ಉಡುಪಿಯನ್ನು ಮಕ್ಕಳಸ್ನೇಹಿ ಜಿಲ್ಲೆಯಾಗಿಸಿ: ಡಿಸಿ ಜಗದೀಶ್‌

ಉಡುಪಿ, ನ.1೪- ಜಿಲ್ಲೆಯಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆಯನ್ನು ಸಮರ್ಪಕವಾಗಿ ಅನುಷ್ಠಾನ ಮಾಡುವುದರ ಮೂಲಕ ಉಡುಪಿ ಜಿಲ್ಲೆಯನ್ನು ಮಕ್ಕಳ ಸ್ನೇಹಿ ಜಿಲ್ಲೆಯನ್ನಾಗಿ ರೂಪಿಸಬೇಕು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ.

ಶುಕ್ರವಾರ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಉಡುಪಿ, ಜಿಲ್ಲಾ ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ, ಮಕ್ಕಳ ದಿನಾಚರಣೆ ಮತ್ತು ಚೈಲ್ಡ್ ಲೈನ್ ಸೇ ದೋಸ್ತೀ ಸಪ್ತಾಹ ಅಂಗವಾಗಿ, ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ, ಭಿಕ್ಷಾಟನೆ ನಿರ್ಮೂಲನೆ ಮತ್ತು ಚೈಲ್ಡ್ ಲೈನ್ ಸೇವೆಗಳ ಬಗೆಗಿನ ಮಾಹಿತಿ ಅಭಿಯಾನ ಜಾಥಾಗೆ ಚಾಲೆ ನೀಡಿ ಅವರು ಮಾತನಾಡುತಿದ್ದರು. ಜಿಲ್ಲೆಯಲ್ಲಿರುವ ಮಕ್ಕಳು ಬಾಲ ಕಾರ್ಮಿಕ ಪದ್ಧತಿ, ಭಿಕ್ಷಾಟನೆಯಲ್ಲಿ ತೊಡಗಿ ಕೊಳ್ಳದಂತೆ ನೋಡಿಕೊಳ್ಳಬೇಕು. ಅಂತಹ ಮಕ್ಕಳು ಸಿಕ್ಕಿದಲ್ಲಿ ಅವರಿಗೆ ವಸತಿ ಶಾಲೆಗಳಲ್ಲಿ ಶಿಕ್ಷಣಕ್ಕೆ ವ್ಯವಸ್ಥೆ ಮಾಡಬೇಕು. ವಲಸೆ ಕಾರ್ಮಿಕರ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಈ ರೀತಿಯ ಪಿಡುಗುಗಳಿಗೆ ಬಲಿಯಾಗುತ್ತಿದ್ದು, ವಲಸೆ ಕಾರ್ಮಿಕ ರಿಗೆ ಈ ಕುರಿತು ಅರಿವು ಮೂಡಿಸುವಂತಹ ಕಾರ್ಯಕ್ರಮಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಯೋಜಿಸುವ ಮೂಲಕ ಜಿಲ್ಲೆಯನ್ನು ಮಕ್ಕಳ ಸ್ನೇಹಿ ಜಿಲ್ಲೆಯನ್ನಾ ಗಿಸಬೇಕು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು. ಹಿರಿಯ ಸಿವಿಲ್ ನ್ಯಾಯಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕಾವೇರಿ ಮಾತನಾಡಿ, ಕೋವಿಡ್-19ರ ಈ ಅವಧಿಯಲ್ಲಿ ಮಕ್ಕಳ ಹಕ್ಕುಗಳ ಉಲ್ಲಂಘನೆ ನಡೆಯುವ ಸಾಧ್ಯತೆಗಳಿದ್ದು, ಮಕ್ಕಳ ಹಕ್ಕುಗಳ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಮಕ್ಕಳ ಮನೆ ಬಾಗಿಲಿಗೆ ತೆರಳಿ ಅವರ ಸಮಸ್ಯೆ ಆಲಿಸಬೇಕು. ಮಕ್ಕಳ ಹಕ್ಕುಗಳ ಉಲ್ಲಂಘನೆ ಕಂಡು ಬಂದಲ್ಲಿ ಸಾರ್ವಜನಿಕರು 1098ಕ್ಕೆ ಕರೆ ಮಾಡಿ ಮಾಹಿತಿ ನೀಡಬೇಕು ಎಂದರು. ಮಕ್ಕಳ ಹಕ್ಕುಗಳ ಕುರಿತ ಪೋಸ್ಟರ್‌ನ್ನು ಜಿಲ್ಲಾಧಿಕಾರಿ ಜಿ.ಜಗದೀಶ್ ಬಿಡುಗಡೆ ಗೊಳಿಸಿದರು. ಕಾರ್ಯಕ್ರಮದಲ್ಲಿ ಉಡುಪಿ ಜಿಪಂ ಸಿಇಒ ಡಾ. ನವೀನ್ ಭಟ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಜಿಲ್ಲಾ ಕಾರ್ಮಿಕ ಅಧಿಕಾರಿ ಕುಮಾರ್, ಕಾರ್ಮಿಕ ನಿರೀಕ್ಷಕ ಪ್ರವೀಣ್ ಕುಮಾರ್, ಮಕ್ಕಳ ರಕ್ಷಣಾ ಘಟಕದ ಕಾನೂನು ಪರೀಕ್ಷಣಾಧಿಕಾರಿ ಪ್ರಭಾಕರ್ ಆಚಾರ್, ಬಿ.ಕೆ ನಾರಾಯಣ್ ಮತ್ತಿತರರು ಉಪಸ್ಥಿತರಿದ್ದರು. ಚೈಲ್ಡ್‌ಲೈನ್ ನಿರ್ದೇಶಕ ರಾಮಚಂದ್ರ ಉಪಾಧ್ಯಾಯ ಸ್ವಾಗತಿಸಿ, ಪ್ರಾಸ್ತಾವಿಕ ವಾಗಿ ಮಾತನಾಡಿ, ವಂದಿಸಿದರು.