ಉಡುಪಿ ಜಿ.ಪಂ. ಸಿಇಒ ನವೀನ್ ಭಟ್ ವರ್ಗಾವಣೆ

ಉಡುಪಿ, ಮೇ ೬- ಉಡುಪಿ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ)ಯಾಗಿ ಸೇವೆ ಸಲ್ಲಿಸುತ್ತಿದ್ದ ಡಾ.ನವೀನ್ ಭಟ್ ವೈ. ಅವರನ್ನು ಇದೀಗ ವರ್ಗಾಯಿಸಲಾಗಿದೆ. ನವೀನ್ ಅವರ ಸ್ಥಾನಕ್ಕೆ ಈಗ ಹೊಸದಿಲ್ಲಿಯಲ್ಲಿಯ ಕರ್ನಾಟಕ ಭವನದಲ್ಲಿದ್ದ ಪ್ರಸನ್ನ ಎಚ್. ಅವರನ್ನು ನೂತನ ಸಿಇಒ ಆಗಿ ನೇಮಕ ಮಾಡಲಾಗಿದೆ.
೨೦೨೦ರ ಅ.೫ರಂದು ಉಡುಪಿ ಸಿಇಒ ಆಗಿ ಅಧಿಕಾರ ಸ್ವೀಕರಿಸಿದ್ದ ೨೦೧೭ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿರುವ ೩೦ರ ಹರೆಯದ ನವೀನ್ ಭಟ್, ದಕ್ಷಿಣ ಕನ್ನಡದ ಬಂಟ್ವಾಳದವರಾದರೂ ಮೂಲತ: ಕಾಪು ತಾಲೂಕಿನ ಎಲ್ಲೂರಿನವರು. ತಮ್ಮ ಮೊದಲ ಪೋಸ್ಟಿಂಗ್ ಆಗಿ ಹಾಸನ ಉಪವಿಭಾಗದಲ್ಲಿ ಉಪ ವಿಭಾಗಾಧಿಕಾರಿಯಾಗಿ ೨೦೧೯ರ ಅಕ್ಟೋಬರ್‌ನಿಂದ ಕರ್ತವ್ಯ ನಿರ್ವಹಿಸಿದ್ದರು. ತಮ್ಮ ಹುಟ್ಟೂರಿನಲ್ಲಿ ೧೯ ತಿಂಗಳು ಸೇವೆ ಸಲ್ಲಿಸಿದ ಡಾ. ಭಟ್‌ರನ್ನು ಇದೀಗ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್ಸಾರ್ಟಿಸಿ) ನಿರ್ದೇಶಕರಾಗಿ ನಿಯುಕ್ತಿಗೊಳಿಸಲಾಗಿದೆ. ಸಿಇಒ ಆಗಿ ಅವರು ತ್ಯಾಜ್ಯ ನಿರ್ವಹಣೆ ಹಾಗೂ ನರೇಗಾ ಯೋಜನೆಗಳನ್ನು ಜಿಲ್ಲೆಯಲ್ಲಿ ಅತ್ಯುತ್ತಮ ರೀತಿಯಲ್ಲಿ ಅನುಷ್ಠಾನಗೊಳಿಸಿದ್ದರು. ಡಾ.ನವೀನ್ ಭಟ್ ಅವರ ಸ್ಥಾನಕ್ಕೆ ಸದ್ಯ ಹೊಸದಿಲ್ಲಿಯ ಕರ್ನಾಟಕ ಭವನದಲ್ಲಿ ಡೆಪ್ಯುಟಿ ರೆಸಿಡೆಂಟ್ ಕಮಿಷನರ್ ಆಗಿ ಕಾರ್ಯನಿರ್ವಹಿಸುತ್ತಿರುವ ಪ್ರಸನ್ನ ಎಚ್. ಅವರನ್ನು ನಿಯುಕ್ತಿಗೊಳಿಸಲಾಗಿದೆ. ೨೦೦೮ರ ಕೆಎಎಸ್ ಅಧಿಕಾರಿ ಯಾಗಿರುವ ಪ್ರಸನ್ನ ಎಚ್. ಅವರು ೨೦೧೭ರಲ್ಲಿ ಐಎಎಸ್ ಆಗಿ ಭಡ್ತಿ ಹೊಂದಿದ್ದರು. ಚಿಕ್ಕಮಗಳೂರು ಜಿಲ್ಲೆ ಕಬ್ಬಿಗನಹಳ್ಳಿಯವರಾದ ಪ್ರಸನ್ನ ಎಚ್. ೧೯೮೧ರಲ್ಲಿ ಜನಿಸಿದ್ದರು. ಅವರು ಪುತ್ತೂರು ಹಾಗೂ ಬೀದರ್ ಜಿಲ್ಲೆ ಬಸವಕಲ್ಯಾಣದ ಉಪ ವಿಭಾಗಾಧಿಕಾರಿಯಾಗಿ, ಕೊಡಗಿನ ಎಡಿಸಿಯಾಗಿ ಹಾಗೂ ಮಂಗಳೂರು ಎಂಸಿಸಿಯ ಕಮಿಷನರ್ ಆಗಿ ಸೇವೆ ಸಲ್ಲಿಸಿದ್ದರು.