ಉತ್ತಮ ಆರೋಗ್ಯ ಇದ್ದರೆ ಸಾಧನೆ ಮಾಡಲು ಸಾಧ್ಯ

ರಾಯಚೂರು,ಮಾ.೧೯- ಉತ್ತಮ ಆರೋಗ್ಯ ಇದ್ದರೆ ಮನುಷ್ಯ ಎತ್ತರಕ್ಕೆ ಬೆಳೆದು ಸಾಧನೆ ಮಾಡಲು ಸಾಧ್ಯ. ಅದರಲ್ಲೂ ಸಾಹಿತ್ಯದ ಓದು ಮನುಷ್ಯನನ್ನು ಮಾನವೀಯತೆ ಕಡೆಗೆ ಕೊಂಡೊಯ್ಯಲು ಕಾರಣವಾಗುತ್ತದೆ ಎಂದು ರಾಯಚೂರಿನ ಲೀವರ್ ತಜ್ಞರಾದ ಡಾ. ಮಂಜುನಾಥ ಹಟ್ಟಿ ಹೇಳಿದರು.
ಅವರು ಇಂದು ರಾಯಚೂರಿನ ಎಸ್‌ಕೆಇಎಸ್ ಪ್ಯಾರಾಮೆಡಿಕಲ್ ಕಾಲೇಜಿನಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ ಡಾ. ಚಂದ್ರಶೇಖರ್ ಎ. ಕಾರ್ಲಕುಂಟಿ ದತ್ತಿ ಹಾಗೂ ತೋತರಬಂಡಿ ನಾಗಪ್ಪ ಬೆನಕಪ್ಪ ಸ್ಮಾರಕ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಸಾಹಿತ್ಯ ಕುರಿತು ಉಪನ್ಯಾಸ ನೀಡಿ ಮಾತನಾಡಿದರು.
ಮನುಷ್ಯನ ದೈಹಿಕ ಆರೋಗ್ಯಕಿಂತ ಮಾನಸಿಕ ಆರೋಗ್ಯವು ತುಂಬಾ ಮುಖ್ಯ. ಉತ್ತಮ ಮಾನಸಿಕ ಆರೋಗ್ಯದಿಂದ ಮನುಷ್ಯನ ದೈಹಿಕ ಆರೋಗ್ಯ ಚೆನ್ನಾಗಿರುತ್ತದೆ. ಮಾನಸಿಕ ಆರೋಗ್ಯಕ್ಕೆ ಉತ್ತಮ ಪುಸ್ತಕಗಳ ಓದು, ಅಧ್ಯಯನದಿಂದ ಮನಸ್ಸು ಪ್ರಫಲತೆ ಪಡೆದು ಆರೋಗ್ಯಪೂರ್ಣ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಇತ್ತಿಚಿನ ಅಧ್ಯಯನಗಳು ಹೇಳುತ್ತವೆ. ಮನುಷ್ಯನಿಗೆ ಕ್ಯಾನ್ಸರ್ ನಂತಹ ಗಂಭೀರ ಕಾಯಿಲೆಗಳು ಬಂದವರು, ಸಂಗೀತ ಮತ್ತು ಉತ್ತಮ ಪುಸ್ತಕಗಳಿಂದ ಆರೋಗ್ಯ ಸುಧಾರಿಸಿ ಕಾಯಿಲೆ ತೀವ್ರತೆ ಕಡಿಮೆಯಾದದ್ದು ಮತ್ತು ಗುಣಮುಖರಾಗಿದ್ದನ್ನು ನಾವು ಕಾಣುತ್ತೇವೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸಮಾಜ ಸೇವೆಗಾಗಿ ಯುವಕರು ಎಂಬ ವಿಷಯ ಕುರಿತು ರಾಯಚೂರಿನ ಎಲ್.ವಿ.ಡಿ.ಕಾಲೇಜಿನ ಉಪ ಪ್ರಾಂಶುಪಾಲರಾದ ಆಂಜನೇಯ ಓಬಳೇಶ್ ಅವರು ಮಾತನಾಡುತ್ತಾ, ಸ್ವಾರ್ಥ ಸೇವೆಗಿಂತ ನಿಸ್ವಾರ್ಥ ಸೇವೆಯು ದೇವರ ಸೇವೆಯಾಗುದೆ. ನಿಸ್ವಾರ್ಥ ಸೇವೆ ಪವಿತ್ರವಾದ ಸೇವೆಯಾಗಿದೆ. ಸೇವೆಯಲ್ಲಿ ಯುವ ಜನಾಂಗ ತೊಡೆಸಿಕೊಳ್ಳಬೇಕು. ಅದರ ಮೂಲಕ ಸಮಾಜದ ಅಭಿವೃದ್ಧಿಯಲ್ಲಿ ಪಾಲುದಾರರಾಗಬೇಕೆಂದು ಹೇಳಿದರು.
