ಉತ್ತಮ ಆರೋಗ್ಯ ಅಭಿವೃದ್ಧಿಗೆ ರಹದಾರಿ

ಬ್ಯಾಡಗಿ,ಮೇ27: ಉತ್ತಮ ಆರೋಗ್ಯ ಅಭಿವೃದ್ಧಿಗೆ ರಹದಾರಿಯಾಗಿದೆ. ಆರೋಗ್ಯವೇ ಭಾಗ್ಯ ಎಂಬ ತತ್ವದಡಿಯಲ್ಲಿ ಪ್ರತಿಯೊಬ್ಬರಿಗೂ ಉತ್ತಮ ಆರೋಗ್ಯದ ಚಿಕಿತ್ಸೆ ಒದಗಿಸುವುದು ಶಿಬಿರದ ಉದ್ದೇಶವಾಗಿದೆ ಎಂದು ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಪ್ರಮೀಳಾ ಜೋಗುಳ ಹೇಳಿದರು.
ತಾಲೂಕಿನ ಕಾಗಿನೆಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತುಮರ್ಶಿಕಟ್ಟೆಯ ಕಾಮಗಾರಿಯ ಸ್ಥಳದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಡಿ ತಾಲೂಕಾ ಪಂಚಾಯತ ಹಾಗೂ ಗ್ರಾಮ ಪಂಚಾಯಿತಿ ಸಹಭಾಗಿತ್ವದಲ್ಲಿ ಆರೋಗ್ಯ ಅಮೃತ ಅಭಿಯಾನದಡಿ ನರೇಗಾ ಕೂಲಿ ಕಾರ್ಮಿಕರಿಗೆ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಗ್ರಾಮಾಂತರ ಪ್ರದೇಶಗಳಲ್ಲಿ ವಾಸಿಸುವ ಜನರ ಆರೋಗ್ಯದ ಹಿತದೃಷ್ಟಿಯಿಂದ ಸರ್ಕಾರ ಆರೋಗ್ಯ ಅಮೃತ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು, ಪ್ರತಿಯೊಬ್ಬರೂ ಕಾಲಕಾಲಕ್ಕೆ ಸರಿಯಾಗಿ ಆರೋಗ್ಯದ ತಪಾಸಣೆ ಮಾಡಿಕೊಂಡು ತಮ್ಮ ಆರೋಗ್ಯವನ್ನು ಸದೃಢವಾಗಿ ಕಾಪಾಡಿಕೊಳ್ಳಲು ಮುಂದಾಗಬೇಕೆಂದು ಕರೆ ನೀಡಿದರು.
ಗ್ರಾಪಂ ಅಭಿವೃಧ್ದಿ ಅಧಿಕಾರಿ ವಿಶ್ವನಾಥ ಕಟ್ಟೆಗೌಡರ ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆಯಡಿ ಕಾರ್ಯನಿರ್ವಹಿಸುವ ಕೂಲಿ ಕಾರ್ಮಿಕರ ಆರೋಗ್ಯದ ಹಿತದೃಷ್ಟಿಯಿಂದ ಜಿಲ್ಲೆಯ ಎಲ್ಲಾ ನರೇಗಾ ಕೂಲಿ ಕಾರ್ಮಿಕರಿಗೆ ಉಚಿತವಾಗಿ ಆರೋಗ್ಯ ತಪಾಸಣೆಯನ್ನು ಕೈಗೊಂಡಿದೆ. ಇಂದಿನ ಆರೋಗ್ಯ ಶಿಬಿರದಲ್ಲಿ ಪ್ರಮುಖವಾಗಿ, ರಕ್ತ ಪರೀಕ್ಷೆ ಕೈಗೊಂಡು ಮಧುಮೇಹ, ರಕ್ತದೊತ್ತಡ, ಟಿಬಿ, ಕಣ್ಣಿನ ಪರೀಕ್ಷೆ, ಹೃದಯ ಸಂಬಂಧಿಸಿದಂತೆ ಆರೋಗ್ಯ ಶಿಬಿರದಲ್ಲಿ ತಪಾಸಣೆ ಕೈಗೊಳ್ಳಲಾಗಿದೆ ಎಂದರು
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ಮುನಾಜಿಲ್ ಮತ್ತಿಹಳ್ಳಿ, ರಹ್ಮತುಲ್ಲಾ ಹಾವೇರಿ, ಗುಲಾಬಶಾ ಬಾವಖಾನೆ, ಕಾರ್ಯದರ್ಶಿ ಯಲ್ಲಪ್ಪ ಹರಿಜನ, ತಾಲೂಕು ಐಇಸಿ ಸಂಯೋಜಕ ಶಾನವಾಜ್ ಚಿಣಗಿ, ಆರೋಗ್ಯ ಸಹಾಯಕಿ ಶಕೀಲಾ, ಗ್ರಾಮ ಪಂಚಾಯಿತಿ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ವರ್ಗದವರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.