ಉಡುಪಿ ಜಿಲ್ಲಾದ್ಯಂತ ಮುಂದುವರೆದ ಭಾರೀ ಮಳೆ: ೧೦.೩೯ ಲಕ್ಷ ರೂ. ನಷ್ಟ

ಉಡುಪಿ, ಜು.೧೮- ಉಡುಪಿ ಜಿಲ್ಲೆಯಾದ್ಯಂತ ಭಾರೀ ಮಳೆ ಮುಂದುವರೆದಿದ್ದು, ಕಳೆದ ರಾತ್ರಿಯಿಂದ ಸುರಿಯುತ್ತಿರುವ ಗಾಳಿಮಳೆ ಯಿಂದ ಜಿಲ್ಲೆಯ ಒಟ್ಟು 39ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿ ಸುಮಾರು ೧೦.೩೯ಲಕ್ಷ ರೂ. ನಷ್ಟ ಉಂಟಾಗಿದೆ.
ಕಳೆದ ೨೪ಗಂಟೆ ಅವಧಿಯಲ್ಲಿ ಜಿಲ್ಲೆಯಲ್ಲಿ ಸರಾಸರಿ ೯೦.೦ಮಿ.ಮೀ. ಮಳೆ ಯಾಗಿದ್ದು, ಉಡುಪಿ-೭೭.೦ ಮಿ.ಮೀ., ಬ್ರಹ್ಮಾವರ- ೭೩.೪ಮಿ.ಮೀ., ಕಾಪು- ೯೪.೩ಮಿ.ಮೀ., ಕುಂದಾಪುರ- ೭೧.೨ಮಿ.ಮೀ., ಬೈಂದೂರು- ೧೦೦.೧ ಮಿ.ಮೀ., ಕಾರ್ಕಳ- ೧೦೫.೬ಮಿ.ಮೀ.,  ಹೆಬ್ರಿ- ೧೦೭.೭ಮಿ.ಮೀ. ಮಳೆ ಯಾಗಿರುವ ಬಗ್ಗೆ ವರದಿಯಾಗಿದೆ. ಕಾಪು ತಾಲೂಕಿನ ಎಲ್ಲೂರು ಪ್ರಭಾಕರ ಆಚಾರ್ಯ ಎಂಬವರ ಮನೆ ಸಂಪೂರ್ಣ ಕುಸಿದು ಬಿದ್ದು ೨,೦೦,೦೦೦ರೂ. ಮತ್ತು ಬೈಂದೂರು ತಾಲೂಕಿನ ಯಡ್ತರೆಯ ನರಸಿಂಹ ಎಂಬವವರ ಮನೆ ಸಂಪೂರ್ಣ ಹಾನಿಯಾಗಿ ಒಂದು ಲಕ್ಷ ರೂ. ನಷ್ಟವಾಗಿದೆ. ಬ್ರಹ್ಮಾವರ ತಾಲೂಕಿನ ಶಿರಿಯಾಳ, ತೋಟತಟ್ಟು ಪಡುಕೆರೆಯಲ್ಲಿ ಮೂರು ಮನೆಗಳಿಗೆ ಹಾನಿಯಾಗಿ ಒಟ್ಟು ೫೦ಸಾವಿರ ರೂ., ಕಾಪು ತಾಲೂಕಿನ ಪಾದೆ ಬೆಟ್ಟು, ಮಲ್ಲಾರು, ಊಳಿಯಾರಗೋಳಿಯಲ್ಲಿ ಮೂರು ಮನೆಗಳಿಗೆ ಹಾನಿ ಯಾಗಿ ಒಟ್ಟು ೯೦ಸಾವಿರ ರೂ., ಬೈಂದೂರು ತಾಲೂಕಿನ ನಾವುಂದದಲ್ಲಿ ಒಂದು ಮನೆಗೆ ೧೫,೦೦೦ ರೂ. ಹಾಗೂ ಹೇರೂರು, ಯಳಜಿತ್ ಎಂಬಲ್ಲಿ ಮೂರು ಮನೆಯ ದನದ ಕೊಟ್ಟಿಗೆ ಸಂಪೂರ್ಣ ಹಾನಿ ಒಟ್ಟು ೩೫ಸಾವಿರ ರೂ. ನಷ್ಟ ಉಂಟಾಗಿದೆ. ಬೈಂದೂರು ತಾಲೂಕಿನ ಹಲವು ಪ್ರದೇಶಗಳು ಮತ್ತೆ ಜಲಾವೃತಗೊಂಡಿದ್ದು, ಅಪಾರ ಹಾನಿ ಸಂಭವಿಸಿದೆ. ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಯುವ ಉದ್ಯಮಿ ನಿತಿನ್ ನಾರಾಯಣ ಭೇಟಿ ನೀಡಿ, ನೆರೆಪೀಡಿತ ಪ್ರದೇಶಗಳಾದ ನಾವುಂದ, ಬಡಾಕೆರೆ, ಸಾಲ್ಬುಡ, ಹಳಗೇರಿ ಹಾಗೂ ನೇರಳಕಟ್ಟೆ ಗ್ರಾಮಗಳ ೧೫೦ಕ್ಕೂ ಅಧಿಕ ಕುಟುಂಬ ಗಳಿಗೆ ದಿನಸಿ ಕಿಟ್‌ಗಳನ್ನು ವಿತರಿಸಿದರು. ನೆರೆಯ ಸಂದರ್ಭ ದೋಣಿಗಳಲ್ಲಿ ಜನ ಹಾಗೂ ಜಾನುವಾರು ರಕ್ಷಣೆಯಲ್ಲಿ ಜೀವದ ಹಂಗು ತೊರೆದು ಕೆಲಸ ಮಾಡುತ್ತಿರುವ ಸ್ವಯಂಸೇವಕರಿಗೆ ಉತ್ತಮ ಗುಣಮಟ್ಟದ ಲೈಫ್ ಜಾಕೆಟ್ ಗಳನ್ನು ನೀಡಿದರು. ಕಾರ್ಕಳ ತಾಲೂಕಿನ ನಿಟ್ಟೆಯಲ್ಲಿ ಒಂದು ಮನೆಗೆ ಹಾನಿಯಾಗಿ ೫೦,೦೦೦ರೂ. ಕುಂದಾಪುರ ತಾಲೂಕಿನ ಕಾವ್ರಾಡಿ, ಜಪ್ತಿ, ಬಸ್ರೂರು, ಹೊಸಾಡು, ಉಳ್ಳೂರು, ಹಕ್ಲಾಡಿ, ಚಿತ್ತೂರು, ವಕ್ವಾಡಿ, ಕೋಟೇಶ್ವರ, ಕುಂಭಾಶಿ, ಅಮಾಸೆಬೈಲು, ಬೇಳೂರು, ತ್ರಾಸಿ, ಅಂಪಾರು, ಹೊಸಾಡು, ಶಂಕರನಾರಾಯಣ, ಕುಂದಬಾ ರಂದಾಡಿ, ಮಚ್ಚಟ್ಟು,, ನೂಜಾಡಿ, ಹರ್ಕೂರು ಗ್ರಾಮಗಳಲ್ಲಿ ೨೬ ಮನೆಗಳಿಗೆ ಹಾನಿಯಾಗಿ ಒಟ್ಟು ೯.೯೦ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ತಾಲೂಕು ಕಚೇರಿ ಮೂಲಗಳು ತಿಳಿಸಿವೆ.