ಮದರ್ ತೆರೇಸಾ ಅಂತವರು ನಿಸ್ವಾರ್ಥ ಸೇವೆ ಮಾಡಿದ್ದರಿಂದ ಅವರು ಇಂದಿಗೂ ಅಜರಾಮರ ಆಗಿದ್ದಾರೆ. ಅವರನ್ನು ನಾವೆಲ್ಲ ನೆನೆಸುತ್ತೇವೆ. ದೇಶ ಸೇವೆ ಸಮಾಜ ಸೇವೆಗಾಗಿ ತಮ್ಮ ಜೀವನವನ್ನು ತ್ಯಾಗ ಮಾಡಿದವರು ಅನೇಕರು, ಅಂಥವರ ಮಾರ್ಗದಲ್ಲಿ ನಾವು ನಡೆಯಬೇಕು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಎಸ್‌ಕೆಇಎಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಡಾ.ಎಂ. ಬಾಬುರಾವ್ ಶೇಗುಣಸಿ ಅವರು ಮಾತನಾಡುತ್ತಾ, ಕನ್ನಡ ಸಾಹಿತ್ಯ ಪರಿಷತ್ತು, ಭಾಷೆ, ನೆಲ, ಜಲಕ್ಕಾಗಿ ತಮ್ಮದೇ ಆದಂತಹ ಸೇವೆಯನ್ನು ಮಾಡುತ್ತಾ, ಕನ್ನಡಿಗರ ಪ್ರಾಥನಿಧಿಕ ಸಂಸ್ಥೆಯಾಗಿದೆ. ಕನ್ನಡ ಸಾಹಿತ್ಯ ಪರಿಷತ್ತು ಇಂದು ನಮ್ಮ ಕಾಲೇಜಿಗೆ ಬಂದು ಇಂತಹ ಉಪನ್ಯಾಸ ಕಾರ್ಯಕ್ರಮಗಳು ಮಾಡುವುದರ ಮೂಲಕ ಮಕ್ಕಳಲ್ಲಿ ಚಿಂತನೆಗಳನ್ನು ತುಂಬುವ ಕಾರ್ಯವನ್ನು ಮಾಡುತ್ತಿರುವುದು ತುಂಬಾ ಶ್ಲಾಘನೀಯ ಕಾರ್ಯ ಎಂದು ಹೇಳಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಯಚೂರಿನ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ವೆಂಕಟೇಶ್ ಬೇವಿನ ಬೆಂಚಿಯವರು ವಹಿಸಿ ಮಾತನಾಡುತ್ತಾ, ಜನಸೇವೆ ಜನಾರ್ಧನ ಸೇವೆ, ಪರೋಪಕಾರಂ ಇದಂ ಶರೀರಂ ಎನ್ನುವ ಹಾಗೆ ಇಂದಿನ ಯುವಕರು ಸೇವಾ ಗುಣವನ್ನು ಹೊಂದಬೇಕು. ಸೇವೆಯಿಂದ ದೇಶ, ಸಮಾಜ, ಅಭಿವೃದ್ಧಿಯಾಗುತ್ತದೆ. ನಿಷ್ಕಲ್ಮಶ ಸಮಾಜವನ್ನು ಕಟ್ಟಬಹುದು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಕಸಾಪ ತಾ. ಸಂಘಟನಾ ಕಾರ್ಯದರ್ಶಿಗಳಾದ ರೇಖಾ ಬಡಿಗೇರ, ಕಸಾಪ ಕಾರ್ಯಕಾರಿ ಸದಸ್ಯರಾದ ಯಲ್ಲಪ್ಪ ಎಂ. ಮರ್ಚೇಡ್, ಸೇರಿದಂತೆ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಇದ್ದರು.