ಉಡುಪಿ ಜಿಲ್ಲೆ ಪ್ರವೇಶಿಸಿದ ಈಡಿಗ – ಬಿಲ್ಲವ ಐತಿಹಾಸಿಕ ಪಾದಯಾತ್ರೆ

ಕಲಬುರಗಿ :ಜ.8:ಜಿಲ್ಲೆಯ ಚಿತಾಪೂರ ತಾಲೂಕು ಕರದಾಳು ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಪೂಜ್ಯಶ್ರೀಗಳಾದ ಡಾ. ಪ್ರಣವಾನಂದ ಶ್ರೀಗಳ ನೇತೃತ್ವದಲ್ಲಿ ಮಂಗಳೂರಿನ ಕುದ್ರೋಳಿ ಗೋಕರ್ಣಾಥೇಶ್ವರ ಕ್ಷೇತ್ರದಿಂದ ಪ್ರಾರಂಭಿಸಿದ ಐತಿಹಾಸಿಕ ಪಾದಯಾತ್ರೆಯು ಸುರತ್ಕಲ್ – ಕುಳಾಯಿ – ಮೂಲ್ಕಿ ದಾರಿಯಾಗಿ ಹೆಜಮಾಡಿಗೆ ಆಗಮಿಸುವುದರೊಂದಿಗೆ ಉಡುಪಿ ಜಿಲ್ಲೆಯನ್ನು ಪ್ರವೇಶ ಮಾಡಿತು ಎಂದು ಕಲ್ಯಾಣ ಕರ್ನಾಟಕ ಈಡಿಗ ಹೋರಾಟ ಸಮಿತಿಯು ತಿಳಿಸಿದೆ ಉಡುಪಿ ಜಿಲ್ಲೆ ಗಡಿ ಭಾಗದಲ್ಲಿರುವ ಹೆಜಮಾಡಿಗೆ ಪಾದಯಾತ್ರೆ ಆಗಮಿಸಿದಾಗ ನೂರಾರು ಸಂಖ್ಯೆಯ ಸಮಾಜ ಬಾಂಧವರು ಪಾದಯಾತ್ರೆಯನ್ನು ಸ್ವಾಗತಿಸಿದರು ನಂತರ ನಡೆದ ಜಾಗೃತಿ ಸಭೆಯಲ್ಲಿ ಮಾಜಿ ಸಚಿವರು ಮತ್ತು ಸಮಾಜದ ಮುಖಂಡರಾದ ಶ್ರೀ ವಿನಯ್ ಕುಮಾರ್ ಸೊರಕೆ ಮತ್ತು ಬಿಲ್ಲವ ರಾಷ್ಟ್ರೀಯ ಮಹಾ ಮಂಡಳಿಯ ಅಧ್ಯಕ್ಷರಾದ ಶ್ರೀ ರಾಜಶೇಖರ್ ಕೋಟ್ಯಾನ್ ರವರು ಶೀಗಳ ಈ ಪಾದಯಾತ್ರೆಗಯಲ್ಲಿ ಭಾಗವಹಿಸಿ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿ ಈಡಿಗರು ಸೇರಿದಂತೆ 26 ಪಂಗಡಗಳ ಬೇಡಿಕೆಗಳನ್ನು ಈಡೇರಿಸುವಂತೆ ಸರಕಾರದ ಮೇಲೆ ಒತ್ತಡ ತರಲು ಈ ಐತಿಹಾಸಿಕ 658 ಕಿಲೋಮೀಟರ್ ಪಾದಯಾತ್ರೆ ನಡೆಯುತ್ತಿದೆ. ಇದಕ್ಕೆ ಸಮಾಜ ಬಾಂಧವರು ಪಕ್ಷಾತೀತವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಒಗ್ಗಟ್ಟನ್ನು ಪ್ರದರ್ಶಿಸಬೇಕು ಎಂದು ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ ಅವರು ವಿನಂತಿಸಿದರು. ಅಖಿಲ ಭಾರತ ಬಿಲ್ಲವ ಯೂನಿಯನ್ ಅಧ್ಯಕ್ಷರಾದ ರಾಜಶೇಖರ ಕೋಟ್ಯಾನ್ ಅವರು ಉಪಸ್ಥಿತರಿದ್ದು ಪಾದಯಾತ್ರೆಗೆ ಪೂರ್ಣ ಬೆಂಬಲ ನೀಡುವುದಾಗಿ ಘೋಷಿಸಿದರು.
