
ವಿಜಯಪುರ:ಮಾ.10: ಉತ್ಕøಷ್ಟ ಸಮಾಜ ನಿರ್ಮಾಣದಲ್ಲಿ ಮಹಿಳೆಯ ಪಾತ್ರ ಹಿರಿದಾಗಿದ್ದು, ಪ್ರತಿಯೊಂದು ರಂಗದಲ್ಲಿ ತನ್ನದೇ ಆದ ಛಾಪು ಮೂಡಿಸುವ ಮೂಲಕ ಮಹಿಳೆ ಸಬಲೆಯಾಗಿದ್ದಾಳೆ ಎಂದು ಲೋಕಾಯುಕ್ತ ಎಸ್‍ಪಿ ಅನಿತಾ ಹದ್ದನವರ ಹೇಳಿದರು.
ನಗರದ ಸಂಗನಬಸವ ಸಮುದಾಯ ಭವನದಲ್ಲಿ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ಹಮ್ಮಿಕೊಂಡ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪುರುಷ ಪ್ರಧಾನ ಸಮಾಜದಲ್ಲಿ ಸ್ತ್ರೀ ತನ್ನದೆ ಸ್ವಂತ ಸಾಮಥ್ರ್ಯದಿಂದ ಅವಕಾಶಗಳನ್ನು ಗಿಟ್ಟಿಸಿಕೊಂಡು ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಪ್ರತಿಯೊಬ್ಬರು ಉತ್ತಮ ಶಿಕ್ಷಣವಂತರಾಗಬೇಕೆಂದು ಕರೆ ನೀಡಿದರು.
ಸಿದ್ದೇಶ್ವರ ಶ್ರೀಗಳ ಬಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ವಿಜಯಪುರ ಜಿಲ್ಲಾಧಿಕಾರಿಗಳ ಧರ್ಮಪತ್ನಿ ಡಾ. ಶ್ವೇತಾ ಮಹಾಂತೇಶ ದಾನಮ್ಮನವರ ಮಹಿಳೆ ಅಬಲೆಯಲ್ಲ ಸಬಲೆಯಾಗಿದ್ದಾಳೆ ಪ್ರತಿಯೊಂದು ಕ್ಷೇತ್ರದಲ್ಲಿ ಸಾಧನೆ ಮೂಲಕ ಮನೆ ಮಾತಾಗಿದ್ದಾಳೆ, ಸಮಾಜದ ಕಣ್ಣಾಗಿ ಪ್ರತಿಯೊಬ್ಬರ ಬಾಳಿನ ಬೆಳಕಾಗಿದ್ದಾಳೆ, ತಾಯಿ, ಮಗಳು, ಸಹೋಧರಿ, ಹೆಂಡತಿ ಹೀಗೆ ಎಲ್ಲ ರಂಗದಲ್ಲೂ ಗಟ್ಟಿತನದಿಂದ ಪಾತ್ರ ನಿರ್ವಹಿಸಿ ಕುಟುಂಬದ ಜೊತೆ ಸಮಾಜವನ್ನು ಸರಿದಾರಿಗೆ ತರುವಲ್ಲಿ ಶ್ರಮಿಸುತ್ತಿದ್ದಾಳೆ. ಸಾಧನೆಯ ಹಾದಿಯಲ್ಲಿ ಸದಾ ಮುಂದಿದ್ದು, ಪುರುಷರಿಗೇನು ಕಡಿಮೆಯಿಲ್ಲ ಎಂದು ಹೇಳುತ್ತ ಮಹಿಳೆಯ ಇಂದಿನ ವಿವಿಧ ಕ್ಷೇತ್ರಗಳ ಸಾಧನೆಗಳನ್ನು ಎಳೆಎಳೆಯಾಗಿ ಅಂಕಿ ಅಂಶಗಳ ಬಿಚ್ಚಿಟ್ಟು ಎಲ್ಲರ ಗಮನ ಸೆಳೆದರು.
ಸಾಧಕರಿಗೆ ಸನ್ಮಾನ ಮಾಡಿ ಮಾತನಾಡಿದ ಎಫ್‍ಎನ್ ಸಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ. ಸುನೀತಾ ಚವ್ಹಾಣ, ಸಮಾಜವನ್ನು ತಿದ್ದುವಲ್ಲಿ ಶಿಕ್ಷಕರ ಪಾತ್ರ ಹಿರಿದಾಗಿದ್ದು, ಉತ್ತಮ ಶಿಕ್ಷಣ ನೀಡಿ ಸದೃಢ ಸಮಾಜ ನಿರ್ಮಾಣ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದರು. ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಜಿಲ್ಲಾಧ್ಯಕ್ಷೆ ಎ ಬಿ ನಾಯಿಕ ಪ್ರಾಸ್ತಾವಿಕವಾಗಿ ಮಾತನಾಡಿ, ಇಡೀ ರಾಜ್ಯದಲ್ಲಿ ಮಾದರಿಯಾಗಿರುವ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಆಯೋಜಿಸಲಾಗಿದೆ. ಎಲ್ಲ ತಾಲೂಕುಗಳಲ್ಲೂ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ಕ್ರೀಯಾತ್ಮಕವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಮುಂಬರುವ ದಿನಗಳಲ್ಲಿ ಇನ್ನಷ್ಟು ಬದ್ಧತೆಯಿಂದ ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸಲಾಗುವುದು ಎಂದರು.
ಸಾನಿಧ್ಯ ವಹಿಸಿದ್ದ ಸೋಲಾಪೂರ ಸಿದ್ಧಾರೂಢರ ಮಠದ ಮಾತೋಶ್ರೀ ಸುಶಾಂತಾದೇವಿ ಆಶೀರ್ವಚನ ನೀಡಿದರು. ರಾಜ್ಯ ಸಂಘಟನಾ ಕಾರ್ಯದರ್ಶಿ ಜಯಶ್ರೀ ಬೆಣ್ಣಿ, ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸುರೇಶ ಶೆಡಶ್ಯಾಳ ಮಾತನಾಡಿದರು. ಇದೇ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ತಾಲೂಕಿನಿಂದ ಆಗಮಿಸಿದ ಸೇವಾ ಸಾಧಕಿಯರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು. ವೇದಿಕೆ ಮೇಲೆ ಜಿಓಸಿಸಿ ಬ್ಯಾಂಕಿನ ಅಧ್ಯಕ್ಷ ಹಣಮಂತ ಕೊಣದಿ, ಜುಬೇರ ಕೆರೂರ, ಜಗದೀಶ ಬೊಳಸೂರ, ಎಸ್ ಎಸ್ ಪಾಟೀಲ, ಶಿವರಾಜ ಬಿರಾದಾರ, ನೀಲಾ ಇಂಗಳೆ, ಕೋಲ್ಹಾರ ಮೇಡಮ್, ಗೀತಾ ಕುಲಕಣಿ, ಪುಷ್ಪಾ ಗಚ್ಚಿನಮಠ, ಬಿಇಓ ಆಂಜನೇಯ, ಕವಿತಾ ಕಲ್ಯಾಣಪ್ಪಗೋಳ, ಆರೀಫಾ ಮಿರ್ಜಾ, ಶೋಭಾ ಮೆಡಗಾರ, ಕಬೂಲ್ ಕೊಕಟನೂರ, ರೇವತಿ ಬೂದಿಹಾಳ, ಎಚ್ ಕೆ ಬೂದಿಹಾಳ, ಲಕ್ಷ್ಮೀ ತೊರವಿ, ಎಸ್ ಬಿ ಪಾಟೀಲ, ಕೆ ಸುನಂದಾ, ಕೆ ಎಚ್ ಹೂಗಾರ, ಶೈಲಶ್ರೀ ಯಡ್ರಾಮಿ, ಮಲ್ಲಮ್ಮ ಗಿರಣಿವಡ್ಡರ, ಎಸ್ ಬಿ ಹೂಗಾರ, ಅರ್ಪಿತಾ ಪತ್ತಾರ, ಜಯಶ್ರೀ ನಾಯಿಕ,ಎಂ ಜೆ ವಾಲಿ, ಬಿ ಎನ್ ಬಜಂತ್ರಿ, ಗಿರಿಜಾ ಸಜ್ಜನ, ಸುನೀತಾ ಕುಲಕರ್ಣಿ ಸೇರಿದಂತೆ ಮತ್ತೀತರರಿದ್ದರು.