ಉಡುಪಿ ವೀಡಿಯೋ ಪ್ರಕರಣ ಎಸ್‌ಐಟಿ ತನಿಖೆಗೆ ನಕಾರ

(ಸಂಜೆವಾಣಿ ಪ್ರತಿನಿಧಿಯಿಂದ)
ಇಂದು ಬೆಳಿಗ್ಗೆ ಮಂಗಳೂರು ಮತ್ತು ಉಡುಪಿ ಜಿಲ್ಲೆಗಳಿಗೆ ಭೇಟಿ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು. ಕಾಲೇಜಿನಲ್ಲಿ ನಡೆದ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿನಿಯರೊಂದಿಗೆ ಸಮಾಲೋಚನೆ ನಡೆಸುತ್ತಿರುವುದು. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಸ್ಥಳೀಯ ಮುಖಂಡರು ಇದ್ದಾರೆ.

ಮಂಗಳೂರು,ಆ.೧:ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿರುವ ಉಡುಪಿಯ ಅರೆ ವೈದ್ಯಕೀಯ ಕಾಲೇಜಿನ ಶೌಚಾಲಯದಲ್ಲಿ ನಡೆದ ನಗ್ನ ವೀಡಿಯೊ ಚಿತ್ರೀಕರಿಸಿದ ಪ್ರಕರಣವನ್ನು ಎನ್‌ಐಟಿ ತನಿಖೆಗೆ ವಹಿಸುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸ್ವಯಂ ಹೇಳಿಕೆ ಪ್ರಕರಣ ದಾಖಲಿಸಿಕೊಂಡು ಎಫ್‌ಐಆರ್ ಆಗಿದೆ. ಸಿವೈಡಸ್ಪಿ ಮಟ್ಟದ ಅಧಿಕಾರಿ ತನಿಖೆ ಮಾಡುತ್ತಿದ್ದಾರೆ. ಹೀಗಾಗಿ ಈ ಪ್ರಕರಣವನ್ನು ಎನ್‌ಐಟಿಗೆ ವಹಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ಈ ಪ್ರಕರಣ ಕುರಿತು ಸಮಗ್ರ ತನಿಖೆ ನಡೆಸುವಂತೆ ಪ್ರತಿಪಕ್ಷ ಬಿಜೆಪಿ ಹಾಗೂ ಮಹಿಳಾ ಸಂಘಟನೆಯಿಂದವ್ಯಾಪಕ ಒತ್ತಡ ಬಂದಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯಿಂದ ಈ ಹೇಳಿಕೆ ಹೊರ ಬಿದ್ದಿದೆ.
ಮಂಗಳೂರು ವಿಮಾನನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆಮಾತನಾಡಿದ ಅವರು, ಕೇಂದ್ರ ಮಹಿಳಾ ಆಯೋಗದ ಸದಸ್ಯರು ಉಡುಪಿ ಕಾಲೇಝಿಗೆ ಭೇಟಿ ಕೊಟ್ಟು ಪರಿಶೀಲಿಸಿದ ವೇಳೆ ಶೌಚಾಲಯದಲ್ಲಿ ಕ್ಯಾಮರಾ ಇರಲಿಲ್ಲ ಎಂಬುದಾಗಿಹೇಳಿದ್ದಾರೆ.ಈ ಬಗ್ಗೆ ತನಿಖೆ ನಡೆಸಿ ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದರು.
ಗೃಹ ಸಚಿವ ಪರಮೇಶ್ವರ್‌ರವರು ಈ ಪ್ರಕರಣವನ್ನು ಮಕ್ಕಳಾಟ ಎಂದು ಹೇಳಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಮಕ್ಕಳಾಟವಾಗಿದ್ದರೆ ಪ್ರಕರಣ ದಾಖಲಾಗುತ್ತಿರಲಿಲ್ಲ. ತಮಾಷೆ ಮಾಡಿರಬಹುದು ಎಂದಿರಬಹುದು. ಎಫ್‌ಐಆರ್ ದಾಖಲಾಗಿ ನ್ಯಾಯಾಲರಕ್ಕೆ ಸಲ್ಲಿಸಲಾಗಿದೆ ಎಂದು ಹೇಳಿದರು.
ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಸಿಬಿಐ ನ್ಯಾಯಾಲಯದಲ್ಲಿ ಇತ್ಯರ್ಥವಾಗಿದ್ದು, ಈ ಕುರಿತು ಮೇಲ್ಮನವಿ ಸಲ್ಲಿಸುವ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಪೋಷಕರು ಮತ್ತು ಹೋರಾಟಗಾರರು ಈ ಪ್ರಕರಣ ಕುರಿತು ಮರುತನಿಖೆಗೆ ಒತ್ತಾಯಿಸಿದ್ದಾರೆ. ಕಾನೂನಿನ ಪ್ರಕಾರ ಉಚ್ಛ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಬೇಕಾಗುತ್ತದೆ ಎಂದರು.
ಅಧಿಕಾರಿಗಳಿಂದ ಲೋಪವಾಗಿದೆ ಎಂದು ತೀರ್ಪಿನಲ್ಲಿ ಉಲ್ಲೇಖಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ತೀರ್ಪು ಬಂದ ನಂತರ ಮೇಲ್ಮನವಿ ಸಲ್ಲಿಸಲುಅವಕಾಶವಿದ್ದರೆ ಸಲ್ಲಿಸಲಾಗುವುದು ಎಂದು ಉತ್ತರಿಸಿದರು.
ನೈತಿಕ ಪೊಲೀಸ್ ಯಾರೇ ಎಸಗಿದ್ದರೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ. ಯಾರೂ ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದು ಎಂದು ಹೇಳಿದರು.
ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರ ಅಥವಾ ವ್ಯಕ್ತಿಯ ವಿರುದ್ಧವಾಗಿ ಸುಳ್ಳು ಸುದ್ದಿಗಳನ್ನು ಹಬ್ಬಿಸಿದರೆ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.
ಕಸ್ತೂರಿರಂಗನ್ ವರದಿ ಬಗ್ಗೆ ಕೇಂದ್ರ ಸರ್ಕಾರ ತೀರ್ಮಾನ ಕೈಗೊಳ್ಳಬೇಕಿದೆ. ಪರಿಸರ ಸಂರಕ್ಷಣೆ ವಿಚಾರದಲ್ಲಿ ಸರ್ಕಾರ ಹಿಂದೆ ಬೀಳುವುದಿಲ್ಲ ಎಂದರು. ಬಿಟ್ ಕಾಯಿನ್ ಪ್ರಕರಣ ಕುರಿತು ಎಸ್‌ಐಟಿ ತನಿಖೆ ನಡೆಸುತ್ತಿದೆ ಎಂದರು.

