ಉತ್ತಮ ಆರೋಗ್ಯ ಸೇವೆ ನೀಡಲು ಸಮನ್ವತೆಯಿಂದ ಕೆಲಸ ಮಾಡಿ: ಡಿ.ಸಿ

ಬೀದರ್:ಜೂ.25: ಆರೋಗ್ಯ ಇಲಾಖೆಯ ಕಾರ್ಯಕ್ರಮಗಳನ್ನು ಸರಿಯಾಗಿ ಜಾರಿಗೊಳಿಸಲು ಎಲ್ಲಾ ಸಿಬ್ಬಂದಿಗಳು ಸಮನ್ವಯತೆಯಿಂದ ಕೆಲಸ ಮಾಡಬೇಕು. ಇದರಿಂದ ಜಿಲ್ಲೆಯ ಜನತೆಗೆ ಉತ್ತಮ ಆರೋಗ್ಯ ಸೇವೆಗಳು ದೊರೆಯುತ್ತದೆ ಎಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಆರೋಗ್ಯ ಇಲಾಖೆ ವಿವಿಧ ಕಾರ್ಯಕ್ರಮಗಳಾದ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮ, ಸಾರ್ವತ್ರಿಕ ಲಸಿಕಾ ಕಾರ್ಯಕ್ರಮ ಹಾಗೂ ದಡಾರ ಮತ್ತು ರುಬೆಲಾ ನಿರ್ಮೂಲನೆ, ವಿಶ್ವ ಜನಸಂಖ್ಯೆ ದಿನಾಚರಣೆ, ಮಿಷನ್ ಇಂದ್ರಧನುಷ ಅಭಿಯಾನ, ರಾಷ್ಟ್ರೀಯ ಡೇಂಗಿ ದಿನ, ಜಿಲ್ಲಾ ವಿಭಾಗದ ಪಿಸಿ ಮತ್ತು ಪಿಎನ್‍ಡಿಟಿ ಸಲಹಾ ಸಮಿತಿ ಹಾಗೂ ತಪಾಸಣೆ ಮತ್ತು ಮೇಲ್ವಿಚಾರಣೆಯ ಜಿಲ್ಲಾ ಮಟ್ಟದ ಸಮನ್ವ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಕ್ಷಯರೋಗಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ತಪಾಸಣೆ ಪ್ರಮಾಣ ಕಡಿಮೆಯಾಗುತ್ತಿದ್ದು ಇದನ್ನು ಗಂಭೀರವಾಗಿ ಪರಿಗಣಿಸಿ ತಪಾಸಣೆ ಪ್ರಮಾಣ ಹೆಚ್ಚಿಸಬೇಕು. ಈ ರೋಗ ಕಂಡುಬರುವ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಒದಗಿಸಬೇಕು ಹಾಗೂ ಜನರಲ್ಲಿ ಈ ಕಾಯಿಲೆಯ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

ಜಿಲ್ಲೆಯ ಯಾವುದೇ ಸ್ಕ್ಯಾನಿಂಗ್ ಸೆಂಟರ್‍ನಲ್ಲಿ ಬ್ರೂಣ ಲಿಂಗ ಪತ್ತೆಯ ಪ್ರಕರಣ ಕಂಡುಬಂದಲ್ಲಿ ತಕ್ಷಣ ಅವರ ವಿರುದ್ದ ಕ್ರಮ ತೆಗೆದುಕೊಳ್ಳಬೇಕು ಹಾಗೂ ಜಿಲ್ಲೆಯಲ್ಲಿ ಜನಿಸುವ ಮಕ್ಕಳ ಪ್ರಾರಂಭದಲ್ಲಿ ನೀಡಬೇಕಾದ ಲಸಿಕೆಯನ್ನು ಸರಿಯಾದ ಕ್ರಮದಲ್ಲಿ ನೀಡಬೇಕು ಇದರಿಂದ ಮಕ್ಕಳಿಗೆ ಮುಂದೆ ಕಾಡುವ ಆರೋಗ್ಯ ಸಮಸ್ಯೆಗಳಿಂದ ತಪ್ಪಿಸಬಹದು ಎಂದರು.

ಕೆಲವು ಮಕ್ಕಳು ರುಬೆಲಾ ಮತ್ತು ದಡಾರಕ್ಕೆ ನೀಡುವ ಎಂ-1 ಹಾಗೂ ಎಂ-2 ಎರಡು ಮಾತ್ರಗಳನ್ನು ಪಡೆದಿದ್ದು ಕೆಲವು ಮಕ್ಕಳು ಮೊದಲ ಲಸಿಕೆಯಾದ ಎಂ-1 ಮಾತ್ರ ಪಡೆದಿದ್ದಾರೆ ಎಂಬ ವರದಿ ಇದೆ. ಆದ್ದರಿಂದ ಆ ಮಕ್ಕಳನ್ನು ಪತ್ತೆ ಹಚ್ಚಿ ಅವರಿಗೂ ಸಹ ಲಸಿಕೆ ನೀಡಬೇಕು. ಹಾಗೂ ಮುಂದೆ ಮಕ್ಕಳಿಗೆ ಈ ಲಸಿಕೆ ನೀಡುವ ಸಂದರ್ಭದಲ್ಲಿ ಸರಿಯಾದ ರೀತಿಯಲ್ಲಿ ದಾಖಲೆ ಸಂಗ್ರಹ ಮಾಡಬೇಕು ಎಂದು ತಿಳಿಸಿದರು. ಈ ಸಭೆಯಲ್ಲಿ ಜಿಲ್ಲಾ ಪಂಚಾಯತ ಮುಖ್ಯಾ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಎಂ., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ರತಿಕಾಂತ ಸ್ವಾಮಿ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಶಿವಶಂಕರ. ಬಿ, ಆರೋಗ್ಯ ಇಲಾಖೆಯ ವಿವಿಧ ಕಾರ್ಯಕ್ರಮಗಳ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದÀ ಅಧಿಕಾರಿಗಳು ಉಪಸ್ತಿತರಿದ್ದರು.