ಜ 7 ರಂದು ಮುಂಜಾನೆ ಮಂಗಳೂರಿನ ಕುಳಾಯಿಂದ ಪ್ರಾರಂಭವಾದ ಪಾದಯಾತ್ರೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಉಪಹಾರ ಸೇವಿಸಿ ಮಧ್ಯಾಹ್ನ ಸಮಯಕ್ಕೆ ಮುಲ್ಕಿ ತಲುಪಿ, ಮುಲ್ಕಿಯ ಬಿಲ್ಲವ ಸಂಘದಲ್ಲಿ ಜಾಗೃತಿ ಸಭೆ ಸೇರಿ ಪೂಜ್ಯರು ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದರು. ಅನಂತರ ಪಾದಯಾತ್ರೆ ಉಡುಪಿ ಜಿಲ್ಲೆಯ ಹೆಜಮಾಡಿ ತಲುಪಿ ಹೆಜಮಾಡಿ ಬಿಲ್ಲವ ಸಂಘದಲ್ಲಿ ವಾಸ್ತವ್ಯ ಹೂಡಲಾಯಿತು.
ಈ ಸಮಯದಲ್ಲಿ ಪಾದಯಾತ್ರೆಯ ಸಮಿತಿ ಅಧ್ಯಕ್ಷರಾದ ಶ್ರೀ ಜಿತೇಂದ್ರ ಸುವರ್ಣರವರು, ಬಿಲ್ಲವ ಸಂಘದ ಅಧ್ಯಕ್ಷರಾದ ಲೋಕೇಶ್ ಅಮಿನ್ , ಸಂಚಾಲಕರಾದ ಶ್ರೀ ಬಿ ಎಚ್ ಮಂಚೇಗೌಡರ್,ಪಾದಯಾತ್ರೆಯ ಉಡುಪಿ ಜಿಲ್ಲಾಧ್ಯಕ್ಷರಾದ ಶ್ರೀ ರಾಘವೇಂದ್ರ ಆಮಿ ನ್ ಉಪಸ್ಥಿತರಿದ್ದರು. ಸಂಚಾಲಕರು ವಿಶು ಕುಮಾರ್ ಪೂಜಾರಿ, ಶ್ರೀ ಸಂತೋಷ್ ,ಪೆರಂಪಳ್ಳಿ ಮತ್ತು ಅನೇಕ ಕುಲಬಾಂಧವರು ಮತ್ತು ಪಾದಯಾತ್ರೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಉತ್ತರಕರ್ನಾಟಕದಿಂದ ಹರಿದು ಬಂದ ಜನ ಸಾಗರ

ಐತಿಹಾಸಿಕ ಪಾದಯಾತ್ರೆಯಲ್ಲಿ ಉತ್ತರ ಕರ್ನಾಟಕದಿಂದ ಅಪಾರ ಸಂಖ್ಯೆಯ ಸಮುದಾಯದ ಜನರು ಭಾಗವಹಿಸಿ ಒಗ್ಗಟ್ಟು ಪ್ರದರ್ಶಿಸಿದರು. ಕಲ್ಯಾಣ ಕರ್ನಾಟಕ ಭಾಗದ ನಾಯಕರಾದ ನಿತಿನ್ ಗುತ್ತೇದಾರ್, ಬಾಲರಾಜ್ ಗುತ್ತೇದಾರ್,ಉಪಾಧ್ಯಕ್ಷರಾದ ಮಹಾದೇವ ಗುತ್ತೇದಾರ್, ವೆಂಕಟೇಶ್ ಕಡೆಚೂರ್, ಅಳಂದದ ಕುಪೇಂದ್ರ ಗುತ್ತೇದಾರ್, ಚಿತ್ತಾಪುರದ ವಿನೋದ್ ಗುತ್ತೇದಾರ್, ಸುರೇಶ್ ಗುತ್ತೇದಾರ್,ರಾಯಚೂರು ರಾಘವೇಂದ್ರ ಗೌಡ, ರಾಜೇಶ್ ದತ್ತು ಗುತ್ತೇದಾರ್, ಅಂಬಯ್ಯ ಗುತ್ತೇದಾರ್, ತಿಮ್ಮಪ್ಪ ಗಂಗಾವತಿ ಪ್ರವೀಣ್ ಜತ್ತನ್ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಐತಿಹಾಸಿಕ ಪಾದಯಾತ್ರೆಯೂ ಭಾನುವಾರ ಉಡುಪಿ ಕಡೆಗೆ ಸಂಚರಿಸಲಿದ್ದು ಉಡುಪಿ ಬಿಲ್ಲವ ಸಂಘದ ನೇತೃತ್ವದಲ್ಲಿ ಸ್ವಾಗತಕ್ಕೆ ವ್ಯಾಪಕ ಸಿದ್ಧತೆಯನ್ನು ನಡೆಸಲಾಗಿದೆ.
ಐತಿಹಾಸಿಕ ಪಾದಯಾತ್ರೆಯೂ 658 ಕಿಲೋಮೀಟರ್ ಕ್ರಮಿಸಲಿದ್ದು ಬೆಂಗಳೂರಿನಲ್ಲಿ ಫೆಬ್ರವರಿ 14ರಂದು ಸಮಾಪನಗೊಳ್ಳಲಿದೆ. ಬ್ರಹ್ಮಶ್ರೀ ನಾರಾಯಣ ಗುರು ನಿಗಮದ ಘೋಷಣೆ ಮಾಡಿದ ಮುಖ್ಯಮಂತ್ರಿಗಳು ಕೂಡಲೇ ಅಧಿಸೂಚನೆ ಮತ್ತು ಗೆಜೆಟ್ ಪ್ರಕಟಣೆ ನೀಡಬೇಕು ಬಜೆಟ್ ನಲ್ಲಿ ಎಷ್ಟು ಹಣ ಮಂಜೂರಾತಿ ಮಾಡುತ್ತೇವೆ ಎಂಬುದನ್ನು ಪ್ರಕಟಿಸಬೇಕು ಉದ್ದೇಶಿತ ನಿಗಮಕ್ಕೆ ಅಧ್ಯಕ್ಷರು ಮತ್ತು ನಿರ್ದೇಶಕರನ್ನು ನೇಮಕ ಮಾಡುವ ಪ್ರಕ್ರಿಯೆಯನ್ನು ಕೂಡಲೇ ಆರಂಭಿಸಬೇಕು ನಿಗಮಕ್ಕೆ 500 ಕೋಟಿ ರೂಪಾಯಿ ನೀಡುವಂತೆ ಒತ್ತಾಯಿಸಲಾಗಿದ್ದು ಉಡುಪಿ ಮಂಗಳೂರು ಜಿಲ್ಲೆಗಳಲ್ಲಿ ಇರುವಂತೆ ಕುಲಕಸುಬು ಸೇಂದಿ ವೃತ್ತಿಯನ್ನು ರಾಜ್ಯದ ಇತರ ಜಿಲ್ಲೆಗಳಲ್ಲಿ ಆರಂಭಿಸಲು ನಿಷೇಧ ಹಿಂತೆಗೆದು ಅನುಮತಿ ಕೂಡಲೇ ನೀಡಬೇಕು. ಈಡಿಗ ಬಿಲ್ಲವ ನಾಮಧಾರಿ ಸೇರಿದಂತೆ 26 ಪಂಗಡಗಳ ಆರ್ಥಿಕ ಸಾಮಾಜಿಕ ಶೈಕ್ಷಣಿಕ ಅಭಿವೃದ್ಧಿಗೆ ಸರಕಾರವು ತಕ್ಷಣ ಸ್ಪಂದನೆ ಮಾಡಿ ಅಧಿಕೃತ ಸೂಚನೆಯನ್ನು ಹೊರಡಿಸಿ ಹಿಂದುಳಿದ ಈ ಸಮುದಾಯದ ಕಲ್ಯಾಣಕ್ಕೆ ಒತ್ತು ನೀಡಬೇಕು ಎಂದು ಹೋರಾಟ ಸಮಿತಿಯ ಅಧ್ಯಕ್ಷರಾದ ಸತೀಶ್ ವಿ ಗುತ್ತೇದಾರ್ ಉಪಾಧ್ಯಕ್ಷರಾದ ಮಹಾದೇವ ಗುತ್ತೇದಾರ್ ಮತ್ತು ಕಾರ್ಯದರ್ಶಿ ವೆಂಕಟೇಶ ಕಡೇಚೂರ್ ಅವರು ಒತ್ತಾಯಿಸಿದ್ದಾರೆ.
ಪಾದಯಾತ್ರೆಯು ಉಡುಪಿಯಿಂದ ಕುಂದಾಪುರ ಸಿದ್ದಾಪುರ ತೀರ್ಥಹಳ್ಳಿ ಶಿವಮೊಗ್ಗ ದಾರಿಯಾಗಿ ಸಂಚರಿಸುವಾಗ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸ್ವಾಗತವನ್ನು ಕೋರುವುದಲ್ಲದೆ ಜಾಗೃತಿ ಸಭೆಗಳಲ್ಲಿ ಭಾಗವಹಿಸಬೇಕು ಎಂದು ಪ್ರಕಟಣೆಯಲ್ಲಿ ಮನವಿ ಮಾಡಲಾಗಿದೆ.