ಬಿಜೆಪಿ ಸರ್ಕಾರದ ಅವಧಿಯಲ್ಲೇ ಸ್ಥಗಿತ
ಬಿಜೆಪಿ ಸರ್ಕಾರದ ಅವಧಿಯಲ್ಲೇ ಆಂಧ್ರಪ್ರದೇಶದ ತಿರುಪತಿಗೆ ನಂದಿನಿ ತುಪ್ಪ ಪೂರೈಕೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು ತುಪ್ಪ ಸರಬರಾಜು ಸ್ಥಗಿತಗೊಂಡಿರುವುದು ಇಂದು ನಿನ್ನೆಯ ವಿಚಾರವಲ್ಲ, ಒಂದೂವರೆ ವರ್ಷದ ಹಿಂದೆಯೇ ಸ್ಥಿಗಿತಗೊಂಡಿದೆ ಎಂದು ಸ್ಪಷ್ಟಪಡಿಸಿದರು.
ಈ ಕುರಿತು ಬಿಜೆಪಿ ಸಂಸದ ಕಟೀಲ್ ಅವರು ಹೇಳಿಕೆ ನೀಡಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ಈ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಹಿಂದೂ ಧಾರ್ಮಿಕ ಶೃದ್ಧಾ ಭಕ್ತಿಯ ವಿರೋಧಿಯೇ ಅಥವಾ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಅವರು ಮಾತ್ರ ಹಿಂದೂ ವಿರೋಧಿಯೋ ಎಂದು ಪ್ರಶ್ನಿಸಿದರು.
ನಮಗೆ ಜನರ ಧಾರ್ಮಿಕ ನಂಬಿಕೆಯ ಜತೆಗೆ ಹೈನುಗಾರರ ಬದುಕು ಮುಖ್ಯವಾಗಿದೆ. ಹೀಗಾಗಿ, ನಾಡಿನ ರೈತರ ಹಿತದೃಷ್ಟಿಯಿಂದ ನಾವು ಕೇಳುವ ದರ ನೀಡಲು ತಿರುಪತಿ ದೇವಾಲಯದ ಆಡಳಿತ ಮಂಡಳಿ ಒಪ್ಪಿದರೆ ನಂದಿನಿ ತುಪ್ಪ ಪೂರೈಸಲು ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದರು.