ಉತ್ತಮ ಆರೋಗ್ಯದಿಂದ ಜೀವನದಲ್ಲಿ ಉತ್ತಮ ರೀತಿಯ ಬೆಳವಣಿಗೆ ಸಾಧ್ಯ

ಸಂಜೆವಾಣಿ ನ್ಯೂಸ್
ಮೈಸೂರು: ಸೆ.14:- ನಮ್ಮ ಆರೋಗ್ಯವನ್ನು ಉತ್ತಮವಾಗಿ ಕಾಯ್ದುಕೊಂಡರೆ ಮಾತ್ರ ಜೀವನದಲ್ಲಿ ಉತ್ತಮ ರೀತಿಯ ಬೆಳವಣಿಗೆ ಕಾಣಲು ಸಾಧ್ಯ ಎಂದು ಅಪರ ಜಿಲ್ಲಾಧಿಕಾರಿಗಳಾದ ಪಿ ಶಿವರಾಜ್ ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಜಿಲ್ಲಾ ಸರ್ವೇಕ್ಷಣಾ ಇಲಾಖೆ ವತಿಯಿಂದ ಬನ್ನಿಮಂಟಪದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಅಯುಷ್ಮಾನ್ ಭವ 3.0 ಆಪ್ಕೆ ದ್ವಾರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜನರು ಸರ್ಕಾರದ ಯೋಜನೆಗಳ ಉದ್ದೇಶಗಳನ್ನು ಅರಿತು ಅದರ ಸದುಪಯೋಗವನ್ನು ಪಡೆದುಕೊಳ್ಳಬೇಕು. ಶಿಕ್ಷಣ, ಬಡತನ ನಿರ್ಮೂಲನೆ, ಆರೋಗ್ಯ ಈ ಮೂರು ವಿಚಾರಗಳು ನಮ್ಮ ಜೀವನದ ಮುಖ್ಯ ಘಟ್ಟಗಳು. ಯಾರು ಸಹ ಆರೋಗ್ಯದ ವಿಚಾರದಲ್ಲಿ ಕಡೆಗಣಿಸಬಾರದು ಎಂದು ಕಿವಿಮಾತು ಹೇಳಿದರು.
ಮೈಸೂರು ಮಹಾನಗರ ಪಾಲಿಕೆ ಆಯುಕ್ತರಾದ ಆಶಾದ್ ಉರ್ ರೆಹಮಾನ್ ಶರೀಫ್ ಅವರು ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ವಿವಿಧ ರೀತಿಯ ಯೋಜನೆಗಳು ರೂಪುಗೊಂಡಿವೆ. ಆದರೆ ಸಾರ್ವಜನಿಕರಿಗೆ ಯೋಜನೆಗಳು ದೊರೆಯುತ್ತಿಲ್ಲ. ಏಕೆಂದರೆ ನಗರ ಮತ್ತು ಗ್ರಾಮೀಣ ವಿಭಾಗಗದಲ್ಲಿ ಆರೋಗ್ಯ ಕೇಂದ್ರಗಳ ಕೊರತೆ ಮತ್ತು ಸರ್ಕಾರಿ ಆರೋಗ್ಯ ಕೇಂದ್ರಗಳ ಮೇಲೆ ಸಾರ್ವಜನಿಕರಲ್ಲಿ ಇರುವ ಕೆಲವು ತಪ್ಪು ಭಾವನೆಗಳಿಂದ ಸರ್ಕಾರಿ ಆಸ್ಪತ್ರೆಗಳಿಗೆ ಜನರು ಬರುವುದಿಲ್ಲ. ಜಿಲ್ಲಾಡಳಿತ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಉತ್ತಮ ಸೇವೆಯನ್ನು ಒದಗಿಸಲಾಗುತ್ತಿದೆ. ಜನರು ಯಾವುದೇ ರೀತಿ ಅಂಜಿಕೆ ಪಡದೇ ಸರ್ಕಾರಿ ಆಸ್ಪತ್ರೆಗಳಲ್ಲಿ ಆರೋಗ್ಯ ಸೇವೆಯನ್ನು ಪಡೆದುಕೊಳ್ಳಿ ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ.ಪಿ.ಸಿ ಕುಮಾರಸ್ವಾಮಿ ಅವರು ಮಾತನಾಡಿ, ಜಿಲ್ಲಾಡಳಿತ ಮತ್ತು ನಮ್ಮ ಇಲಾಖೆ ವತಿಯಿಂದ ಜಿಲ್ಲೆಯಲ್ಲಿ ವಿವಿಧ ರೀತಿಯ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಉತ್ತಮ ಆರೋಗ್ಯ ಸೇವೆಗಳನ್ನು ನಮ್ಮ ಜಿಲ್ಲೆಯಲ್ಲಿ ನೀಡಲಾಗುತ್ತಿದೆ. ರಾಷ್ಟ್ರೀಯ ಹಂತದ ವಿವಿಧ ಕಾರ್ಯಕ್ರಮಗಳನ್ನು ಕೂಡ ನಮ್ಮ ಇಲಾಖೆ ವತಿಯಿಂದ ಜಿಲ್ಲಾಮಟ್ಟದಲ್ಲಿ ನಡೆಸಿಲಾಗುತ್ತಿದೆ ಎಂದು ತಿಳಿಸಿದರು.
ಗರ್ಭಿಣಿಯರಿಗೆ ವಿವಿಧ ರೀತಿಯ ಸೌಲಭ್ಯಗಳನ್ನು ನಿಡಲಾಗುತ್ತಿದೆ. ಮಕ್ಕಳಿಗೆ 10 ವಿವಿಧ ರೀತಿಯ ಲಸಿಕೆಗಳನ್ನು ನೀಡಿ ಆರೋಗ್ಯ ಸೇವೆಯನ್ನು ಒದಗಿಸುತ್ತಾ ಬಂದಿದ್ದೇವೆ.
ಆಯುಷ್ಮಾನ್ ಭವ ಕಾರ್ಯಕ್ರಮದಡಿ ಸೆ. 17 ರಿಂದ ಡಿಸೆಂಬರ್ ಕೊನೆಯವರೆಗೂ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಬೆಂಗಳೂರಿನoತಹ ನಗರಗಳಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಳವಾಗುತ್ತಿವೆ. ಇದರ ಕುರಿತು ನಮ್ಮ ಇಲಾಖೆ ವತಿಯಿಂದ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸರ್ವೆಕ್ಷಣಾಧಿಕಾರಿಗಳಾದ ಡಾ. ಮಹದೇವ ಪ್ರಸಾದ್, ಮಹಾನಗರ ಪಾಲಿಕೆ ಸದಸ್ಯರಾದ ರೇಷ್ಮ ಭಾನು, ಆರ್.ಸಿ.ಹೆಚ್ ಅಧಿಕಾರಿಗಳಾದ ಡಾ. ಜಯಂತ್, ಮಹಾನಗರ ಪಾಲಿಕೆ ಆರೋಗ್ಯಧಿಕಾರಿಗಳಾದ ಡಾ. ಹರ್ಷ, ಡಾ.ಚಿದಂಬರ್, ಡಾ. ಗೋಪಿನಾಥ್, ಕುಷ್ಟರೋಗ ನಿರ್ಮಾಲನಾಧಿಕಾರಿಗಳಾದ ಬೃಂದಾ, ಬನ್ನಿಮಂಟಪ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಾದ ಡಾ. ಲೋಕೇಶ್ ಮತ್ತು ಅರೋಗ್ಯ ಇಲಾಖೆ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.