ಉತ್ತಮ ಆರೋಗ್ಯಕ್ಕಾಗಿ ಸಂಗೀತ ಒಳ್ಳೆಯದು: ಶಾಸಕ ಎಂ.ವೈ. ಪಾಟೀಲ್

ಕಲಬುರಗಿ,ಜೂ.24: ಉತ್ತಮ ಆರೋಗ್ಯಕ್ಕಾಗಿ ಸಂಗೀತ ಒಳ್ಳೆಯದು ಎಂದು ಅಫಜಲಪುರ ಕ್ಷೇತ್ರದ ಹಿರಿಯ ಶಾಸಕ ಎಂ.ವೈ. ಪಾಟೀಲ್ ಅವರು ಹೇಳಿದರು.
ನಗರದ ಕನ್ನಡ ಭವನದಲ್ಲಿನ ಸುವರ್ಣ ಸಭಾ ಭವನದಲ್ಲಿ ಶನಿವಾರದಂದು ಕರ್ನಾಟಕ ಕಲಾ ಸಾಹಿತ್ಯ ಸಂಸ್ಕøತಿ ಸೇವಾ ಸಂಸ್ಥೆ ಪಂಡಿತ್ ಪಂಚಾಕ್ಷರ ಗವಾಯಿಗಳವರ 79ನೇ ಹಾಗೂ ಪದ್ಮಭೂಷಣ ಡಾ. ಪಂ. ಪುಟ್ಟರಾಜ್ ಕವಿ ಗವಾಯಿಗಳವರ 13ನೇ ಪುಣ್ಯಸ್ಮರಣೆ ನಿಮಿತ್ಯ ಹಮ್ಮಿಕೊಂಡ ಸಂಗೀತ ಸಮಾರಾಧಾನೆ, ರಾಜ್ಯ ಮಟ್ಟದ ಕರ್ನಾಟಕ ಚೇತನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಜ್ಯೋತಿ ಬೆಳಗಿಸಿ, ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು, ಸಂಗೀತ ಆಲಿಸುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಸದೃಢ ಆರೋಗ್ಯಕ್ಕೂ ಸಹ ಒಳ್ಳೆಯದಾಗುತ್ತದೆ ಎಂದರು.
ಸಂಗೀತ ಕ್ಷೇತ್ರದಲ್ಲಿ ಪಂಡಿತ್ ಪಂಚಾಕ್ಷರ ಗವಾಯಿಗಳವರು ಮತ್ತು ಡಾ. ಪಂ. ಪುಟ್ಟರಾಜ್ ಕವಿ ಗವಾಯಿಗಳು ಅದ್ಭುತ ಸಾಧನೆಗಳನ್ನು ಮಾಡಿದ್ದಾರೆ. ಅದೇ ರೀತಿ ಅನೇಕ ಸಂಗೀತಗಾರರೂ ಸಹ ಸಾಕಷ್ಟು ಸೇವೆಯನ್ನು ಸಲ್ಲಿಸಿದ್ದಾರೆ. ಇಂತಹ ಕಾರ್ಯಕ್ರಮಗಳು ಹೆಚ್ಚಿನ ರೀತಿಯಲ್ಲಿ ಜರುಗಬೇಕು. ಅಂದಾಗ ಸಮಾಜದಲ್ಲಿ ಸ್ವಾಸ್ಥ್ಯ ಹಾಗೂ ಮಾನಸಿಕ ಹಾಗೂ ದೈಹಿಕ ಸದೃಢತೆ ನಿರ್ಮಾಣಗೊಳ್ಳಲಿದೆ ಎಂದು ಅವರು ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಜಯಕುಮಾರ್ ಪಾಟೀಲ್ ತೇಗಲತಿಪ್ಪಿ ಅವರು ಮಾತನಾಡಿ, ಸಂಗೀತ ಕ್ಷೇತ್ರಕ್ಕೆ ಅನೇಕ ಕಲಾವಿದರು ಸಾಕಷ್ಟು ಕೊಡುಗೆಯನ್ನು ನೀಡಿದ್ದಾರೆ. ಅವರಿಂದಾಗಿಯೇ ಸಂಗೀತ ಕ್ಷೇತ್ರ ಶ್ರೀಮಂತಿಕೆಯನ್ನು ಹೊಂದಿದೆ. ಬಾಬುರಾವ್ ಕೋಬಾಳ್ ಅವರು ರಾಜ್ಯ ಪ್ರಶಸ್ತಿ ಪುರಸ್ಕøತರಾಗಿ ಸಂಗೀತ ಕ್ಷೇತ್ರದಲ್ಲಿ ಅನೇಕ ಕಾರ್ಯಕ್ರಮಗಳ ಮೂಲಕ ಒಳ್ಳೆಯ ಕೆಲಸವನ್ನು ಮಾಡುತ್ತಿದ್ದಾರೆ. ಜುಲೈ ತಿಂಗಳಲ್ಲಿ ಪರಿಷತ್ ಸಂಗೀತ- ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲಿದೆ ಎಂದರು.
