ಉತ್ತಮ ಉಪನ್ಯಾಸಕರಾಗಲು ಪೂರ್ವಸಿದ್ಧತೆ ಅಗತ್ಯ-ಎಸ್.ಕೆ.ಬಿ.ಪ್ರಸಾದ್

ಚಿತ್ರದುರ್ಗ.ಜ.೧೦;: ಉತ್ತಮ ಉಪನ್ಯಾಸಕರಾಗಲು ಪೂರ್ವಸಿದ್ಧತೆ ಅಗತ್ಯ ಎಂದು ಡಯಟ್ ಪ್ರಾಂಶುಪಾಲ ಎಸ್.ಕೆ.ಬಿ.ಪ್ರಸಾದ್ ಹೇಳಿದರು. ನಗರದ ಡಯಟ್‌ನಲ್ಲಿ ಪದವಿಪೂರ್ವ ಉಪನ್ಯಾಸಕರಿಗೆ ಆಯೋಜಿಸಿದ್ದ ವೃತ್ತಿ ಬುನಾದಿ ತರಬೇತಿಯಲ್ಲಿ ತರಬೇತಿ ಸಾಹಿತ್ಯ ವಿತರಿಸಿ ಮಾತನಾಡಿದ ಅವರು ಶಿಕ್ಷಕರು ಓದುವ ಹವ್ಯಾಸ ರೂಢಿಸಿಕೊಂಡು ಮಕ್ಕಳಲ್ಲಿ ಸಾಹಿತ್ಯ ಕೃತಿಗಳನ್ನು ಓದುವಂತೆ ಪ್ರೇರೇಪಿಸಬೇಕು. ತಾವು ಬೋಧಿಸುವ ವಿಷಯಕ್ಕೆ ಪೂರಕವಾದ ನಿಯತಕಾಲಿಕೆಗಳನ್ನು ಅಧ್ಯಯನ ಮಾಡಬೇಕು ಇದರಿಂದ ಬೋಧನೆ, ಕಲಿಕೆ ಪರಿಣಾಮಕಾರಿಯಾಗುತ್ತದೆ ಎಂದರು.    ನೋಡಲ್ ಅಧಿಕಾರಿ ಬೋರೇಗೌಡ ಮಾತನಾಡಿ, ಶಿಕ್ಷಣದ ಸಾರ್ವತ್ರೀಕರಣಕ್ಕೆ ಸರ್ಕಾರ ಹೆಚ್ಚು ಸೌಲಭ್ಯ ನೀಡುತ್ತಿದ್ದು ಮಕ್ಕಳ ಶಿಕ್ಷಣ ಪೂರ್ಣಗೊಳಿಸಲು ಉಪನ್ಯಾಸಕರು ಶ್ರಮಿಸಬೇಕು.ಮಕ್ಕಳ ಕಲಿಕಾ ಮಟ್ಟ ಗಮನಿಸಿ ವಿವಿಧ ಬೋಧನಾ ವಿಧಾನಗಳನ್ನು ಬಳಸಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದರು.  ಉಪನ್ಯಾಸಕ ಎಸ್.ಬಸವರಾಜು ಮಾತನಾಡಿ, ಗುರುಶಿಷ್ಯರ ಮಧ್ಯೆ ಆತ್ಮೀಯವಾದ ಭಾವನಾತ್ಮಕವಾದ ಸಂಬಂಧವಿರಬೇಕು.ಪರಸ್ಪರ ಭಾವನೆಗಳು ಐಕ್ಯವಾದಾಗ ಸಾಮಾಜಿಕ ಪ್ರಜ್ಞೆ ಬೆಳೆಯುತ್ತದೆ. ಅಕ್ಷರ ಜ್ಞಾನದ ಜೊತೆಗೆ ಶಿಸ್ತು, ಸಹನೆ, ಸನ್ನಡತೆ, ಸಮಯಪ್ರಜ್ಞೆ ಧನಾತ್ಮಕ ಚಿಂತನೆ ಬೆಳೆಸಬೇಕು. ಬದುಕಿನ ವಿಕಾಸಕ್ಕೆ ಸಾಹಿತ್ಯ ಸಂಜೀವಿನಿಯಾಗಿದ್ದು, ಮಕ್ಕಳಲ್ಲಿ ಸಾಹಿತ್ಯ ಜ್ಞಾನದ ಬೆಳಕು ನೀಡಿ ಮೌಲ್ಯಪ್ರಜ್ಞೆ ಬಿತ್ತಬೇಕು ಎಂದರು.  ಎನ್.ರಾಘವೇಂದ್ರ ಮಾತನಾಡಿ, ಇಂದಿನ ಬೋಧನಾ ಕಲಿಕಾ ಪ್ರಕ್ರಿಯೆಯಲ್ಲಿ ತಂತ್ರಜ್ಞಾನದ ಬಳಕೆ ಮಾಡುವುದು ಅಗತ್ಯವಾಗಿರುವುದರಿಂದ ಉಪನ್ಯಾಸಕರು ತಂತ್ರಜ್ಞಾನದ ಅರಿವು ಮೂಡಿಸಿಕೊಳ್ಳಬೇಕು.ಮಕ್ಕಳ ಬೌದ್ದಿಕಮಟ್ಟ ಹೆಚ್ಚಿರುವುದರಿಂದ ತಂತ್ರಜ್ಞಾನ ಆಧಾರಿತ ಬೋಧನೆ ಮಾಡುವುದರಿಂದ ಮಕ್ಕಳಿಗೆ ಪ್ರಚಲಿತ ವಿಷಯಗಳನ್ನು ತಿಳಿಸಲು ಪೂರಕವಾಗುತ್ತದೆ ಎಂದರು.