ಉಡಿ ತುಂಬುವ ಕಾರ್ಯಕ್ರಮ

ಧಾರವಾಡ, ಆ.26: ರಾಜ್ಯ ಸರಕಾರದ ಧಾರ್ಮಿಕ ದತ್ತಿ ಇಲಾಖೆಯ ನಿರ್ದೇಶನದಂತೆ ಜಿಲ್ಲಾಡಳಿತವು ವರಮಹಾಲಕ್ಷ್ಮಿ ವ್ರತದ ನಿಮಿತ್ತ ಆಯೋಜಿಸಿರುವ, ಜಿಲ್ಲೆಯ ಅಧಿಸೂಚಿತ ದೇವಸ್ಥಾನಗಳಿಗೆ ಆಗಮಿಸುವ ಮಹಿಳೆಯರಿಗೆ ಅರಿಶಿನ ಕುಂಕುಮ ನೀಡಿ, ಬಾಗಿನ (ಉಡಿ) ತುಂಬುವ ಕಾರ್ಯಕ್ರಮಕ್ಕೆ ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಅವರು ನಗರದ ದುರ್ಗಾದೇವಿ ದೇವಸ್ಥಾನದಲ್ಲಿ ಮಹಿಳೆಯರಿಗೆ ಉಡಿತುಂಬುವ ಮೂಲಕ ಚಾಲನೆ ನೀಡಿದರು.

ಅವರು ಇಂದು ಬೆಳಿಗ್ಗೆ ನಗರದ ಪ್ರಸಿದ್ದ ಕಿಲ್ಲಾ ದುರ್ಗಾದೇವಿ ದೇವಸ್ಥಾನದಲ್ಲಿ ಜಿಲ್ಲಾಡಳಿತ, ಧಾರ್ಮಿಕ ದತ್ತಿ ಇಲಾಖೆ ಹಾಗೂ ಧಾರವಾಡ ತಾಲೂಕಾ ಆಡಳಿತ ಜಂಟಿಯಾಗಿ ವರಮಹಾಲಕ್ಷ್ಮಿ ವ್ರತದ ನಿಮಿತ್ತ ಆಯೋಜಿಸಿದ್ದ ಮಹಿಳೆಯರಿಗೆ ಉಡಿತುಂಬುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ದುರ್ಗಾದೇವಿ ದೇವಸ್ಥಾನಕ್ಕೆ ಆಗಮಿಸಿದ ಅಪರ ಜಿಲ್ಲಾಧಿಕಾರಿಗಳು, ನಾಡಿಗೆ ಉತ್ತಮ ಮಳೆ ಬೆಳೆ ಬರಲಿ, ಜನರ ಸುಖ ಸಮೃದ್ಧಿ ಹೆಚ್ಚಿಸಲಿ, ಎಲ್ಲರಿಗೂ ಸಂತೋಷದ ಬದುಕು ಕರುಣಿಸಲಿ ಎಂದು ಪ್ರಾರ್ಥಿಸಿ, ಜಿಲ್ಲಾಡಳಿತದ ಪರವಾಗಿ ದೇವಿಗೆ ಸಕಲ ಮಂಗಲಾಷ್ಟಕಗಳನ್ನು ಒಳಗೊಂಡ ಬಾಗಿನ (ಉಡಿ) ಅರ್ಪಿಸಿದರು.

ನಂತರ ಅವರು ದೇವಸ್ಥಾನಕ್ಕೆ ಆಗಮಿಸಿದ್ದ ಮಹಿಳಿಯರಿಗೆ ಕಂಕಣ ಕಟ್ಡಿ, ಅರಿಶಿನ ಕುಂಕುಮ ಹಚ್ಚಿ, ಹೂವು ತೊಡಿಸಿ, ಹಸಿರು ಬಳೆ, ಹಣ್ಣು, ಕಣ,ತಾಂಬೂಲದೊಂದಿಗೆ ಉಡಿ (ಬಾಗಿನ) ತುಂಬಿದರು.

ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರ ಮಾರ್ಗದರ್ಶನಲ್ಲಿ ಇಂದು ಜಿಲ್ಲೆಯ ವಿವಿಧ ನಗರ ಮತ್ತು ಗ್ರಾಮಗಳಲ್ಲಿ ಇರುವ ಸುಮಾರು 880 ದೇವಸ್ಥಾನಗಳಲ್ಲಿ ದೇವರ ದರ್ಶನಕ್ಕೆ ಆಗಮಿಸುವ ಎಲ್ಲ ಮಹಿಳೆಯರಿಗೆ ಆಯಾ ದೇವಸ್ಥಾನಗಳಿಂದ ಅರಿಶಿನ, ಕುಂಕುಮ, ಹಸಿರು ಬಳೆ, ಹೂವು, ಹಣ್ಣು ನೀಡಿ, ಕಣದೊಂದಿಗೆ ಉಡಿ ತುಂಬಿ ಶುಭ ಹಾರೈಸಲಾಗುತ್ತಿದೆ.

ದುರ್ಗಾದೇವಿ ದೇವಸ್ಥಾನದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಧಾರವಾಡ ತಹಸಿಲ್ದಾರ ದೊಡ್ಡಪ್ಪ ಹೂಗಾರ, ಶಿರಸ್ತೆದಾರ ಪ್ರವೀಣ ಪೂಜಾರ, ಕಂದಾಯ ನಿರೀಕ್ಷಕ ಗುರು ಸುಣಗಾರ, ಗ್ರಾಮ ಆಡಳಿತ ಅಧಿಕಾರಿ ಕರಿಯಪ್ಪ ಗುಡ್ಡದ, ಪ್ರವೀಣ ಕುಲಕರ್ಣಿ, ದುರ್ಗಾದೇವಿ ದೇವಸ್ಥಾನದ ಅರ್ಚಕರಾದ ಗಣೇಶ ಪೂಜಾರ, ಮಂಜುನಾಥ ಪೂಜಾರ ಸೇರಿದಂತೆ ಕಂದಾಯ ಇಲಾಖೆ ಸಿಬ್ಬಂದಿಗಳು, ಮಹಿಳೆಯರು, ಭಕ್ತರು ಉಪಸ್ಥಿತರಿದ್ದರು.