ಕಾಂಗ್ರೆಸ್ ಮುಖಂಡ ನೀಲಕಂಠರಾವ್ ಮೂಲಗೆ, ಬಿಜೆಪಿ ಮುಖಂಡ ಶಿವಕಾಂತ್ ಮಹಾಜನ್ ಅವರು ಮಾತನಾಡಿ, ರಾಜ್ಯ ಪ್ರಶಸ್ತಿ ಪುರಸ್ಕøತ ಕಲಾವಿದ ಬಾಬುರಾವ್ ಕೋಬಾಳ್ ಅವರು ಸಂಗೀತ ಕ್ಷೇತ್ರಕ್ಕೆ ಸಲ್ಲಿಸುತ್ತಿರುವ ಕೊಡುಗೆಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆ ವಲಯ ಜಂಟಿ ನಿರ್ದೇಶಕ ಕೆ.ಎಚ್. ಎನ್ನೂರ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಗೀತ ಮತ್ತು ಸಾಹಿತ್ಯಕ್ಕೆ ಜಾನಪದವೇ ಮೂಲವಾಗಿದೆ. ಬಾಯಿಯಿಂದ ಬಾಯಿಗೆ ಹರಡುವ ಮಾತುಗಳೇ ಸಾಹಿತ್ಯ ಹಾಗೂ ಸಂಗೀತಕ್ಕೆ ಪ್ರೇರಣೆಯಾಗಿದೆ. ತೊಂಡಿ ಸಂಪ್ರದಾಯದಿಂದ ಸಂಗೀತ, ಸಾಹಿತ್ಯ ಹುಟ್ಟಿಕೊಂಡಿದೆ. ಇಂತಹ ಕಾರ್ಯಕ್ರಮಗಳಿಗೆ ಇಲಾಖೆ ಸೂಕ್ತ ಸಹಕಾರ ನೀಡಲಿದೆ ಎಂದು ತಿಳಿಸಿದರು.
ಹಿರಿಯ ಕಾಂಗ್ರೆಸ್ ಮುಖಂಡ ಶಿವಶರಣಪ್ಪ ಕೋಬಾಳ್ ಅವರು ಮಾತನಾಡಿ, ಸಹೋದರ ಬಾಬುರಾವ್ ಕೋಬಾಳ್ ಅವರು ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ರಾಜ್ಯ ಪ್ರಶಸ್ತಿಯನ್ನು ಪಡೆದರು. ಹಲವರು ಸಣ್ಣ ವಯಸ್ಸಿನಲ್ಲಿ ಪ್ರಶಸ್ತಿ ಕೊಟ್ಟಿದ್ದಕ್ಕಾಗಿ ಟೀಕಿಸಿದರು. ಆದಾಗ್ಯೂ, ಇಲ್ಲಿನ ಪತ್ರಿಕೆಗಳು ಸಹೋದರನ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇದಕ್ಕೆಲ್ಲ ನನಗೆ ಆತ್ಮೀಯರಾಗಿದ್ದ ಮಾಜಿ ಮುಖ್ಯಮಂತ್ರಿ ದಿ. ಧರ್ಮಸಿಂಗ್ ಅವರು ಕಾರಣರು ಎಂದು ತಿಳಿಸಿದರು.
