ಉತ್ತಮ ಆರೋಗ್ಯ ಹೊಂದಲು ಪೌಷ್ಠಿಕ ಆಹಾರ ಅತ್ಯಾವಶ್ಯಕ: ಕಸ್ತೂರಿ ಪಂಜ

ಮಂಗಳೂರು, ಮಾ.೨೪- ಪ್ರತಿಯೊಬ್ಬರು ಆರೋಗ್ಯವಂತರಾಗಿರಲು ಪೌಷ್ಠಿಕ ಆಹಾರ ಸೇವಿಸುವುದು ಅತೀ ಅಗತ್ಯ ಎಂದು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ ಹೇಳಿದರು.

ಅವರು ಇಂದು ನಗರದ ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಕಲ್ಯಾಣ ಇಲಾಖೆ ಇವರ ಸಹಯೋಗದಲ್ಲಿ ಪೋಷಣ್ ಅಭಿಯಾನ ಯೋಜನೆಯಡಿ ಆಯೋಜಿಸಿದ ಪೋಷಣ್ ಪಕ್ವಾಡ್ -೨೦೨೧ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ನಮ್ಮ ಹಿರಿಯರು ಪೌಷ್ಠಿಕ ಆಹಾರ ಸೇವಿಸಿ, ಉತ್ತಮ ಆರೋಗ್ಯ ಹೊಂದಿದ್ದಾರೆ.  ಪ್ರಸ್ತುತ ದಿನಗಳಲ್ಲಿ ಮಕ್ಕಳು ಪೌಷ್ಠಿಕ ಆಹಾರ ಸೇವಿಸುವುದು ವಿರಳವಾಗುತ್ತಿದೆ ಎಂದ ಅವರು ಎಲ್ಲರೂ ಪೌಷ್ಠಿಕ ಆಹಾರ ಸೇವಿಸುವುದು ಅತೀ ಅಗತ್ಯ  ನಮ್ಮ ಮಕ್ಕಳಿಗೆ ಮನೆಯಲ್ಲಿ ತಯಾರಿಸಿದ ಆಹಾರ ಸೇವಿಸುವಂತೆ ಅಭ್ಯಾಸ ಮಾಡಬೇಕು ಎಂದರು.

ಅಪೌಷ್ಠಿಕತೆಯ ವಿರುದ್ದ ಹೋರಾಡಲು ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಹಾಗೂ ಸ್ತ್ರೀಶಕ್ತಿ ಸಂಘದವರು ಸಾರ್ವಜನಿಕರಿಗೆ ಪೌಷ್ಠಿಕ ಆಹಾರದ ಮಹತ್ವ, ಅಂಗನವಾಡಿ ಕೇಂದ್ರಗಳಲ್ಲಿ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಬೇಕು ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕುಮಾರ್ ಮಾತನಾಡಿ, ಅಪೌಷ್ಠಿಕತೆಯ ಸಮಸ್ಯೆ ನಿವಾರಣೆಗಾಗಿ ಪ್ರತೀ ವರ್ಷ ಪೌಷ್ಠಿಕ ಅಭಿಯಾನ ನಡೆಸಲಾಗುತ್ತದೆ. ಪೋಷಣ್ ಅಭಿಯಾನದ ಪ್ರಮುಖ ಉದ್ದೇಶ ಅಪೌಪ್ಠಿಕತೆಯನ್ನು ಹೋಗಲಾಡಿಸುವುದು, ಮುಖ್ಯವಾಗಿ ಗರ್ಭಿಣಿ, ಬಾಣಂತಿಯರಲ್ಲಿ ಹಾಗೂ ಮಕ್ಕಳಲ್ಲಿ ಅಪೌಪ್ಠಿಕತೆಯನ್ನು ದೂರ ಮಾಡಬೇಕು ಎಂದರು.

ಪ್ರತಿಯೊಬ್ಬ ವ್ಯಕ್ತಿಗೂ ದೈಹಿಕ ಆರೋಗ್ಯ ಮತ್ತು ಮಾನಸಿಕ ಆರೋಗ್ಯ ಅಗತ್ಯವಾಗಿದೆ. ಇವೆರಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದ ಅವರು, ಪೌಷ್ಠಿಕತೆಗೆ ಆರ್ಥಿಕ ತೊಂದರೆ ಮುಖ್ಯ ಕಾರಣವಾಗಿದ್ದು, ಪೌಷ್ಠಿಕ ಆಹಾರ ಸೇವಿಸಲು ಸಾದ್ಯವಾಗುವುದಿಲ್ಲ ಎಂದರು.

ಸಮೀಕ್ಷೆಯ ಪ್ರಕಾರ, ಜಿಲ್ಲೆಯಲ್ಲಿ ಪ್ರಸ್ತುತ ೧೧೨ ಮಕ್ಕಳು ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ ಹೊರಜಿಲ್ಲೆಗಳಿಂದ ಕೂಲಿಗರಸಿ ಆಗಮಿಸಿದವರ ಬಗ್ಗೆ ಮಾಹಿತಿ ಕಲೆ ಹಾಕುವುದರೊಂದಿಗೆ ಅವರ ಮಕ್ಕಳಲ್ಲಿ ಅಪೌಷ್ಠಿಕತೆ ದೂರ ಮಾಡುವುದು ಮುಖ್ಯ ಉದ್ದೇಶವಾಗಿದೆ ಎಂದರು.

ಈ ಯೋಜನೆಗಳು ಆರ್ಥಿಕವಾಗಿ ಹಿಂದುಳಿದ ಕುಂಟುಂಬಗಳಿಗೆ ಸಹಾಯವಾಗಬೇಕು ಎಂದ ಅವರು, ಅಂಗನವಾಡಿ ಕಾರ್ಯಕರ್ತೆಯರು ಗ್ರಾಮದ ಪ್ರತಿ ಮನೆಗಳಿಗೆ ಭೇಟಿ ನೀಡಿ ಮಕ್ಕಳ ಹಾಗೂ ಗರ್ಭಿಣಿಯರ ಆರೋಗ್ಯ ವಿಚಾರಿಸುವ ಹಾಗೂ ಸೂಕ್ತ ಅರಿವು ಮೂಡಿಸುವಂತಹಾ  ಕಾರ್ಯವಾಗಬೇಕು ಎಂದರು.

ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಪಾಪ ಭೋವಿ,  ಅಂಗನವಾಡಿ ಕಾರ್ಯಕರ್ತೆಯರು, ಸ್ತ್ರೀ ಶಕ್ತಿ ಯೋಜನೆಯ ಸದಸ್ಯರು, ಉಪಸ್ಥಿತರಿದ್ದರು.