ಉಡಿಗಾಲ ಸಹಕಾರ ಸಂಘದಿಂದ ರೈತರಿಗೆ 2 ಕೋಟಿ ಬೆಳೆ ಸಾಲ ವಿತರಣೆ : ಶಿವಕುಮಾರ್

ಚಾಮರಾಜನಗರ, ಡಿ. 28- ಉಡಿಗಾಲ ಕೃಷಿ ಪತ್ತಿನ ಸಹಕಾರ ಸಂಘದಿಂದ ಪ್ರಸಕ್ತ ರೈತರಿಗೆ 2 ಕೋಟಿ ರೂ.ಗಳ ಬೆಳೆ ಸಾಲವನ್ನು ವಿತರಣೆ ಮಾಡಲಾಗಿದ್ದು, ರೈತರು ಸಕಾಲದಲ್ಲಿ ಸಾಲ ಮರು ಪಾವತಿ ಮಾಡಬೇಕೆಂದು ಸಂಘದ ಅಧ್ಯಕ್ಷ ಶಿವಕುಮಾರ್ ತಿಳಿಸಿದರು.
ತಾಲೂಕಿನ ಉಡಿಗಾಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರದ 2019-20ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಹಕಾರ ಸಂಘದಿಂದ ರೈತರಿಗೆ ಅನೇಕ ಸಾಲ ಸೌಲಭ್ಯಗಳನ್ನು ಕಲ್ಪಿಸಿದೆ. ಈಗಾಗಲೇ ರಿಯಾಯಿತಿ ಬಡ್ಡಿ ದರದಲ್ಲಿ ಬೆಳೆ ಸಾಲ ವಿತರಣೆಯಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ರೈತ ಸದಸ್ಯರಿಗೆ ಬೆಳೆ ಸಾಲ ಹಾಗೂ ಮದ್ಯಮಾವಧಿ ಸಾಲವನ್ನು ನೀಡಲು ಎಂಡಿಸಿಸಿ ಬ್ಯಾಂಕ್‍ಗೆ ಒಂದು ಕೋಟಿ ರೂ.ಗಳ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ.
ಮೈಸೂರು-ಚಾಮರಾಜನಗರ ಕೇಂದ್ರ ಬ್ಯಾಂಕ್ ಅಧ್ಯಕ್ಷರಾಗಿರುವ ಹರೀಶ್‍ಗೌಡರು ಮಾಧ್ಯಮಾವಧಿ ಸಾಲವಾಗಿ 50 ಲಕ್ಷ ರೂ. ಹಾಗೂ ಬೆಳೆ ಸಾಲವಾಗಿ 50 ಲಕ್ಷ ರೂ.ಗಳನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ. ಸಹಕಾರ ಸಂಘಗಳ ಅಭಿವೃದ್ದಿಯನ್ನು ಗಮನದಲ್ಲಿಟ್ಟು ಉತ್ತಮವಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಆಪೆಕ್ಸ್ ಬ್ಯಾಂಕ್ ನಿರ್ದೇಶಕರಾಗಿಯು ಸಹ ಆಯ್ಕೆಯಾಗಿದ್ದಾರೆ. ಉಡಿಗಾಲ ಪಿಎಸಿಸಿ ಬ್ಯಾಂಕ್ ರೈತ ಪರವಾಗಿ ಅವರಿಗೆ ಹೃದಯ ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದರು.
ರೈತರು ಸಹಕಾರ ಸಂಘದಿಂದ ಪಡೆದ ಸಾಲವನ್ನು ಮರು ಪಾವತಿ ಮಾಡಿದರೆ, ಬ್ಯಾಂಕ್ ಲಾಭ ಗಳಿಸಲು ಸಾಧ್ಯವಾಗುತ್ತದೆ. ಈಗಾಗಲೇ 25 ಲಕ್ಷ ರೂ.ಗಳ ಸುಸ್ತಿ ಸಾಲವಿದ್ದು, ರೈತರು ಸುಸ್ತಿ ಬಡ್ಡಿ ಸಾಲವನ್ನು ಮರುಪಾವತಿ ಮಾಡಿ, ಸರ್ಕಾರದ ಶೂನ್ಯ ಬಡ್ಡಿ ದರ ಸಾಲವನ್ನು ಪಡೆದುಕೊಳ್ಳಬೇಕು ಎಂದರು.
ಸಂಘದ ಕಾರ್ಯನಿರ್ವಾಹಕ ಅಧಿಕಾರಿ ಮಹೇಶ್ ವಾರ್ಷಿಕ ವರದಿಯನ್ನು ಓದಿ ಅನುಮೋದನೆ ಪಡೆದುಕೊಂಡರು. ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಯು.ಎಂ. ಚನ್ನಬಸಪ್ಪ, ನಿರ್ದೇಶಕರಾದ ಡಿ. ಲಿಂಗಣ್ಣ, ಮಹದೇವನಾಯಕ, ಸುರೇಶ್, ಸಾಂಬುಮೂರ್ತಿ, ಗೌರಮ್ಮ, ರತ್ನಮ್ಮ, ಬೆಳ್ಳಶೆಟ್ಟಿ, ಸಿದ್ದಶೆಟ್ಟಿ, ದೊಡ್ಡಮಾದಯ್ಯ, ಎಸ್. ಮಹೇಶ್ ಹಾಗೂ ಸಂಘದ ಸದಸ್ಯರು ಭಾಗವಹಿಸಿದ್ದರು.