ಉತ್ತಮ ಆರೋಗ್ಯಕ್ಕಾಗಿ ಯೋಗ ಅಗತ್ಯ

ಬ್ಯಾಡಗಿ,ಜೂ23: ಮನಸ್ಸಿಗೆ ಶಾಂತಿ, ನೆಮ್ಮದಿಯ ಜೊತೆಗೆ ದೇಹದ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರತಿದಿನವೂ ಯೋಗವನ್ನು ಮಾಡಬೇಕೆಂದು ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಹೇಳಿದರು.
ಪಟ್ಟಣದ ತಾಲೂಕಾ ಕ್ರೀಡಾಂಗಣದಲ್ಲಿ ಯೋಗ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಾಚೀನ ಕಾಲದಲ್ಲಿ ಋಷಿಮುನಿಗಳಿಗೆ ಮಾತ್ರ ಮೀಸಲಿದ್ದ ಯೋಗವು ತನ್ನ ಪ್ರಭಾವದಿಂದಾಗಿ ಇಂದು ವಿಶ್ವದಾದ್ಯಂತ ಪಸರಿಸಿಕೊಂಡು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಾಗಿ ಮಾರ್ಪಟ್ಟಿದೆ. ಯೋಗದ ನಿತ್ಯಾಭ್ಯಾಸದಿಂದ ಆರೋಗ್ಯದಲ್ಲಿ ಸುಧಾರಣೆ ಹಾಗೂ ಮಾನಸಿಕ ಬಲವರ್ಧನೆಯಾಗುತ್ತದೆ. ಇಂದಿನ ದಿನಗಳಲ್ಲಿ ಪ್ರತಿಯೊಬ್ಬರಲ್ಲೂ ದೈಹಿಕ ಶ್ರಮ ಕಡಿಮೆಯಾಗುತ್ತಿರುವ ಕಾರಣ ಅನೇಕ ರೋಗಗಳಿಗೆ ಒಳಗಾಗುವ ಸಾಧ್ಯತೆ ಹೆಚ್ಚಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಹಿತದೃಷ್ಟಿಯಿಂದ ಯೋಗಭ್ಯಾಸವನ್ನು ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಪುರಸಭಾಧ್ಯಕ್ಷೆ ಸರೋಜಾ ಉಳ್ಳಾಗಡ್ಡಿ, ಉಪಾಧ್ಯಕ್ಷೆ ಗಾಯತ್ರಿ ರಾಯ್ಕರ್, ಸದಸ್ಯರಾದ ಕವಿತಾ ಸೊಪ್ಪಿನಮಠ, ವಿನಯಕುಮಾರ ಹಿರೇಮಠ, ರಾಮಣ್ಣ ಕೋಡಿಹಳ್ಳಿ, ಮುರಿಗೆಪ್ಪ ಶೆಟ್ಟರ, ಕಸಾಪ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ, ತಹಶೀಲ್ದಾರ ತಿಪ್ಪೆಸ್ವಾಮಿ ಹೊಯ್ಸರ್, ತಾಪಂ ಇಒ ಎನ್.ತಿಮ್ಮಾರಡ್ಡಿ, ಮುಖ್ಯಾಧಿಕಾರಿ ಏಸು ಬೆಂಗಳೂರ, ಪಿಇಒ ಮಹ್ಮದಹುಸೇನ, ಎಸ್.ಎನ್.ಯಮನಕ್ಕನವರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಬಿ.ಎಫ್.ದೊಡ್ಡಮನಿ ಕಾರ್ಯಕ್ರಮ ನಿರೂಪಿಸಿದರು, ಬಿ.ಎಂ.ಜಗಾಪೂರ ಸ್ವಾಗತಿಸಿದರು. ಎಸ್.ಯು.ಮಾಸ್ತಿ ವಂದಿಸಿದರು.