ಉತ್ತಮ ಕಲಾವಿದ ಪ್ರಶಸ್ತಿಗೆ ಚಂದು ಬನ್ನಟ್ಟಿ ಆಯ್ಕೆ

ಅಫಜಲಪುರ:ಅ.9: ಕಲಬುರ್ಗಿ ನಗರದ ಎಸ್.ಎಂ ಪಂಡಿತ ರಂಗಮಂದಿರದಲ್ಲಿ ಬರುವ ನವಂಬರ್ 18 ಮತ್ತು 19 ರಂದು ಬೆಳಗ್ಗೆ 11 ಗಂಟೆಗೆ ಎರಡು ದಿನ ಉಚಿತವಾಗಿ ಸುಂದರ ಸಾಮಾಜಿಕ ನಾಟಕವನ್ನು ಹಮ್ಮಿಕೊಳ್ಳಲಾಗಿದೆ. ಹೀಗಾಗಿ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ರಂಗಮಿತ್ರ ನಾಟ್ಯ ಸಂಘದ ಜಿಲ್ಲಾಧ್ಯಕ್ಷ ಶಾಮರಾವ ಕೊರವಿ ಮನವಿ ಮಾಡಿದರು.

ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಕಲಬುರ್ಗಿ ಜಿಲ್ಲೆಯ ಪ್ರತಿಯೊಂದು ತಾಲೂಕಿನ ತಲಾ ಒಬ್ಬ ಪ್ರತಿಭಾವಂತ ಕಲಾವಿದರನ್ನು ಗುರುತಿಸಿ, ಅವರಿಗೆ 5 ಗ್ರಾಂ ಬಂಗಾರ ಹಾಗೂ ಪ್ರಶಸ್ತಿಯನ್ನು ನೀಡಿ ಗೌರವಿಸುವ ಕಾರ್ಯಕ್ರಮ ರೂಪಿಸಲಾಗಿದ್ದು ಈ ಬಾರಿ ಅಫಜಲಪುರ ತಾಲೂಕಿನ ರಂಗ ಕಲಾವಿದ ಚಂದು ಬನ್ನಟ್ಟಿ ಅವರಿಗೆ ಉತ್ತಮ ಕಲಾವಿದರೆಂದು ಗುರುತಿಸಿ ಆಯ್ಕೆ ಮಾಡಲಾಗಿದೆ. ಹಾಗೂ ಎಸ್.ಎಂ ಪಂಡಿತ್ ರಂಗಮಂದಿರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ “ಮಗ ಹೋದರೂ, ಮಾಂಗಲ್ಯ ಬೇಕು” ಎಂಬ ಸುಂದರ ಸಾಮಾಜಿಕ ನಾಟಕ ಪ್ರಸ್ತುತಪಡಿಸಲು ಅಫಜಲಪುರ ತಾಲೂಕಿನ ಶ್ರೀ ಸಿದ್ದರಾಮೇಶ್ವರ ನಾಟ್ಯ ಸಂಘದ ಕಲಾ ಬಳಗವನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.

ರಂಗಮಿತ್ರ ನಾಟ್ಯ ಸಂಘದ ಸಂಯೋಜಕ ಶಂಕರ ಹಿಪ್ಪರಗಿ ಮಾತನಾಡಿ, ಇತ್ತೀಚೆಗೆ ಸರ್ಕಾರದ ಮಟ್ಟದಲ್ಲಿ ಪ್ರಶಸ್ತಿ ಪುರಸ್ಕಾರಗಳನ್ನು ಪಡೆಯಬೇಕಾದರೆ ದೊಡ್ಡ ಮಟ್ಟದ ಲಾಬಿ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದ್ದು ಅಂತಹ ಗೋಜಿಗೆ ಹೋಗುವ ಪರಿಸ್ಥಿತಿಯಲ್ಲಿ ನಾವಿಲ್ಲ. ಹೀಗಾಗಿ ಗ್ರಾಮೀಣ ಭಾಗದಲ್ಲಿ ಎಲೆಮರೆಕಾಯಿಯಂತೆ ಗುರುತಿಸಿಕೊಂಡಿರುವ ಕಲಾವಿದರನ್ನು ಹಾಗೂ ನಾಟಕ ಕಂಪನಿಯ ಮಾಲೀಕರನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ನಿಟ್ಟಿನಲ್ಲಿ ಕಳೆದ ಮೂರು ವರ್ಷಗಳಿಂದ ನಮ್ಮ ರಂಗಮಿತ್ರ ನಾಟ್ಯ ಸಂಘ ನಿರಂತರ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ. ಮತ್ತು ಉತ್ತಮ ಕಲಾವಿದರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮೂಲಕ ಕಲಾವಿದರನ್ನು ಪೆÇ್ರೀತ್ಸಾಹಿಸಿ ಕಲೆಯನ್ನು ಜೀವಂತವಾಗಿರಿಸುವ ನಿಟ್ಟಿನಲ್ಲಿ ನಮ್ಮ ನಾಟ್ಯ ಸಂಘ ಮುಂದೆ ಸಾಗಿದೆ. ಹೀಗಾಗಿ ನವೆಂಬರ್ 18 ಮತ್ತು 19ರಂದು ನಡೆಯುವ ಸಮಾರಂಭದಲ್ಲಿ ಈ ಭಾಗದ ಗಣ್ಯಮಾನ್ಯರು ಹಾಗೂ ಹರಗುರು ಚರಮೂರ್ತಿಗಳ ಉಪಸ್ಥಿತಿಯಲ್ಲಿ ಉತ್ತಮ ಕಲಾವಿದರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದ್ದು ನಾಟಕ ವೀಕ್ಷಣೆಗೆ ಜಿಲ್ಲೆಯ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಮನವಿ ಮಾಡಿದರು.

ಸುದ್ದಿಗೋಷ್ಟಿಯಲ್ಲಿ ರಂಗಮಿತ್ರ ನಾಟ್ಯ ಸಂಘದ ಜಿಲ್ಲಾ ಉಪಾಧ್ಯಕ್ಷ ಚಂದು ಕರಜಗಿ, ಸಂಗೀತ ಸಂಯೋಜಕ ಪರಮೇಶ್ವರ ಲೇಂಡೆ, ಕಲಾವಿದರ ಸಂಘದ ತಾಲೂಕು ಅಧ್ಯಕ್ಷ ಚಂದು ಬನ್ನಟ್ಟಿ, ಸಂತೋಷ ಖನ್ನಾ, ಗೈಬಣ್ಣ ವಾಲಿಕರ, ಚಂದರ ಚವ್ಹಾಣ ಇದ್ದರು.