ಉತ್ತಮ ಆರೋಗ್ಯ ಸೌಲಭ್ಯ ಕಲ್ಪಿಸುವುದು ಪುಣ್ಯದ ಕೆಲಸ: ಚೌಡಪ್ಪನವರ

ಬೈಲಹೊಂಗಲ, ಜು 11: ಗ್ರಾಮೀಣ ಪ್ರದೇಶಗಳ ಜನ ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಕೂಡ ಮನೆ ಆರ್ಥಿಕ ತೊಂದರೆಗಳಿಂದಾಗಿ ನಗರದಲ್ಲಿನ ಆಸ್ಪತ್ರೆಗಳಿಗೆ ಪದೆ ಪದೆ ತೆರಳಿ ಚಿಕಿತ್ಸೆ ಪಡೆಯುವುದು ಅಸಾಧ್ಯವಾಗಿದೆ. ಇಂತಹ ಸಂದರ್ಭದಲ್ಲಿ ಮಾನವೀಯ ಕಳಕಳಿಯ ಆಸ್ಪತ್ರೆಗಳ ವೈದ್ಯರು ಸಹಕಾರದಿಂದ ಹಳ್ಳಿಗಳಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಿ ಗ್ರಾಮಿಣ ಜನರಿಗೆ ಉತ್ತಮ ಆರೋಗ್ಯ ಸೌಲಭ್ಯ ಕಲ್ಪಿಸುವುದು ಪುಣ್ಯದ ಕೆಲಸ ಎಂದು ಶ್ರೀ ಸೋಮೇಶ್ವರ ಶುಗರ್ಸ್ ಹಾಗೂ ಶ್ರೀ ಸಂಗಮೇಶ್ವರ ಪಿಕೆಪಿಎಸ್ ನಿರ್ದೇಶಕ ನಿಂಗಪ್ಪ ಚೌಡಣ್ಣವರ ಹೇಳಿದರು.
ಗ್ರಾಮದ ಗ್ರಾಮದೇವತೆ ಗುಡಿಯಲ್ಲಿ ಸ್ಥಳೀಯ ಶ್ರೀ ಸಂಗಮೇಶ್ವರ ಪಿಕೆಪಿಎಸ್ ಹಾಗೂ ಹುಬ್ಬಳ್ಳಿಯ ಅಶೋಕಾ ಆಸ್ಪತ್ರೆ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಉಚಿತ ಕಣ್ಣಿನ ಮತ್ತು ಹೃದಯರೋಗ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರದಲ್ಲಿ ಮಾತನಾಡಿದರು.
ಬೆಂಗಳೂರು ನಾರಾಯಣ ಹೃದಯಾಲಯದ ಹೃದ್ರೋಗ ತಜ್ಞ ಡಾ. ದಯಾನಂದ ಎಲಿಗಾರ ಮಾತನಾಡಿ ವಿವಿಧ ರೀತಿಯ ಖಾಯಿಲೆಗಳಿಂದ ಬಳಲುತ್ತಿರುವ ಜನರಿಗೆ ಚಿಕಿತ್ಸೆ ಜತೆಗೆ ಆತ್ಮಸ್ಥೈರ್ಯ ತುಂಬುವುದಾಗಬೇಕು. ಸಮಾಜದ ಎಲ್ಲ ಜನರ ನೆರವು ಅಂತವರಿಗೆ ಬಹು ಮುಖ್ಯವಾಗಿದೆ. ಕಣ್ಣಿನ ಲೆನ್ಸ್‍ಗಳನ್ನು ಅತ್ಯಂತ ಕಡಿಮೆ ದರದಲ್ಲಿ ಜನರಿಗೆ ಒದಗಿಸಿ ಎಲ್ಲರಿಗೂ ಉತ್ತಮ ದೃಷ್ಟಿ ಭಾಗ್ಯ ನೀಡುತ್ತಿರುವ ಹುಬ್ಬಳ್ಳಿ ಅಶೋಕ ಆಸ್ಪತ್ರೆ ಕಾರ್ಯ ಶ್ಲಾಘನೀಯ ಎಂದರು.
ಪಿಕೆಪಿಎಸ್ ಅಧ್ಯಕ್ಷ ವೀರೇಂದ್ರ ಸಂಗೊಳ್ಳಿ, ಉಪಾಧ್ಯಕ್ಷ ಬಸವರಾಜ ಮುರಗೋಡ, ನಿರ್ದೇಶಕರಾದ ವಿಠ್ಠಲ ಗಾಬಿ, ಉದಯ ಕೊಟಬಾಗಿ, ನಾಗಪ್ಪ ಸವದತ್ತಿ, ಈಶ್ವರ ಅಂದಾನಶೆಟ್ಟಿ, ಲಕ್ಕಪ್ಪ ಅಲಕ್ಕನವರ, ಶೋಭಾ ಕಂಚಿನಮಠ, ಶಂಕ್ರೆಮ್ಮ ಚೌಡಣ್ಣವರ ಉಪಸ್ಥಿತರಿದ್ದರು.
ಸಿಇಓ ಎಮ್.ಎಸ್.ಶಿಂಧೆ ನಿರೂಪಿಸಿ ವಂದಿಸಿದರು. ದೊಡವಾಡ, ನನಗುಂಡಿಕೊಪ್ಪ, ಗುಡಿಕಟ್ಟಿ ಗ್ರಾಮಗಳ ನೂರಾರು ಜನ ಶಿಬಿರದಲ್ಲಿ ಪಾಲ್ಗೊಂಡು ಚಿಕಿತ್ಸೆ ಪಡೆದರು.