಾರ್ಜುನ ನಿಂಗದಳ್ಳಿ, ಎನ್.ಆರ್ ರಗಟೆ, ಸಂಗಮೇಶ ಜ್ಯಾಂತೆ, ಸಂಗಪ್ಪ ತೌಡಿ, ಸುಬ್ಬಣ್ಣ ಕರಕನಳ್ಳಿ, ನಾಗಯ್ಯಾ ಸ್ವಾಮಿ ಮಸ್ಕಲ್, ನಿರ್ಹಂಕಾರ ಬಂಡಿ, ಎಂ.ಆರ್ ಶ್ರೀಕಾಂತ, ಸಂಗಮೇಶ ಮುರ್ಕೆ, ಗೌತಮ ಬಕ್ಕಪ್ಪಾ, ತಾಜುದ್ದಿನ್ ಬಲ್ಲೂರ್, ಉಮೇಶ ಬಾಬು ಮಠದ್, ಮೊ.ವಕೀಲ ಪಟೇಲ್, ಎಸ್.ಕೆ ರಮಾ, ಅನೀಲಕುಮಾರ ಆಣದೂರೆ, ಎಸ್.ಕೆ ಮರಗುತ್ತಿ, ಶಾಂತಕುಮಾರ ಪಾಟೀಲ, ಮಧುಕರ ಗಾಂವಕರ್, ನಾಗೇಂದ್ರ ಬಿರಾದಾರ, ಮಹ್ಮದ್ ಮೈನೋದ್ದಿನ್, ಅಜಿತ ನೇಳಗೆ, ಹಣಮಂತ ಪೂಜಾರಿ, ಶಿವರಾಜ ಮಿತ್ರಾ, ನಾಗರಾಜ ಬುಳ್ಳಾ, ರವಿದಾಸ ಕಾಂಬಳೆ, ಮಹ್ಮದ್ ನೈಮೋದ್ದಿನ್ ಸೇರಿದಂತೆ ಹಲವರು ಸ್ವ ರಚಿತ ಕಾವ್ಯ ವಾಚನ ಮಾಡಿದರು.

ಈ ಸಂದರ್ಭದಲ್ಲಿ ಹಿರಿಯ ಸಾಹಿತಿ ಸೋಮನಾಥ ನುಚ್ಚಾ, ಎಂ.ಜಿ ಗಂಗನಪಳ್ಳಿ, ಎಸ್.ಎಸ್ ಹೊಡಮನಿ, ಪ್ರೊ.ಓಂಪ್ರಕಾಶ ದಡ್ಡೆ, ವಿಜಯಕುಮಾರ ಗೌರೆ, ಡಾ.ಸಂಜೀವಕುಮಾರ ಅತಿವಾಳೆ ಸೇರಿದಂತೆ ಸಾಹಿತಿಗಳು ಮತ್ತು ಸಹಿತ್ಯಾಸಕ್ತರು ಉಪಸ್ಥಿತರಿದ್ದರು.

ಸಾಹಿತಿಗಳಾದ ಡಾ.ರಘುಶಂಖ ಭಾತಂಬ್ರಾ ಆಶಯನುಡಿಗಳನ್ನಾಡಿದರು. ಜಯದೇವಿ ತಾಯಿ ಯದ್ಲಾಪೂರೆ ನಿರೂಪಿಸಿದರು. ಶಿವಕುಮಾರ ಕಟ್ಟೆ ಸ್ವಾಗತಿಸಿದರು. ಗಂಗಶೆಟ್ಟಿ ಖಾನಾಪೂರ ವಂದಿಸಿದರು.