ಉತ್ತಮವಾದ ಭವಿಷ್ಯ ನಿರ್ಮಾಣಕ್ಕೆ ಮುಕ್ತ ವಿಶ್ವವಿದ್ಯಾಲಯ ಪ್ರಮುಖ ಪಾತ್ರ ವಹಿಸುತ್ತದೆ: ಸುರೇಶ ಡಬ್ಬಿ

(ಸಂಜೆವಾಣಿ ವಾರ್ತೆ)
ವಿಜಯಪುರ: ಆ.13:ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರವನ್ನು ವಿಜಯಪುರದಲ್ಲಿ ಪ್ರಚಾರ ವಾಹನವನ್ನು ಉದ್ಘಾಟಿಸಿದ ಪ್ರಾಚಾರ್ಯರಾದ ಸುರೇಶ ಡಬ್ಬಿ ರವರು ಮಾತನಾಡಿಕ, ವಿಶ್ವವಿದ್ಯಾಲಯವು ಕಲಿಕೆಯಿಂದ ದೂರ ಉಳಿದ ಮಕ್ಕಳಿಗೆ ಮುಕ್ತ ವಿಶ್ವವಿದ್ಯಾಲಯ ಮಾದರಿ ಕೇಂದ್ರವಾಗಿದೆ. ಕಾರಣ ಇದರ ಸದುಪಯೋಗವನ್ನು ಎಲ್ಲ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಪಡೆದುಕೊಳ್ಳಬೇಕು ಹಾಗೂ ಉತ್ತಮವಾದ ಭವಿಷ್ಯ ನಿರ್ಮಾಣಕ್ಕೆ ಮುಕ್ತ ವಿಶ್ವವಿದ್ಯಾಲಯ ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.
ಅಧ್ಯಯನ ಕೇಂದ್ರದ ಶರಣು ಸಬರದ ಮಾತನಾಡಿ ಜಿಲ್ಲೆಯಲ್ಲಿ ಸಾಕಷ್ಟು ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಪ್ರಾಪಂಚಿಕ ಅಡಚಣೆಯಿಂದ ಸ್ನಾತಕ ಮತ್ತು ಸ್ನಾತಕೋತ್ತರ ಪದವಿಯನ್ನು ಪಡೆಯದೇ ಖಾಸಗಿ ವಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆದು ಶೈಕ್ಷಣಿಕವಾಗಿ ಮುಂದುವರೆಯುವುದರ ಮೂಲಕ ಉನ್ನತವಾದ ಭವಿಷ್ಯವನ್ನು ಕಟ್ಟಿಕೊಳ್ಳುವಲ್ಲಿ ಸಹಕಾರಿಯಾಗಲಿದೆ. ವಿಶೇಷವಾಗಿ ಸರಕಾರಿ ನೌಕರರಿಗೆ ಬಡ್ತಿ ಹೊಂದಲು ಈ ವಿಶ್ವವಿದ್ಯಾಲಯ ಸಹಕಾರಿಯಾಗುತ್ತದೆ ಮತ್ತು ರಾಜ್ಯ ಮಟ್ಟದಲ್ಲಿ ಹೆಸರು ಮಾಡಬೇಕಾದರೆ ಅಧ್ಯಯನ ಕೇಂಧ್ರಗಳ ಪಾತ್ರ ಮತ್ತು ಶ್ರಮ ಬಹಳ ಮುಖ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಪ್ರಾದೇಶಿಕ ಕೇಂದ್ರದ ನಿರ್ದೇಶಕರಾದ ಶ್ರೀಮತಿ ಮೈತ್ರಿ ಡಿ.ಎಸ್, ಪ್ರಚಾರ ಸಮಿತಿ ಸದಸ್ಯ ಸಿದ್ದೇಗೌಡ, ಸಂತೋಷ ವಾಲಿಕಾರ, ದಯಾನಂದ ಗಾಯಕವಾಡ, ವಿಲಾಸ ಚವ್ಹಾಣ, ಕಲ್ಯಾಣಕುಮಾರ ರಾಠೋಡ,ಈರಣ್ಣ ಬಡಿಗೇರ,ಸುಧೀರ ಅಂಬಿಗೇರ, ಸಂತೋಷ ಮರಗೂರ, ವಿನಾಯಕ ಬಿರಾದಾರ, ಆಕಾಶ ಸಬರದ, ಬಂದೇನವಾಜ ನದಾಫ, ಉಮೇಶ ಚವ್ಹಾಣ ಇನ್ನಿತರರು ಭಾಗವಹಿಸಿದ್ದರು.