ನಾನೂ ಸಹ ಸಂಗೀತ ಕಲಾವಿದ. ನನ್ನ ಕುರಿತು ಸ್ವತ: ಧರ್ಮಸಿಂಗ್ ಅವರೇ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು. ರಾಜ್ಯ ಪ್ರಶಸ್ತಿಗೆ ನನ್ನ ಹೆಸರನ್ನು ಆಯ್ಕೆ ಮಾಡಲು ನಿರ್ಧರಿಸಿದ್ದರು. ಸಂಗೀತ ಕ್ಷೇತ್ರದಲ್ಲಿ ಒಳ್ಳೆಯ ಹೆಸರು ಮಾಡುತ್ತಿದ್ದ ನನ್ನ ಸಹೋದರ ಬಾಬುರಾವ್ ಕೋಬಾಳ್ ಅವರ ಕುರಿತು ಹೇಳಿದೆ. ಹೀಗಾಗಿ ನನ್ನ ಸಹೋದರನಿಗೆ ರಾಜ್ಯ ಪ್ರಶಸ್ತಿ ದೊರಕಿದೆ. ಅದೇ ರೀತಿ ಸಂಗೀತ ಕ್ಷೇತ್ರದಲ್ಲಿ ನಿರಂತರವಾಗಿ ಒಂದಿಲ್ಲೊಂದು ಕಾರ್ಯಕ್ರಮಗಳನ್ನು ಸಹೋದರ ಹಮ್ಮಿಕೊಂಡು ಬಂದಿದ್ದಾರೆ ಎಂದು ಅವರು ಹೇಳಿದರು. ವೇದಿಕೆಯ ಮೇಲೆ ಪ್ರವೀಣ್ ವಿದ್ಯಾ ಸಂಸ್ಥೆಯ ಅಧ್ಯಕ್ಷ ನಾಗರಾಜ್ ಕಾಂಬಳೆ, ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಅವರ ಅನುಪಸ್ಥಿತಿಯಲ್ಲಿ ಅವರ ಪುತ್ರ ಶರಣಗೌಡ ಪಾಟೀಲ್ ಅವರು ಉಪಸ್ಥಿತರಿದ್ದರು. ವಿಶ್ವನಾಥ್ ತೋಟ್ನಳ್ಳಿ ಅವರು ಕಾರ್ಯಕ್ರಮ ನಿರೂಪಿಸಿದರು.
ಇದೇ ಸಂದರ್ಭದಲ್ಲಿ ಹಿರಿಯ ಪತ್ರಕರ್ತರವಾದ ಬಾಬುರಾವ್ ಯಡ್ರಾಮಿ, ಸಂಗಮನಾಥ್ ರೇವತಗಾಂವ್, ಡಾ. ಶಿವರಂಜನ್ ಸತ್ಯಂಪೇಟೆ, ಸತೀಶ್ ಜೇವರ್ಗಿ, ಬಸವರಾಜ್ ಅ. ಚಿನಿವಾರ್, ಸೂರ್ಯಕಾಂತ್ ಜಮಾದಾರ್, ರಾಜು ದೇಶಮುಖ್, ಮಹೇಶ್ ಕುಲಕರ್ಣಿ, ಶರಣಬಸಪ್ಪ ಜಿಡಗಾ, ಗುರುಬಸಪ್ಪಾ ಸಜ್ಜನಶೆಟ್ಟಿ, ಬೌದ್ಧಪ್ರಿಯ ನಾಗಸೇನ್, ಮಹೇಶ್ ದಿವಾಕರ್, ಗುಂಡೂರಾವ್ ಅಫಜಪುರ, ಚಂದ್ರಶೇಖರ್ ಕೌಲಗಾ, ಅಕ್ರಮ್ ಆಶಾ, ಶಿಕ್ಷಣ ಕ್ಷೇತ್ರದಲ್ಲಿನ ಕಲ್ಯಾಣರಾವ್ ಶೀಲವಂತ್, ಮಲ್ಲಯ್ಯ ಗುತ್ತೇದಾರ್, ಡಾ. ಶರಣಪ್ಪ ಎಸ್. ಮಾಳಗಿ, ದತ್ತಾತ್ರೇಯ್ ವಿಶ್ವಕರ್ಮ, ಬಸಯ್ಯಸ್ವಾಮಿ ಗದ್ದಗಿಮಠ್, ರವಿ ಹೊಸಮನಿ, ರಾಜಶೇಖರ್ ತಲಾರಿ, ಸಿಸ್ಟರ್ ಲಿನೆಟ್ ಸಿಕ್ವೆರಾ, ಡಾ. ಕಾಶಮ್ಮ ವೈ. ಕೋಬಾಳ್, ಇಂಜಿನಿಯರಿಂಗ್, ಸಾಮಾಜಿಕ ಕ್ಷೇತ್ರದಿಂದ ಮುರುಳೀಧರ್ ಜಿ. ಕರಲಗಿಕರ್, ಕೃಷಿ ಕ್ಷೇತ್ರದಿಂದ ಮಲ್ಲಿಕಾರ್ಜುನ್ ಧೂಳಬಾ, ಸಮಾಜ ಸೇವೆಗಾಗಿ ಸಿದ್ದಣಗೌಡ ಎಸ್. ಪಾಟೀಲ್, ಡಾ. ರವಿ ಚವ್ಹಾಣ್, ಲಚ್ಚಪ್ಪ ಜಮಾದಾರ್, ಡಾ. ವಿಶಾಲಾಕ್ಷಿ ವಿ. ಕರೆಡ್ಡಿ, ಆಡಳಿತ ಸೇವಾ ಕ್ಷೇತ್ರದಲ್ಲಿ ಬಿ. ಸತೀಶಕುಮಾರ್, ದೇವಿಂದ್ರ ಯಡ್ರಾಮಿ, ಸೌಭಾಗ್ಯ ನೆಲೋಗಿ, ರಂಗಭೂಮಿಯಿಂದ ಶಾಂತಲಿಂಗಯ್ಯ ಮಠಪತಿ, ಸಂಗೀತ ಕ್ಷೇತ್ರದಲ್ಲಿನ ವಿಶ್ವನಾಥ್ ಶಾಸ್ತ್ರೀ, ಪ್ರೊ. ಮಹೇಶಕುಮಾರ್ ಬಡಿಗೇರ್, ದತ್ತರಾಜ್ ಕಲಶೆಟ್ಟಿ, ಶರಣಬಸವ ಬಮ್ಮಣ್ಣಿ, ಸೂರ್ಯಕಾಂತ್ ಡುಮ್ಮಾ, ಜ್ಞಾನೇಶ್ವರ್ ಬೆಳಕೋಟಾ, ಮಹಾಂತಯ್ಯ ಮಂಠಾಳ್, ಪರಶುರಾಮ್ ಗರೂರ್, ತೇಜು ನಾಗೋಜಿ, ಶ್ರೀಶೈಲ್ ಕೊಂಡೇದ್, ನಾಗಲಿಂಗಯ್ಯ ಸ್ಥಾವರಮಠ್, ಕವಿರಾಜ್ ಪಾಟೀಲ್, ಶರಣಕುಮಾರ್ ದೇಸಾಯಿ ಕಲ್ಲೂರ್, ಸಿದ್ದಾರ್ಥ ಚಿಮ್ಮಾಯಿದ್ಲಾಯಿ, ಪತ್ರಿಕಾ ಛಾಯಾಗ್ರಾಹಕ ಅರುಣ್ ಕುಲಕರ್ಣಿ ಅವರಿಗೆ ಕರ್ನಾಟಕ ಚೇತನ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಂತರ ಶ್ರೀ ಶರಣಬಸವೇಶ್ವರ್ ಕಲಾ ಬಳಗ ಹಾಗೂ ನಾಡಿನ ಹೆಸರಾಂತ ಆಕಾಶವಾಣಿ ಕಲಾವಿದರಿಂದ ಸಂಗೀತ ಕಾರ್ಯಕ್ರಮ ಜರುಗಿತು.
ವಿಶ್ವನಾಥ್ ತೋಟ್ನಳ್ಳಿ ಅವರು ಸ್ವಾಗತಿಸಿದರು. ನಾಗಲಿಂಗಯ್ಯ ಸ್ಥಾವರಮಠ್ ಅವರು ಕಾರ್ಯಕ್ರಮ ನಿರೂಪಿಸಿದರು. ಜಗದೀಶ್ ನಗನೂರ್ ಅವರು ಪ್ರಾರ್ಥನಾಗೀತೆ ಹಾಡಿದರು. ಸಿದ್ರಾಮಪ್ಪ ಆಲಗೂಡಕರ್, ಸಿದ್ದಣ್ಣ ದೇಸಾಯಿ ಕಲ್ಲೂರ್, ಶ್ರೀಮತಿ ನಾಗಮ್ಮ ಬಾಬುರಾವ್ ಕೋಬಾಳ್ ಮುಂತಾದವರು ಪಾಲ್ಗೊಂಡಿದ್ದರು.